ಮೈಸೂರು: ಜಿಲ್ಲೆಯಲ್ಲಿ ಭಾನುವಾರವೂ 18 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 169ಕ್ಕೇರಿದೆ. ಬೆಂಗಳೂರಿನಿಂದ ವಾಪಸ್ ಆಗಿರುವ ಕೆಎಸ್‌ಆರ್‌ಪಿ 3 ಪೊಲೀಸ್ ಸಿಬ್ಬಂದಿ ಸೇರಿದಂತೆ ಒಬ್ಬರು ವೈದ್ಯರಿಗೂ ಕೋವಿಡ್ 19 ಬಂದಿರುವುದು ಮತ್ತಷ್ಟು ಅತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ 112 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 57 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರವೂ ಬರೋಬ್ಬರಿ 22 ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿತ್ತು. ಭಾನುವಾರ ಶೀತಜ್ವರ ಮಾದರಿಯ ಅನಾರೋಗ್ಯ (ಐಎಲ್‌ಐ)ದಿಂದ ಬಳಲುತ್ತಿದ್ದ 65 ಮತ್ತು 64 ವರ್ಷದ ವೃದ್ಧರು, 30 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬೆಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿರುವ 50, 42, 48, 38 ವರ್ಷದ ಪುರುಷರಲ್ಲಿ ಹಾಗೂ 22 ವರ್ಷದ ಯುವಕ, 9 ವರ್ಷದ ಬಾಲಕ, 13 ವರ್ಷದ ಬಾಲಕಿ, 33 ವರ್ಷದ ಮಹಿಳೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ತಮಿಳುನಾಡಿನಿಂದ 30 ವರ್ಷದ ಪುರುಷ ಹಾಗೂ 31 ವರ್ಷದ ಮಹಿಳೆ, ಮಹಾರಾಷ್ಟ್ರದಿಂದ ಬಂದ 64 ವರ್ಷದ ವೃದ್ಧ, ಆಂಧ್ರಪ್ರದೇಶದಿಂದ ಬಂದ 56 ವರ್ಷದ ಪುರುಷರಲ್ಲಿ ಕೋವಿಡ್ 19 ಪತ್ತೆಯಾಗಿದೆ.
ಮತ್ತೂಬ್ಬ 35 ವರ್ಷದ ಪುರುಷನಲ್ಲಿ ಹೇಗೆ ಕೋವಿಡ್ 19 ಬಂದಿದೆ ಎಂದು ಪತ್ತೆ ಹಚ್ಚಲಾಗುತ್ತಿದೆ. ಇವರೆಲ್ಲರಿಗೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಈ ಹಿಂದೆ ನಗರದ ವಿವಿ ಮೊಹಲ್ಲಾದ ಒಂದು ಅಪಾರ್ಟ್ ಮೆಂಟ್, ಗೋಕುಲಂ, ಕೃಷ್ಣ ವಿಲಾಸ್ ರಸ್ತೆಗಳಲ್ಲಿಯೂ ರೋಗ ನಿವಾರಕ ಔಷಧ ಸಿಂಪಡಣೆ ಮಾಡುವ ಜತಗೆ ಸೀಲ್‌ಡೌನ್ ಮಾಡಲಾಗಿದೆ. ಈಗಾಗಲೇ ಟಿ.ಕೆ.ಲೇಔಟ್, ಇಟ್ಟಿಗೆಗೂಡು ಹಾಗೂ ಶ್ರೀರಾಂಪುರ ಬಡಾವಣೆಗಳನ್ನು ಸೀಲ್‌ಡೌನ್ ಮಾಡಲಾಗಿತ್ತು.
ವೈದ್ಯೆಗೂ ಸೋಂಕು ದೃಢ: ವೈದ್ಯೆಯೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆ, ಅವರ ಮನೆಯಿರುವ ಹಿನಕಲ್ ಬಳಿಯ ಬೆಮೆಲ್ ಲೇಔಟ್ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.