Advertisement

ಇಂದಿರಾ ಕ್ಯಾಂಟೀನ್‌ ಬಳಿಕ ಸವಿರುಚಿ ಸಂಚಾರಿ ಕ್ಯಾಂಟೀನ್‌

01:26 PM Dec 27, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ “ಇಂದಿರಾ ಕ್ಯಾಂಟೀನ್‌’ ಯಶಸ್ವಿಯಾದ ಬೆನ್ನಲ್ಲೇ ಜಿಲ್ಲೆಗೊಂದು “ಸವಿರುಚಿ’ ಸಂಚಾರಿ ಕ್ಯಾಂಟೀನ್‌ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದಂತೆ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳ ಮೂಲಕ “ಸವಿರುಚಿ ಸಂಚಾರಿ ಕ್ಯಾಂಟೀನ್‌’ ತೆರೆಯಲು ಸಿದ್ಧತೆ ನಡೆದಿದ್ದು,

Advertisement

ಪ್ರಾಯೋಗಿಕವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸದ್ಯದಲ್ಲೇ ಸವಿರುಚಿ ಕ್ಯಾಂಟೀನ್‌ ಸಂಚರಿಸಲಿದೆ. ಸವಿರುಚಿ ಸಂಚಾರಿ ಕ್ಯಾಂಟೀನ್‌ಗಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ತಲಾ 10 ಲಕ್ಷ ರೂ. ಸ್ತ್ರೀ ಶಕ್ತಿ ಒಕ್ಕೂಟಗಳಿಗೆ ಬಡ್ಡಿ ರಹಿತ ಸಾಲ ಒದಗಿಸಲಾಗಿದ್ದು ಎರಡೂ ಕಡೆಯ ಯಶಸ್ಸು ಆಧರಿಸಿ ರಾಜ್ಯಾದ್ಯಂತ ವಿಸ್ತರಿಸುವುದು ಸರ್ಕಾರದ ಉದ್ದೇಶ.

ರಿಯಾಯಿತಿ ದರ: ಬೆಂಗಳೂರು ನಗರ ಜಿಲ್ಲೆಯಲ್ಲಿ ಚಿಕ್ಕಬಾಣಾವರದಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್‌ ಪ್ರಾರಂಭವಾಗಲಿದ್ದು ಸುತ್ತಮುತ್ತ ಇರುವ ಕಾರ್ಖಾನೆಗಳ ಬಳಿ ತೆರಳಿ ಬೆಳಗ್ಗೆ ಮತ್ತು ಮಧ್ಯಾಹ್ನ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಊಟ-ತಿಂಡಿ ಒದಗಿಸಲಿದೆ. ಅದೇ ರೀತಿ ಗ್ರಾಮಾಂತರ ಜಿಲ್ಲೆಯಲ್ಲೂ ಕ್ಯಾಂಟೀನ್‌ ಸಂಚರಿಸಲಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಸ್ತುವಾರಿಯಲ್ಲಿ ಆರಂಭವಾಗಲಿರುವ ಸವಿರುಚಿ ಸಂಚಾರಿ ಕ್ಯಾಂಟೀನ್‌ಗಳು ಇಂದಿರಾ ಕ್ಯಾಂಟೀನ್‌ಗಳಂತೆಯೇ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ ಇರುತ್ತದೆ. ಆರಂಭದಲ್ಲಿ ಇಡ್ಲಿ, ದೋಸೆ, ಚಿತ್ರಾನ್ನ, ಅನ್ನ-ಸಾಂಬಾರ್‌ ನೀಡಲಾಗುವುದು. ಯೋಜನೆ ರಾಜ್ಯವ್ಯಾಪಿ ವಿಸ್ತರಣೆಯಾದ ಬಳಿಕ ಆಯಾ ಭಾಗದ ಆಹಾರಕ್ಕೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.

ಜಿಲ್ಲೆಗೊಂದು ಕ್ಯಾಂಟೀನ್‌: ಇಂದಿರಾ ಕ್ಯಾಂಟೀನ್‌ ವಿಧಾನಸಭೆ ಕ್ಷೇತ್ರಾವಾರು ಆರಂಭಗೊಂಡರೆ ಸವಿರುಚಿ ಕ್ಯಾಂಟೀನ್‌ ಜಿಲ್ಲೆಗೊಂದರಂತೆ ಆರಂಭಗೊಳ್ಳಲಿದೆ. ಸವಿರುಚಿ ಸಂಚಾರಿ ಕ್ಯಾಂಟಿನ್‌ ಕಾರ್ಯಾರಂಭ ಸಂಬಂಧ ಎರಡು ಜಿಲ್ಲೆಗಳ ಸ್ತ್ರೀಶಕ್ತಿ ಜಿಲ್ಲಾ ಒಕ್ಕೂಟದೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸಂಚಾರಿ ಕ್ಯಾಂಟೀನ್‌ ಆರಂಭಿಸಲು ಸ್ತ್ರೀಶಕ್ತಿ ಒಕ್ಕೂಟಗಳು ಆಸಕ್ತಿ ತೋರಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಹಣದ ಜತೆಗೆ ಮೊಬೈಲ್‌ ವಾಹನ ಸೇರಿದಂತೆ ಇನ್ನಿತರ ಪರಿಕರಗಳನ್ನು ನೀಡಲಾಗುವುದು. ಸರ್ಕಾರ ನೀಡಿರುವ ಹತ್ತು ಲಕ್ಷ ರೂ. ಯಾವುದೇ ಬಡ್ಡಿ ಇಲ್ಲ. ಆರು ತಿಂಗಳ ನಂತರ ಕಂತುಗಳ ಮೂಲಕ ಈ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡಬೇಕಾಗುತ್ತದೆ.

10 ಲಕ್ಷ ರೂ. ಏಕೆ?: ಸಂಚಾರಿ ಕ್ಯಾಂಟೀನ್‌ ಆರಂಭಿಸಲು ಸರ್ಕಾರ 10 ಲಕ್ಷ ರೂ. ಬಡ್ಡಿ ರಹಿತ ಸಾಲ ಒದಗಿಸುತ್ತದೆ. ಇದರಲ್ಲಿ 5 ಲಕ್ಷ ರೂ. ಅಗತ್ಯ ವಾಹನ, ಮಡಚುವ ಟೇಬಲ್‌ ಮತ್ತು ಕುರ್ಚಿಗಳು ಸೇರಿ ಅವಶ್ಯ ಕಚ್ಚಾ ಸಾಮಾಗ್ರಿಗಳನ್ನು ಕೊಳ್ಳಲು ಮತ್ತು ಉಳಿದ 5 ಲಕ್ಷ ರೂ. ಅಡುಗೆಗೆ ಅಗತ್ಯ ಆಹಾರ ಧಾನ್ಯ ಮತ್ತಿತರೆ ಸಲಕರಣೆಗಳನ್ನು ಖರೀದಿಸಲು ಬಳಸಿಕೊಳ್ಳಬೇಕು. ಕ್ಯಾಂಟೀನ್‌ ಆರಂಭವಾಗಿ ಆರು ತಿಂಗಳ ಬಳಿಕ ಮಾಸಿಕ 18,520 ರೂ.ನಂತೆ ಪಡೆದ ಸಾಲವನ್ನು ಮರುಪಾವತಿ ಮಾಡಬೇಕು.

ಹಸಿದವರಿಗೆ ಸವಿರುಚಿ ನೀಡಲು ಎಲ್ಲಾ ಸಿದ್ಧತೆ ನಡೆದಿದ್ದು, ಸ್ತ್ರೀಶಕ್ತಿ ಸಂಘಗಳ ಒಕ್ಕೂಟಗಳು ಸಹ ಯೋಜನೆಯ ಯಶಸ್ವಿ ಜಾರಿಗೆ ಅಣಿಯಾಗಿವೆ. ಸರ್ಕಾರದ ಅನುಮತಿ ದೊರೆತ ತಕ್ಷಣ ಸವಿರುಚಿ ಸಂಚಾರಿ ಕ್ಯಾಂಟೀನ್‌ ಗಳು ಕಾರ್ಯಾರಂಭ ಮಾಡಲಿವೆ.
-ಎನ್‌.ನಾರಾಯಣಸ್ವಾಮಿ, ಉಪ ನಿರ್ದೇಶಕ, ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರು ನಗರ ಜಿಲ್ಲೆ 

* ದೇವೇಶ್‌ ಸೂರಗುಪ್ಪ 

Advertisement

Udayavani is now on Telegram. Click here to join our channel and stay updated with the latest news.

Next