ಹೊಸದಿಲ್ಲಿ : ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರು ‘ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದ್ದಾರೆ’ ಎಂದು ಆರೋಪಿಸಿ ಕೇಂದ್ರ ವಿತ್ತ ಸಚಿವ ಅರುಣ್ ಜೇತ್ಲಿ ವಿರುದ್ಧ ಹರಿಹಾಯ್ದ ಒಂದು ದಿನ ತರುವಾಯ ಸಿನ್ಹಾ ಅವರ ಪುತ್ರನಾಗಿರುವ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರು ಸರಕಾರದ ಆರ್ಥಿಕ ನೀತಿಗಳನ್ನು ಸಮರ್ಥಿಸಿಕೊಂಡು, “ಮೋದಿ ಸರಕಾರವು ಬಲಿಷ್ಠ ಹೊಸ ಆರ್ಥಿಕತೆಯನ್ನು ರೂಪಿಸಿದ್ದು ಇದು ದೀರ್ಘ ಕಾಲದ ಬೆಳವಣಿಗೆಗೆ ಪುಷ್ಟಿ ನೀಡುತ್ತದೆ ಮತ್ತು ನವಭಾರತದ ನಿರ್ಮಾಣಕ್ಕೆ ಪೂರಕವಾಗಿ ಅಪಾರ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲಿದೆ’ ಎಂದು ಹೇಳಿದ್ದಾರೆ.
ಯಶವಂತ್ ಸಿನ್ಹಾ ಅವರು ಪ್ರಮುಖ ರಾಷ್ಟ್ರೀಯ ದೈನಿಕವೊಂದರಲ್ಲಿ ಬರೆದಿದ್ದ ಲೇಖನದಲ್ಲಿ ದೇಶದ ಆರ್ಥಿಕತೆಯನ್ನು ಚಿಂದಿ ಮಾಡಿರುವ ವಿತ್ತ ಸಚಿವ ಅರುಣ್ ಜೇತ್ಲಿ ವಿರುದ್ಧ ಕಟು ಟೀಕಾ ಪ್ರಹಾರ ಮಾಡಿದ್ದರಲ್ಲದೆ, “ಈಗಿನ ಸುಧಾರಣಾ ಪ್ರಕ್ರಿಯೆಗಳಿಂದ ಹಿಂದೆ ಸರಿಯಬೇಕು ಮತ್ತು ಉದ್ಯೋಗ ಸೃಷ್ಟಿಸದ ಅಭಿವೃದ್ಧಿ ಕಾರ್ಯಗಳಿಗೆ ವಿಪರೀತ ಒತ್ತು ಕೊಡುವುದನ್ನು ನಿಲ್ಲಿಸಬೇಕು’ ಎಂದು ಪ್ರಧಾನಿ ಮೋದಿಯನ್ನು ಆಗ್ರಹಿಸಿದ್ದರು.
ಸಿನ್ಹಾ ಅವರು ತಮ್ಮ ಲೇಖನದಲ್ಲಿ ಮೋದಿ ಸರಕಾರದ ನೋಟು ಅಮಾನ್ಯ ಕ್ರಮವನ್ನು ಹಾಗೂ ಅವಸರವಸರದಲ್ಲಿ ಜಿಎಸ್‌ಟಿ ಜಾರಿಗೊಳಿಸಿರುವುದನ್ನು ದೂರದೃಷ್ಟಿಯ ಕ್ರಮ ಅಲ್ಲವೆಂದು ಜರೆದಿದ್ದಾರೆ.
ಇದಕ್ಕೆ ಉತ್ತರ ಕೊಡುವ ರೀತಿಯಲ್ಲಿ ಯಶವಂತ್ ಸಿನ್ಹಾ ಅವರ ಪುತ್ರ, ಕೇಂದ್ರ ಸಹಾಯಕ ನಾಗರಿಕ ವಾಯುಯಾನ ಸಚಿವ ಜಯಂತ್ ಸಿನ್ಹಾ ಅವರು ಬರೆದಿರುವ ಲೇಖನವನ್ನು ಇಂದು ಗುರುವಾರ ಇನ್ನೊಂದು ರಾಷ್ಟ್ರೀಯ ದೈನಿಕ ಪ್ರಕಟಿಸಿದೆ.
ಈ ಲೇಖನದಲ್ಲಿ ಜಯಂತ್ ಅವರು, “ಮೋದಿ ಸರಕಾರ ಈಗ ಸೃಷ್ಟಿಸುತ್ತಿರುವ ಹೊಸ ಆರ್ಥಿಕತೆಯು ಹೆಚ್ಚು ಪಾರದರ್ಶಕವಾಗಿರುತ್ತದ; ಜಾಗತಿಕವಾಗಿ ಮಿತ ವ್ಯಯದ್ದಾಗಿರುತ್ತದೆ ಮತ್ತು ನವೋನ್ಮೇಷತೆಗೆ ಇಂಬು ನೀಡುತ್ತದೆ; ಎಲ್ಲಕ್ಕಿಂತ ಮುಖ್ಯವಾಗಿ ಮೋದಿ ಸರಕಾರದ ಈ ಹೊಸ ಆರ್ಥಿಕತೆಯು ಹೆಚ್ಚು ಸಮಾನತೆಗೆ ಒತ್ತು ನೀಡುತ್ತದೆ ಮತ್ತು ಆ ಮೂಲಕ ಎಲ್ಲ ಭಾರತೀಯರು ಉತ್ತಮ ಬಾಳ್ವೆಯನ್ನು ನಡೆಸಲು ಸಾಧ್ಯವಾಗುತ್ತದೆ’ ಎಂದು ಹೇಳಿದ್ದಾರೆ.
ಮೋದಿ ಸರಕಾರದ ನೋಟು ಅಮಾನ್ಯ ಕ್ರಮವನ್ನು ಸಮರ್ಥಿಸಿಕೊಂಡಿರುವ ಸಚಿವ ಜಯಂತ್, ಇದೊಂದು ಗೇಮ್ ಚೇಂಜರ್ ಆಗಿದ್ದು ಇದು ದೇಶದ ಆರ್ಥಿಕತೆಗೆ ಔಪಚಾರಿಕತೆಯ ಸ್ವರೂಪವನ್ನು ನೀಡುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.