ಅಡಿಲೇಡ್: ಭಾರತ ತಂಡದ ವಿರುದ್ಧ ಸೂಪರ್ 12 ಕದನದಲ್ಲಿ ಸೋತ ಬಳಿಕ ಬಾಂಗ್ಲಾದೇಶ ತಂಡವು ಮಾಜಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆರೋಪವೊಂದನ್ನು ಮಾಡಿದೆ.
ಪಂದ್ಯವನ್ನು ಸೋತ ನಂತರ, ಬಾಂಗ್ಲಾದೇಶದ ವಿಕೆಟ್ ಕೀಪರ್-ಬ್ಯಾಟರ್ ನೂರುಲ್ ಹಸನ್, ಆನ್-ಫೀಲ್ಡ್ ಅಂಪೈರ್ ಗಳು ಕೊಹ್ಲಿಯ ‘ ಫೇಕ್ ಫೀಲ್ಡಿಂಗ್’ ಗಮನಿಸಲಿಲ್ಲ, ಹೀಗಾಗಿ ಬಾಂಗ್ಲಾದೇಶಕ್ಕೆ ಐದು ನಿರ್ಣಾಯಕ ಪೆನಾಲ್ಟಿ ರನ್ ಗಳು ಕೈತಪ್ಪಿತು ಎಂದು ಹೇಳಿದ್ದಾರೆ.
ಬಾಂಗ್ಲಾದೇಶ ಇನ್ನಿಂಗ್ಸ್‌ನ 7 ನೇ ಓವರ್ ನಲ್ಲಿ ಈ ಘಟನೆ ನಡೆಯಿತು, ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಲಿಟ್ಟನ್ ದಾಸ್ ಅವರು ಅಕ್ಸರ್ ಪಟೇಲ್ ಎಸೆತವನ್ನು ಡೀಪ್ ಆಫ್ ಸೈಡ್ ಫೀಲ್ಡ್ ಕಡೆಗೆ ಆಡಿದರು. ಅರ್ಷದೀಪ್ ಸಿಂಗ್ ಅವರು ಫೀಲ್ಡಿಂಗ್ ಮಾಡಿದರು. ಅರ್ಷದೀಪ್ ಅವರು ಎಸೆದ ಚೆಂಡು ಪಾಯಿಂಟ್ ನಲ್ಲಿ ನಿಂತಿದ್ದ ತನ್ನ ಬಳಿಯಿಂದ ಹೋಗುತ್ತಿದ್ದಂತೆ ವಿರಾಟ್ ಬೇಕಂತಲೇ ಕೈ ಬೀಸಿ ಚೆಂಡನ್ನು ಎಸೆಯುವಂತೆ ಅಭಿನಯಿಸಿದರು. ಆ ಸಮಯದಲ್ಲಿ, ಮೈದಾನದಲ್ಲಿದ್ದ ಅಂಪೈರ್ ಗಳಾದ ಮರೈಸ್ ಎರಾಸ್ಮಸ್ ಮತ್ತು ಕ್ರಿಸ್ ಬ್ರೌನ್ ಗಮನಿಸಲಿಲ್ಲ. ಅಲ್ಲದೆ ಬಾಂಗ್ಲಾದೇಶದ ಬ್ಯಾಟರ್ ಗಳಾದ ಲಿಟ್ಟನ್ ದಾಸ್ ಮತ್ತು ನಜ್ಮುಲ್ ಹೊಸೈನ್ ಶಾಂಟೋ ಅವರೂ ಈ ಬಗ್ಗೆ ಯಾವುದೇ ಸೂಚನೆ ನೀಡಲಿಲ್ಲ.
ಅಕ್ರಮ ಆಟಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ನ ಕಾನೂನು 41.5 ರ ಪ್ರಕಾರ, ‘ಉದ್ದೇಶಪೂರ್ವಕವಾಗಿ ಗಮನವನ್ನು ಬೇರೆಡೆಗೆ ಸೆಳೆಯುವುದು, ಮೋಸಗೊಳಿಸುವುದು ಅಥವಾ ಬ್ಯಾಟರ್ ಗೆ ಅಡ್ಡಿಪಡಿಸುವುದನ್ನು’ ನಿಷೇಧಿಸಲಾಗಿದೆ. ಒಂದು ವೇಳೆ ಉಲ್ಲಂಘನೆ ಎಂದು ಪರಿಗಣಿಸಿದರೆ, ಅಂಪೈರ್ ಆ ನಿರ್ದಿಷ್ಟ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಬಹುದು, ಮತ್ತು ಬ್ಯಾಟಿಂಗ್ ತಂಡಕ್ಕೆ ಐದು ರನ್ ನೀಡಬಹುದು.