ಮೈಸೂರು: ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಪರಿಣಾಮ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಮಂಗಳವಾರವೂ ಜಿಲ್ಲೆಯಲ್ಲಿ 21 ಹೊಸ ಪ್ರಕರಣ ದಾಖಲಾಗಿದೆ. ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಶೂನ್ಯಕ್ಕಿಳಿದಿದ್ದ ಸಕ್ರಿಯ ಸೋಂಕಿತರ ಸಂಖ್ಯೆ ಇದೀಗ 79ಕ್ಕೇರಿದೆ. ಮಂಗಳವಾರದ 21 ಪ್ರಕರಣಗಳಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 191ಕ್ಕೇರಿದೆ. 112 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಪ್ರವಾಸದ ಹಿನ್ನೆಲೆ: ಹೊಸ 21 ಪ್ರಕರಣಗಳಲ್ಲಿ 12 ತಮಿಳುನಾಡಿನ ಪ್ರವಾಸ ಹಿನ್ನೆಲೆ, ಇಬ್ಬರು ರಾಜಸ್ಥಾನದ ಪ್ರವಾಸ, ಮೂವರು ಪಿ-9399 ಸೋಂಕಿತರ ಪ್ರಾಥಮಿಕ ಸಂಪರ್ಕ, 3 ಕೆಎಸ್‌ಆರ್‌ಪಿ ಬೆಂಗಳೂರು, 1 ಅಂತರ ಜಿಲ್ಲಾ ಪ್ರವಾಸದ್ದಾಗಿದೆ. ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 29 ವರ್ಷದ ಸಿಐಎಸ್‌ಎಫ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. 50 ವರ್ಷದ ಗಾಯತ್ರಿಪುರಂ ಪೊಲೀಸ್ ಕ್ವಾಟ್ರಸ್‌ನಲ್ಲಿದ್ದ ಸಿಬ್ಬಂದಿಗೂ ಸೋಂಕು ತಗುಲಿದ್ದು, ಕ್ವಾಟ್ರಸ್ ಸೀಲ್‌ಡೌನ್ ಮಾಡಲಾಗಿದೆ. ದೇವರಾಜ ಮೊಹಲ್ಲಾದ ಕೊತ್ವಾಲ್ ರಾಮಯ್ಯ ರಸ್ತೆಯ 28 ವರ್ಷದ ಪುರುಷನಿಗೆ, ರಾಜಕುಮಾರ್ ರಸ್ತೆಯ 54, 28 ಹಾಗೂ 60 ವರ್ಷದ ಪುರುಷರಿಗೆ,
ರಾಘವೇಂದ್ರ ಬಡಾವಣೆಯ 79 ವರ್ಷದ ಮಹಿಳೆಗೆ ಪಾಸಿಟಿವ್ ದೃಢಪಟ್ಟಿದೆ. ಇನ್ನು ಚೆನ್ನೈನಿಂದ ವಾಪಸ್ಸಾಗಿದ್ದ ಮಾದೇಗೌಡ ಸರ್ಕಲ್ ಬಳಿಯ ನಿವಾಸಿ 29 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ತಮಿಳುನಾಡಿನಿಂದ ವಾಪಸಾಗಿದ್ದ ಹೂಟಗಳ್ಳಿ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ 23 ವರ್ಷದ ಮಹಿಳೆ, ಶ್ರೀರಾಂಪುರ 2ನೇ ಹಂತದ 8 ವರ್ಷದ ಬಾಲಕ, 10 ವರ್ಷದ ಬಾಲಕಿ, ಆರ್‌ಬಿಐ ನೋಟು ಮುದ್ರಣ ನಗರದ 39 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ವಿಜಯನಗರ ರೈಲ್ವೆ ಬಡಾವಣೆಯ 11 ವರ್ಷದ ಬಾಲಕ, 33 ವರ್ಷದ ಮಹಿಳೆ, 38 ವರ್ಷ ಪುರುಷನಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ತಮಿಳುನಾಡಿನಿಂದ ಹಿಂದಿರುಗಿದ್ದರು.
ಅಗತ್ಯ ವಸ್ತುಗಳು ಪೂರೈಕೆ: ಪಿ-9399 ಪ್ರಾಥಮಿಕ ಸಂಪರ್ಕಿತರಾದ ದಟ್ಟಗಳ್ಳಿಯ 15 ವರ್ಷದ ಬಾಲಕಿ, 20 ವರ್ಷದ ಯುವಕ ಹಾಗೂ 93 ವರ್ಷ ಪುರುಷನಿಗೆ ಸೋಂಕು ದೃಢಪಟ್ಟಿದೆ. ಜತೆಗೆ ರಾಜಸ್ಥಾನದ ಪ್ರವಾಸ ಹಿನ್ನೆಲೆ ಹೊಂದಿರುವ ಜೆ.ಸಿ.ನಗರದ 59 ವರ್ಷದ ಪೊಲೀಸ್ ಕಾನ್ಸ್ ಟೇಬಲ್, ಶಿವರಾಂಪೇಟೆಯ 32 ವರ್ಷದ ಪುರುಷನಿಗೂ ಸೋಂಕು ತಗುಲಿದೆ. ಸೋಂಕಿತರಿರುವ ಎಲ್ಲಾ ಬಡಾವಣೆಗಳನ್ನು ಸೀಲ್‌ಡೌನ್ ಮಾಡಿದ್ದು, ಅಗತ್ಯ ವಸ್ತುಗಳನ್ನು ಪೂರೈಸಲು ಪಾಲಿಕೆಯಿಂದ ವ್ಯಾಟ್ಸಪ್ ಗ್ರೂಪ್ ರಚಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ಕ್ರಮ: ನಗರದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕ ಸ್ಥಳ, ತರಕಾರಿ ಮಾರುಕಟ್ಟೆ ಸೇರಿದಂತೆ ಇತರೆ ಸ್ಥಳಗಳಲ್ಲಿ ಜನರು ಗುಂಪುಗೂಡುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತ ಪ್ರಕಾಶ್‌ಗೌಡ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿರುವ ಅವರು, ನಗರದಲ್ಲಿ ಕೋವಿಡ್-19 ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು ಸಾರ್ವಜನಿಕರು ವ್ಯಾಪಾರ ಸ್ಥಳಗಳು, ತರಕಾರಿ ಮಾರುಕಟ್ಟೆಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುತ್ತಿದ್ದಾರೆ.
ಇದರಿಂದ ಕೋವಿಡ್ 19 ಸೋಂಕು ಹರಡುವ ಸಾಧ್ಯತೆಗಳಿವೆ. ಹೀಗಾಗಿ ಇನ್ನು ಮುಂದೆ ಠಾಣಾಧಿಕಾರಿಗಳು ತಮ್ಮ ಠಾಣಾ ಸರಹದ್ದಿನಲ್ಲಿರುವ ವ್ಯಾಪಾರ ಸ್ಥಳಗಳು ಮತ್ತು ಜನದಟ್ಟಣೆ ಇರುವ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮತ್ತು ಅಂಗಡಿ ಮಾಲೀಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರದ ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.