ಲಂಡನ್: ಅತ್ಯಂತ ಕ್ಷಿಪ್ರವಾಗಿ ಒಬ್ಬರಿಂದೊಬ್ಬರಿಗೆ ಹರಡುವ ಒಮಿಕ್ರಾನ್ ರೂಪಾಂತರಿಯು ಜಗತ್ತಿನೆಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆಯನ್ನು ಹಲವು ಪಟ್ಟು ಹೆಚ್ಚಿಸಿರುವಂತೆಯೇ, ಇದರ ಉಪ-ತಳಿಯೊಂದು ಪತ್ತೆಯಾಗಿದೆ.
“ಬಿಎ.2′ ಎಂಬ ಹೆಸರಿನ ಈ ಉಪ-ತಳಿಯ ಬಗ್ಗೆ ಈಗ ಯುಕೆ ಆರೋಗ್ಯ ಭದ್ರತಾ ಸಂಸ್ಥೆಯು ಅಧ್ಯಯನ ನಡೆಸುತ್ತಿದ್ದು, ಸದ್ಯದ ಮಟ್ಟಿಗೆ ಇದು “ಕಳವಳಕಾರಿ ರೂಪಾಂತರಿ’ ಎಂಬ ನಿರ್ಧಾರಕ್ಕೆ ಬಂದಿಲ್ಲ.
ವಿಶೇಷವೆಂದರೆ, ಈಗಾಗಲೇ ಬಿಎ.2 ಉಪತಳಿಯ 426 ಪ್ರಕರಣಗಳು ಬ್ರಿಟನ್‌ನಲ್ಲಿ ಕಂಡುಬಂದಿವೆ. ಅಷ್ಟೇ ಅಲ್ಲ, ಇದು 40 ದೇಶಗಳಲ್ಲಿ ವ್ಯಾಪಿಸಿದ್ದು, ಡೆನ್ಮಾರ್ಕ್, ಭಾರತ, ಸ್ವೀಡನ್, ಸಿಂಗಾಪುರದಲ್ಲಿ ಈ ಉಪತಳಿಯಿರುವ ಅತಿಹೆಚ್ಚು ಸ್ಯಾಂಪಲ್‌ಗಳು ಪತ್ತೆಯಾಗಿವೆ ಎಂದೂ ಸಂಸ್ಥೆ ಹೇಳಿದೆ.
ಇದನ್ನೂ ಓದಿ:ಸೋಡಿಗದ್ದೆ ಮಹಾಸತಿ ಜಾತ್ರೋತ್ಸವ ; ಈ ಬಾರಿ ದೇವರ ದರ್ಶನಕಷ್ಟೇ ಸೀಮಿತ
ವಿಕಸನ ಮತ್ತು ರೂಪಾಂತರವು ಪ್ರತಿಯೊಂದು ವೈರಸ್‌ನ ಸ್ವಭಾವವಾಗಿದೆ. ಹೀಗಾಗಿ, ಕೊರೊನಾ ಸೋಂಕಿನ ಹೊಸ ಹೊಸ ರೂಪಾಂತರಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ವಂಶವಾಹಿ ಮೇಲೆ ನಾವು ನಿಗಾ ಇಟ್ಟಿರುವುದರಿಂದ ಹೊಸ ರೂಪಾಂತರಿಗಳು ಪತ್ತೆಯಾಗುತ್ತಿವೆ. ಆದರೆ, ಅವು ಎಷ್ಟು ಅಪಾಯಕಾರಿ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಯುಕೆಎಸ್‌ಎಚ್‌ಎ ನಿರ್ದೇಶಕರಾದ ಡಾ. ಮೀರಾ ಚಾಂದ್.