Advertisement

ಕ್ಲಾಸ್‌ ಅಲ್ಲ ಮಾಸು! : ಕಾರಿಡಾರು ಕಲಿಸಿದ ಪಾಠ

05:50 PM Apr 04, 2017 | |

ಫ‌ಸ್ಟ್‌ ರ್‍ಯಾಂಕ್‌ ರಾಜು ಥರ ಓದಿ ಓದಿ ಪುಸ್ತಕದ ಬದನೆಕಾಯಿ ಆಗಿರೋರಿಗೆ ಗುರುತಿಸಿಕೊಳ್ಳೋ ಪ್ಲೇಸ್‌ ಆದ್ರೆ ನನ್ನಂಥ
ಸಾಮಾನ್ಯ ವಿದ್ಯಾರ್ಥಿನಿಗೆ ಬೈಸಿಕೊಂಡು ಮರ್ಯಾದೆ ಕಳೆದುಕೊಳ್ಳುವ ಸ್ಥಳ. ಕ್ಲಾಸಿಲ್ಲಾ ಅಂದ್ರೆ ನಾನಿರೋದೆ ಕಾರಿಡಾರ್‌ನಲ್ಲಿ, ಮತ್ತೆಲ್ಲೂ ಅಲ್ಲ.

Advertisement

ಕಾರಿಡಾರ್‌ ಅಂದ್ರೆ ನೆನಪುಗಳ ಆಗರ. ಅಗೆದಷ್ಟೂ ಅದರ ಆಳ ವಿಸ್ತಾರವಾಗುತ್ತಲೇ ಹೋಗುತ್ತದೆ. ಆಕಾಶದಲ್ಲಿ ತಾರೆಗಳು ಹೇಗೆ ಲೆಕ್ಕಕ್ಕೆ ಸಿಗುವುದಿಲ್ಲವೋ ಹಾಗೆಯೇ ಕಾರಿಡಾರ್‌ನ ನೆನಪುಗಳೂ ಎಣಿಕೆಗೆ ಸಿಗುವುದಿಲ್ಲ. ಅಂತೆಯೇ, ಕಾರಿಡಾರ್‌ ಕತೆಗಳು ಇಲ್ಲದ ಕಾಲೇಜ್‌ ಲೈಫೇ ವೇಸ್ಟ್‌.

ಕಾರಿಡಾರ್‌ನಲ್ಲಿ ಕಾಲಿಟ್ರೆ ಸಾಕು: ಅಲ್ಲಿ ನಡೆದ ಜಗಳ, ಬೈಗುಳ, ತಂಟೆ- ತಕರಾರು, ಲೆಕ್ಚರರ್‌ ಎದುರಿಗೆ ಬಂದಾಗ ತಲೆ ತಗ್ಗಿಸಿದ್ದು, ಅವರು ಮುಂದೆ ಹೋದ ನಂತರ ಅವರ ಬಗ್ಗೆಯೇ ಕಮೆಂಟ್ಸ್‌ ಕೊಟ್ಟದ್ದು, ಪ್ರೇಮಿಗಳ ಪರದಾಟ, ಹರೆಯದ ಹುಮ್ಮಸ್ಸಿನಲ್ಲಿರುವ ಲವ್‌ ಬರ್ಡ್ಸ್ಗಳ ದೃಷ್ಟಿ ಯುದ್ದ… ಅಬ್ಬಬ್ಟಾ ಹೇಳ್ತಾ ಹೋದ್ರೆ ನಾನ್‌ಸ್ಟಾಪ್‌ ಎಕ್ಸ್‌ಪ್ರೆಸ್‌ ಥರ… ಪ್ರತಿಯೊಂದು ಘಟನೆಗಳಿಗೆ, ಸುಂದರ ಕ್ಷಣಗಳಿಗೆ ಕಾರಿಡಾರ್‌ ಮೂಕಸಾಕ್ಷಿ. ಕಲರ್‌ ಡ್ರೆಸ್‌ ಇದ್ದಾಗಲಂತೂ ಕಾರಿಡಾರ್‌ ಕಲರ್‌ ಕಲರ್‌ ಚಿಟ್ಟೆಗಳಿಂದ ತುಂಬಿರತ್ತೆ. ಹುಡುಗೀರಿಗೆ ಅದು ಸೌಂದರ್ಯ ಪ್ರದರ್ಶಿಸೋ ಜಾಗವಾದ್ರೆ, ಹುಡುಗರಿಗೆ ಹರಟುತ್ತಾ ಸಮಯ ಕಳೆಯಲು ಇರುವ ಪುಣ್ಯ ಸ್ಥಳ.
ಜೋಡಿಹಕ್ಕಿಗಳಿಗಂತೂ ಕಾರಿಡಾರ್‌ನಷ್ಟು ಹೇಳಿ ಮಾಡಿಸಿದ ಪ್ರಶಸ್ತ ಜಾಗ ಬೇರೆಲ್ಲೂ ಸಿಗದು. ಒಟ್ನಲ್ಲಿ ಕಾರಿಡಾರ್‌ ನಮ್ಮನ್ನ
ಇಷ್ಟ ಪಡತ್ತೂ ಇಲ್ವೋ ಗೊತ್ತಿಲ್ಲ, ನಾವಂತೂ ಅದರ ಫ್ಯಾನ್‌ ಆಗಿದ್ವಿ ಅನ್ನೋದು ಸತ್ಯ.

ಆ ದಿನ ನಮ್ಗೆ ಕ್ಲಾಸ್‌ ಇರಲಿಲ್ಲ. ನಮ್ಮ ಗ್ಯಾಂಗ್‌ ಕಾರಿಡಾರ್‌ ನಲ್ಲಿ ಹೆಜ್ಜೆ ಹಾಕುತ್ತಾ ಬರುತ್ತಿತ್ತು. ಮೊದ್ಲೆ ವಾಚಾಳಿಗಳಾದ ನಾವೆಲ್ಲಾ ಸ್ಟಡಿ ವಿಷಯ ಬಿಟ್ಟು ಸಿನಿಮಾ ಸೀರಿಯಲ್‌ ಅಂತ ಏನೇನೋ ಹರಟುತ್ತಾ ಬರಿ¤ದ್ವಿ. ಕಾಲೇಜ್‌ ಮಧ್ಯ ಗ್ರೌಂಡಲ್ಲಿ ಪನ್ನೇರಳೆ ಹಣ್ಣಿನ ಕೆಲವು ಗಿಡಗಳಿವೆ. ಅದ್ಯಾವ ಗಳಿಗೇಲಿ ನಮ್ಮೆಲ್ಲರ ವಕ್ರದೃಷ್ಟಿ ಅದರ ಮೇಲೆ ಬಿತ್ತೋ ಗೊತ್ತಿಲ್ಲ. ಸೀದಾ ನಾವೆಲ್ಲಾ ಕಾರಿಡಾರಿಂದ ಜಂಪ್‌ ಮಾಡಿದ್ದು ಗ್ರೌಂಡಿಗೆ. ಪನ್ನೇರಳೆ ಹಣ್ಣನ್ನ ಕೊಯ್ಯೋಕಂತ.

ಅಂತೂ ಬಡಿಗೆ, ಕೋಲು, ಕಲ್ಲು ತಂದಿದ್ದೂ ಆಯ್ತು, ಹಣ್ಣನ್ನ ತಿಂದಿದ್ದೂ ಆಯ್ತು. ಇಷ್ಟೇ ಆದ್ರೆ ಪರವಾಗಿರಲಿಲ್ಲ. ಅತಿಯಾಸೆ ನೋಡಿ ನಮ್ಮೆಲ್ಲರಿಗೆ. ಇನ್ನೂ ಕೊಯ್ಯೋಕೆ ಅಂತ ಪ್ಲಾನ್‌ ಮಾಡಿದ್ವಿ. ನನಗಿಂತ ಹೈಟ್‌ ಇದ್ದ ನನ್‌ ಫ್ರೆಂಡಿಗೇ ಎಲ್ಲಾ ಹಣ್ಣುಗಳೂ ಸಿಕುÌ. ನಾನು ದೊಡ್ಡ ದನಿಯಲ್ಲಿ ರೇಗಾಡಲು ಶುರು ಮಾಡಿದೆ. ಬಿ.ಪಿ ರೈಸ್‌ ಆದೋರ್‌ ಥರ. ಪಕ್ಕದಲ್ಲಿ ಕ್ಲಾಸ್‌ ತಗೋತಿದ್ದಾರೆ ಅನ್ನೋ 
ಕಾಮನ್‌ಸೆನ್ಸ್‌ ಸಹಾ ನನಗಿರಲಿಲ್ಲ. ಹೇಳ ಬೇಕೆಂದ್ರೆ ಹೊರ ಜಗತ್ತಿನ ಪರಿವೆಯೇ ಇರಲಿಲ್ಲ ನನಗೆ.

Advertisement

ಇದ್ದಕ್ಕಿದ್ದಂತೆ ನನ್ನ ಫ್ರೆಂಡ್‌ ಎಲ್ಲಾ ಹಣ್ಣು ಕೊಟ್ಟು ನಿಧಾನಕ್ಕೆ ಅಲ್ಲಿಂದ ಕಾಲು ಕಿತ್ತಳು. ಎಲ್ರೂ ಹೋದ್ರು. ನಾನೊಬ್ಳೆ ಖುಷಿಯಿಂದ ಹಣ್ಣು ತಿನ್ನಲು ಅಣಿಯಾದೆ. ಇನ್ನೇನು ಬಾಯಿಗಿಡೋದೊಂದು ಬಾಕಿ, ಅಷ್ಟೊತ್ತಿಗೆ ಪ್ರತ್ಯಕ್ಷವಾಗಿಬಿಟ್ರಾ ಸೈನ್ಸ್‌ ಲೆಕ್ಚರರ್‌. ಆಗ್ಲೆ ಗೊತ್ತಾಗಿದ್ದು ನನ್ನ ಫೆಂಡ್ಸ್‌ ಎಲ್ಲಾ ಯಾಕೆ ಜಾಗ ಖಾಲಿ ಮಾಡಿದ್ದು ಅಂತ. ಕೈಗೆ ಬಂದದ್ದು ಬಾಯಿಗಿಲ್ಲಾ ಅನ್ನೋ ಹಾಗಾಯ್ತು ನನ್ನ ಸ್ಥಿತಿ.

ಅಧ್ಯಾಪಕರನ್ನ ನೋಡಿದ್ದೇ ತಡ, ಮುಖ ಕಪ್ಪಿಟ್ಟಿತು. ಕೈ-ಕಾಲು ಥರ ಥರ ನಡುಗತೊಡಗಿತು. ಚಳಿ ಜ್ವರ ಬಂದಾಗ ಹೇಗೆ ಅದರುತಿದೊ° ಹಾಗಾಯ್ತು. ಕೈಲಿದ್ದ ಹಣ್ಣೆಲ್ಲಾ ನೆಲಕ್ಕೆ ಬಿದ್ದವು. ಹಣೆ ಮೇಲೆ ಬೆವರು ಹನಿಯಲಾರಂಭಿಸಿತು. ಅವರ ಕೆಂಗಣ್ಣು ನನ್ನ ಕಣ್ಣಲ್ಲಿ ನೀರು ಹರಿಸಿತು. ಹಾಗೆ ಶುರು ಮಾಡಿದ್ರು ಅವರ ಬೈಗುಳದ ಮಂತ್ರಾಕ್ಷತೇನಾ. ಕಣಳಿಂದ ಧಾರಾಕಾರವಾಗಿ ಗಂಗಾ- ಕಾವೇರಿ ಸುರಿಯತೊಡಗಿತು. ಅವಮಾನ ಒಂದೆಡೆ, ದುಃಖ ಇನ್ನೊಂದೆಡೆ. ತಿಂದೋರು ಎಲ್ರೂ, ಆದ್ರೆ ಬೈಸಿಕೊಂಡದ್ದು ನಾನು ಮಾತ್ರ. ಕಾರಿಡಾರ್‌ನಲ್ಲಿ, ಕ್ಲಾಸಲ್ಲಿ ನಿಂತವರ ಪಾಲಿಗೆ ನಗೆ ಹನಿಯಾದೆ. ಚೆನ್ನಾಗಿ ಮಂಗಳಾರತಿ ಮಾಡಿಸಿಕೊಂಡು ಕ್ಲಾಸಿಗೆ
ಹೋದೆ. ಅಂದಿನಿಂದ ಬ್ರೇಕ್‌ ಬಿತ್ತು ನನ್ನ ಕಾರಿಡಾರ್‌ ಸುತ್ತಾಟಕ್ಕೆ ಮತ್ತು ಪನ್ನೇರಳೆ ಹಣ್ಣಿನ ಸಹವಾಸಕ್ಕೆ. ಈಗ ಹಣ್ಣು ಕಂಡರೂ ಕೊಯ್ಯೋ ಕೆಲಸಕ್ಕೆ ಕೈ ಹಾಕುತ್ತಿಲ್ಲ. ಅವುಗಳನ್ನು ನೋಡಿದಾಗಲೆಲ್ಲಾ ಈ ಘಟನೆ ಮನದ ಮುಂದೆ ಸುಳಿಯುತ್ತದೆ.

ನಾಗರತ್ನ ಮತ್ತಿಘಟ್ಟ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next