Advertisement

“ಈ ಸರಣಿ ಬಳಿಕ ನಾನು ಎಲ್ಲಿರುತ್ತೇನೋ ಗೊತ್ತಿಲ್ಲ’

11:19 AM Sep 02, 2017 | Team Udayavani |

ಕೊಲಂಬೊ: “ಭಾರತದೆದುರಿನ ಈ ಏಕದಿನ ಸರಣಿ ಮುಗಿದ ಬಳಿಕ ನಾನೆಲ್ಲಿರುತ್ತೇನೋ ಗೊತ್ತಿಲ್ಲ’ ಎನ್ನುವ ಮೂಲಕ ಶ್ರೀಲಂಕಾದ ವಿಶಿಷ್ಟ ಶೈಲಿಯ ಬೌಲರ್‌ ಲಸಿತ ಮಾಲಿಂಗ ನಿವೃತ್ತಿಯ ಮುನ್ಸೂಚನೆಯೊಂದನ್ನು ನೀಡಿದ್ದಾರೆ. 

Advertisement

“ನಾನು ಕಾಲಿನ ನೋವಿನಿಂದಾಗಿ 19 ತಿಂಗಳು ಹೊರಗಿದ್ದೆ. ಕಳೆದ ಜಿಂಬಾಬ್ವೆ ಹಾಗೂ ಪ್ರಸಕ್ತ ಭಾರತದೆದುರಿನ ಸರಣಿಯಲ್ಲಿ ನನಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಈ ಸರಣಿ ಬಳಿಕ ನಾನೆಲ್ಲಿರಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ನನ್ನ ದೇಹ ಎಷ್ಟರ ಮಟ್ಟಿಗೆ ಸಹಕರಿಸೀತು ಎಂಬುದನ್ನೂ ಪರಿಗಣಿಸಿ ಸೂಕ್ತ ನಿರ್ಧಾರಕ್ಕೆ ಬರುತ್ತೇನೆ’ ಎಂದು ಮಾಲಿಂಗ ಹೇಳಿದರು. ಈ ಸಂದರ್ಭದಲ್ಲಿ 300 ವಿಕೆಟ್‌ ಉರುಳಿಸಿದ ಯಾವುದೇ ಸಂಭ್ರಮ ಅವರಲ್ಲಿ ಕಂಡುಬರಲಿಲ್ಲ. “ನಾನೆಷ್ಟು ಅನುಭವಿ ಎಂಬುದು ಇಲ್ಲಿನ ಪ್ರಶ್ನೆಯಲ್ಲ. ನನ್ನಿಂದ ತಂಡಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡಲು ಸಾಧ್ಯವಾಗದೇ ಹೋದರೆ, ತಂಡದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದೇ ಇದ್ದರೆ ನಾನು ತಂಡದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. 19 ತಿಂಗಳ ಹಿಂದಿನ ಆ ಫಾರ್ಮ್ ಮುಂದಿನ 3-4 ತಿಂಗಳಲ್ಲಿ ಮರಳಿ ಪಡೆಯಲು ಸಾಧ್ಯವೇ ಎಂಬ ನಿಟ್ಟಿನಲ್ಲೂ ಯೋಚಿಸುತ್ತೇನೆ…’ ಎಂದು ಮಾಲಿಂಗ ಹೇಳಿದರು. 2019ರ ವಿಶ್ವಕಪ್‌ ತನಕ ಆಡುವುದು ತನ್ನ ಬಯಕೆ ಎಂದು ಹೇಳಿದ ಒಂದೇ ದಿನದಲ್ಲಿ ಮಾಲಿಂಗ ತೀವ್ರ ಹತಾಶೆಗೆ ಜಾರಿದ್ದು ಸ್ಪಷ್ಟವಾಗಿತ್ತು.

ಇನ್ನೂ ಕಲಿಕೆಯ ಹಂತ…
4ನೇ ಪಂದ್ಯದಲ್ಲಿ ಲಸಿತ ಮಾಲಿಂಗ ಶ್ರೀಲಂಕಾ ತಂಡದ ಉಸ್ತುವಾರಿ ನಾಯಕನಾಗಿದ್ದರು. ಈ ಪಂದ್ಯದ ಕುರಿತು ಪ್ರತಿಕ್ರಿಯಿಸಿದ ಮಾಲಿಂಗ, “ಕೊಹ್ಲಿ ಮತ್ತು ರೋಹಿತ್‌ ಅತ್ಯುತ್ತಮ ಆಟವಾಡಿದರು. ನಮಗೆ ಉತ್ತಮ ಲೈನ್‌-ಲೆಂತ್‌ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಪಿಚ್‌ ಮೇಲೆ ಹುಲ್ಲಿನಂಶ ಇದ್ದುದರಿಂದ ಚೆಂಡನ್ನು ಸ್ವಿಂಗ್‌ ಮಾಡಲು ಪ್ರಯತ್ನಿಸಿದೆವು. ಆದರೆ ಇದು ಸಾಧ್ಯವಾಗಲಿಲ್ಲ. ಬಳಿಕ ಧಾರಾಳ ರನ್‌ ನೀಡಿದೆವು. ನಮ್ಮ ಯುವ ಬೌಲರ್‌ಗಳಿಗೆ ಇದೆಲ್ಲ ಕಲಿಕೆಯ ಹಂತ…’ ಎಂದರು.

“ಬ್ಯಾಟಿಂಗ್‌ ಬಗ್ಗೆ ನಾನು ದೂರುವುದಿಲ್ಲ. ತಂಡದಲ್ಲಿದ್ದ ಅನುಭವಿ ಬ್ಯಾಟ್ಸ್‌ಮನ್‌ ಅಂದರೆ ಮ್ಯಾಥ್ಯೂಸ್‌ ಮಾತ್ರ. ಇವರಿಗೆಲ್ಲ ಇನ್ನೂ ಸಾಕಷ್ಟು ಕಾಲಾವಕಾಶ ಬೇಕು. ಒಟ್ಟಾರೆ ನಾವು ಚೆನ್ನಾಗಿ ಬೌಲಿಂಗ್‌ ಮಾಡಲಿಲ್ಲ…’ ಎಂದು ಮಾಲಿಂಗ ಸೋಲಿಗೆ ವಿವರಣೆಯಿತ್ತರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
 ರೋಹಿತ್‌ ಶರ್ಮ-ವಿರಾಟ್‌ ಕೊಹ್ಲಿ ಸರ್ವಾಧಿಕ 3 ದ್ವಿಶತಕದ ಜತೆಯಾಟ ನಡೆಸಿದ 3ನೇ ಜೋಡಿ ಎನಿಸಿತು. ಗಂಭೀರ್‌- ಕೊಹ್ಲಿ, ಗಂಗೂಲಿ-    ತೆಂಡುಲ್ಕರ್‌ ಉಳಿದೆರಡು ಜೋಡಿ. ಕೊಹ್ಲಿ ತಮ್ಮ ಅತ್ಯಧಿಕ ದ್ವಿಶತಕಗಳ ಜತೆಯಾಟದ ವಿಶ್ವದಾಖಲೆಯನ್ನು 10ಕ್ಕೆ ಏರಿಸಿದರು.

Advertisement

 ಭಾರತ 350 ಪ್ಲಸ್‌ ರನ್ನುಗಳ ತನ್ನ ವಿಶ್ವದಾಖಲೆಯನ್ನು 24ಕ್ಕೆ ವಿಸ್ತರಿಸಿತು. ದಕ್ಷಿಣ ಆಫ್ರಿಕಾ 2ನೇ ಸ್ಥಾನದಲ್ಲಿದೆ (22).

 ಶ್ರೀಲಂಕಾದಲ್ಲಿ ಭಾರತ ಸರ್ವಾಧಿಕ ರನ್‌ ಪೇರಿಸಿದ ವಿದೇಶಿ ತಂಡವೆಂಬ ತನ್ನದೇ ದಾಖಲೆಯನ್ನು ತಿದ್ದಿ ಬರೆಯಿತು (5ಕ್ಕೆ 375). 2009ರ ಕೊಲಂಬೊ ಪಂದ್ಯದಲ್ಲೇ 5ಕ್ಕೆ 363 ರನ್‌ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

 ಶ್ರೀಲಂಕಾ ತವರಿನಲ್ಲಿ ರನ್‌ ಅಂತರದ ಅತೀ ದೊಡ್ಡ ಸೋಲನುಭವಿಸಿತು (168 ರನ್‌). ಹಿಂದಿನ ದೊಡ್ಡ ಸೋಲನ್ನು ಕೂಡ ಭಾರತದೆದುರೇ ಅನುಭವಿಸಿತ್ತು. ಅದು 2009ರ ಕೊಲಂಬೊ ಪಂದ್ಯದಲ್ಲಿ ಎದುರಾದ 147 ರನ್‌ ಅಂತರದ ಸೋಲಾಗಿತ್ತು.

 ಶ್ರೀಲಂಕಾ ವಿರುದ್ಧ ಭಾರತ ರನ್‌ ಅಂತರದ 3ನೇ ಅತೀ ದೊಡ್ಡ ಗೆಲುವು ಸಾಧಿಸಿತು (168 ರನ್‌).

   ವಿರಾಟ್‌ ಕೊಹ್ಲಿ ಶ್ರೀಲಂಕಾ ವಿರುದ್ಧ 7ನೇ ಶತಕ ಹೊಡೆದರು. ತೆಂಡುಲ್ಕರ್‌ ಲಂಕಾ ಎದುರು 8 ಶತಕ ಬಾರಿಸಿದ್ದು ದಾಖಲೆ.

 ಭಾರತ ಮೊದಲ 30 ಓವರ್‌ಗಳಲ್ಲಿ 230 ರನ್‌ ಪೇರಿಸಿತು. 30 ಓವರ್‌ಗಳ ಲೆಕ್ಕಾಚಾರದಲ್ಲಿ ಇದು 
ಭಾರತದ 2ನೇ ಸರ್ವಾಧಿಕ ಮೊತ್ತ. ಶ್ರೀಲಂಕಾ ವಿರುದ್ಧವೇ, 2009ರ ರಾಜ್‌ಕೋಟ್‌ ಪಂದ್ಯ ದಲ್ಲಿ 261 ರನ್‌ ಗಳಿಸಿದ್ದು ದಾಖಲೆ.

 ಕೊಹ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೇಳೆ ಬಾರಿಸಿದ 11 ಶತಕಗಳಲ್ಲೇ ಸರ್ವಾಧಿಕ ಸ್ಟ್ರೈಕ್‌ರೇಟ್‌ ದಾಖಲಿಸಿದರು (136.45). ಇದು ಅವರ 4ನೇ ಅತೀ ವೇಗದ ಶತಕ (76 ಎಸೆತ).

 ರೋಹಿತ್‌ ಶರ್ಮ 3ನೇ ಸಲ ಸತತ 2 ಪಂದ್ಯಗಳಲ್ಲಿ ಶತಕ ಹೊಡೆದರು.

 ಧೋನಿ 300ನೇ ಏಕದಿನ ಪಂದ್ಯವಾಡಿದರು. ಅವರು ತಮ್ಮ 100ನೇ ಹಾಗೂ 200ನೇ ಪಂದ್ಯವನ್ನೂ ಲಂಕಾ ವಿರುದ್ಧವೇ ಆಡಿದ್ದರು!

 ಧೋನಿ ಸರ್ವಾಧಿಕ 73 ಸಲ ಔಟಾಗದೆ ಉಳಿದು ವಿಶ್ವದಾಖಲೆ ಸ್ಥಾಪಿಸಿದರು. ಶಾನ್‌ ಪೋಲಕ್‌ ಮತ್ತು ಚಾಮಿಂಡ ವಾಸ್‌ 72 ಸಲ ಔಟಾಗದೇ ಉಳಿದ ದಾಖಲೆ ಪತನಗೊಂಡಿತು.

 ಮಾಲಿಂಗ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಲ 80 ಪ್ಲಸ್‌ ರನ್‌ ನೀಡಿದ ತಮ್ಮ “ದಾಖಲೆ’ಯನ್ನು 8ಕ್ಕೆ ವಿಸ್ತರಿಸಿದರು. ವಹಾಬ್‌ ರಿಯಾಜ್‌ 2ನೇ ಸ್ಥಾನದಲ್ಲಿದ್ದಾರೆ (4).

 ತೆಂಡುಲ್ಕರ್‌ ಅವರ 300ನೇ ಪಂದ್ಯದಲ್ಲಿ ಅಜರುದ್ದೀನ್‌ ಶತಕ ಹೊಡೆದಿದ್ದರು, ಯುವರಾಜ್‌ ಅವರ 300ನೇ ಪಂದ್ಯದಲ್ಲಿ ರೋಹಿತ್‌ ಶತಕ ಬಾರಿಸಿದ್ದರು, ಧೋನಿಯ 300ನೇ ಪಂದ್ಯದಲ್ಲಿ ಕೊಹ್ಲಿ ಮತ್ತು ರೋಹಿತ್‌ ಸೆಂಚುರಿ ಸಂಭ್ರಮವನ್ನಾಚರಿಸಿದರು!

Advertisement

Udayavani is now on Telegram. Click here to join our channel and stay updated with the latest news.

Next