ನವದೆಹಲಿ: ಅಮೆರಿಕಾದ ಔಷಧ ತಯಾರಕ ಸಂಸ್ಥೆ ಫೀಜರ್ ( pfizer)ತನ್ನ ಕೋವಿಡ್ -19 ಲಸಿಕೆಯ ತುರ್ತು ಬಳಕೆಯ ಅನುಮತಿಯನ್ನು ಕೋರಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಅರ್ಜಿಯನ್ನು ಸಲ್ಲಿಸಿದೆ. ಗಮನಾರ್ಹ ಸಂಗತಿಯೆಂದರೇ ಫೀಜರ್ ಸಂಸ್ಥೆ ಈಗಾಗಲೇ ಯುಕೆ ಮತ್ತು ಬಹ್ರೇನ್‌ನಲ್ಲಿ ತುರ್ತು ಔಷಧ ಬಳಕೆಯ ಅನುಮತಿಯನ್ನು ಪಡೆದುಕೊಂಡಿದೆ ಎಂದು ವರದಿ ತಿಳಿಸಿದೆ.
ಫೀಜರ್ ಇಂಡಿಯಾ, ಡಿಜಿಸಿಐಗೆ ಸಲ್ಲಿಸಿದ ಅರ್ಜಿಯಲ್ಲಿ, ದೇಶದಲ್ಲಿ ಲಸಿಕೆಯನ್ನು ಮಾರಾಟ ಮತ್ತು ವಿತರಣೆಗಾಗಿ ಆಮದು ಮಾಡಿಕೊಳ್ಳಲು ನಿಯಂತ್ರಕರಿಂದ ಅನುಮತಿ ಕೋರಿದೆ. ಭಾರತದಲ್ಲಿ 96 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದ ಮಾರಣಾಂತಿಕ ವೈರಸ್‌ಗೆ ಲಸಿಕೆ ಹುಡುಕುವ ಸ್ಪರ್ಧೆಯ ಮಧ್ಯೆ ಡಿಸಿಜಿಐ ಸ್ವೀಕರಿಸಿದ ಮೊದಲ ಕೋರಿಕೆ ಇದಾಗಿದೆ.
ಡಿಸಿಜಿಐನ ಅಧಿಕೃತ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ ಮಾಹಿತಿ ಪ್ರಕಾರ ಫೀಜರ್ ಇಂಡಿಯಾ ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ. ನೂತನ ಔಷಧ ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮಗಳು -2019 ರ ಪ್ರಕಾರ, 90 ದಿನಗಳ ಒಳಗಾಗಿ ಈ ಕೋರಿಕೆಗೆ ಉತ್ತರಿಸಲಾಗುವುದು ಎಂದಿದೆ.
ಫೀಜರ್ ಮತ್ತು ಜರ್ಮನ್ ಜೈವಿಕ ತಂತ್ರಜ್ಞಾನ ಪಾಲುದಾರ ಸಂಸ್ಥೆಯಾದ ಬಯೋಎನ್‌ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಗೆ ‘ಯುಕೆ’ ಕಳೆದ ಬುಧವಾರ(ಡಿ.2) ಗ್ರೀನ್ ಸಿಗ್ನಲ್ ನೀಡಿತ್ತು. ಈ ಲಸಿಕೆ ಮೂರನೇ ಹಂತದ ಪ್ರಯೋಗಗಳಲ್ಲಿ ಶೇಕಡಾ 95 ರಷ್ಟು ದಕ್ಷತೆಯನ್ನು ಸಾಧಿಸಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಈ ಲಸಿಕೆಗೆ ಅನುಮತಿ ನೀಡುವ ಮೊದಲು, ಮೂರು ಹಂತದ ಕ್ಲಿನಿಕಲ್ ಪ್ರಯೋಗವನ್ನು ನಡೆಸುವುದು ಫೀಜರ್ ಸಂಸ್ಥೆಗೆ ಅನಿವಾರ್ಯವಾಗಿದೆ.