Advertisement

ಹಬ್ಬದ ಸೀಸನ್‌ ಬಳಿಕ ಬೆಲೆ ಇಳಿಕೆಯ ಹಾದಿಯಲ್ಲಿ  ಕದಳಿ ಬಾಳೆ ಹಣ್ಣು

04:23 PM Oct 30, 2017 | |

ನಗರ: ಹಬ್ಬಗಳ ಸೀಸನ್‌ ಮುಗಿಯುತ್ತಿದ್ದಂತೆ ಬಾಳೆ ಹಣ್ಣುಗಳ ಬೆಲೆಯೂ ಇಳಿಕೆಯಾಗುತ್ತಿದೆ. ಹಣ್ಣಿನ ಅಂಗಡಿಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಬಳಿಕ ತೀವ್ರ ಗತಿಯಲ್ಲಿ ಏರಿಕೆ ಕಂಡು ಕೆ.ಜಿ.ಗೆ 120 ರೂ. ತನಕ ತಲುಪಿದ್ದ ಕದಳಿ ಬಾಳೆ ಹಣ್ಣಿನ ಬೆಲೆ ಈಗ 60 ರೂ. ತನಕ ಇಳಿಕೆ ಕಂಡಿದೆ.

Advertisement

ಪೂಜೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಅಗತ್ಯವಾಗಿ ಬೇಕಾಗುವ ಕದಳಿ ಬಾಳೆ ಹಾಗೂ ತಿಂಡಿಗಳ ತಯಾರಿಕೆಯಲ್ಲಿ ಬಳಕೆಯಾಗುವ ನೇಂದ್ರ ಬಾಳೆಗೆ ಈಗ ಸ್ವಲ್ಪ ಮಟ್ಟಿನ ಬೇಡಿಕೆ ಕಡಿಮೆಯಾಗಿದೆ. ದೀಪಾವಳಿ ಸಂದರ್ಭ ಕೆ.ಜಿ.ಯೊಂದರ 100ರಿಂದ -120 ರೂ. ಬೆಲೆಯಿದ್ದ ಕದಳಿ ಬಾಳೆ ಹಣ್ಣಿಗೆ ಈಗ 60 ರೂ. ಮಾರುಕಟ್ಟೆ ದರವಿದೆ. ಹಬ್ಬಗಳ ಅವಧಿಯಲ್ಲಿ 100 ರೂ. ತನಕ ಮಾರಾಟವಾಗಿದ್ದ ನೇಂದ್ರ ಬಾಳೆಗೆ ಈಗ ಕೆ.ಜಿ.ಯೊಂದರ 60 -70 ರೂ. ಗೆ ಇಳಿಕೆಯಾಗಿದೆ.

40 ರೂ. ನಿರೀಕ್ಷೆ
ಹಬ್ಬಗಳ ಸೀಸನ್‌ ಮುಗಿಯುತ್ತಾ ಬರುತ್ತಿದ್ದಂತೆ ಬೇಡಿಕೆಯಲ್ಲಿ ಇಳಿಕೆ ಕಾಣುತ್ತಿರುವ ಬಾಳೆಹಣ್ಣಿನ ದರ ತುಳಸಿ ಪೂಜೆಯ ಬಳಿಕ ಕೆ.ಜಿ.ಗೆ ಸರಾಸರಿ 40 ರೂ. ಆಗಬಹುದು ಎನ್ನುವುದು ಹಣ್ಣಿನ ವ್ಯಾಪಾರಿಗಳ ಅಭಿಪ್ರಾಯ. ಹಬ್ಬಗಳ ಸೀಸನ್‌ ಬಿಟ್ಟು ಮದುವೆ ಹಾಗೂ ಇತರ ಸಮಾರಂಭಗಳಿಗೆ ಗಣನೀಯ ಮಟ್ಟದ ಬೇಡಿಕೆ ಇರುವುದಿಲ್ಲ.

ಕದಳಿ, ನೇಂದ್ರ, ಮೈಸೂರು, ಗಾಳಿ, ಬೂದಿಬಾಳೆ ಹಣ್ಣುಗಳಿಗೆ ಹಣ್ಣುಗಳ ಅಂಗಡಿಗಳಲ್ಲಿ ಗ್ರಾಹಕರಿಂದ ಸರಾಸರಿ ಬೇಡಿಕೆ ಇರುತ್ತದೆ. ಮೈಸೂರು, ಜಾಯಿಂಟ್  ಬೂದಿ, ಗಾಳಿ ಬಾಳೆ ಹಣ್ಣಿಗೆ ಕೆ.ಜಿಗೆ 30ರಿಂದ 40 ರೂ. ಬೆಲೆ ಮಾರುಕಟ್ಟೆಯಲ್ಲಿದೆ. ದರ್ಬೆಯಲ್ಲಿರುವ ಹೋಲ್‌ಸೇಲ್‌ ಅಂಗಡಿಯೊಂದಕ್ಕೆ ದೊಡ್ಡ ಮಟ್ಟದಲ್ಲಿ ಬಾಳೆಹಣ್ಣುಗಳು ಬರುತ್ತಿದ್ದು, ಅಲ್ಲಿಂದ ನಗರದ ವಿವಿಧ ಅಂಗಡಿಗಳಿಗೆ ಹಂಚಿಕೆಯಾಗುತ್ತದೆ.

ಉಳಿದಂತೆ ದೊಡ್ಡ ಗಾತ್ರದ ಮೂಸುಂಬಿ ಕೆ.ಜಿ.ಗೆ. 60 ರೂ., ಬೇಸಗೆ ಕಾಲದಲ್ಲಿ ಪಾನೀಯದ ಉದ್ದೇಶದಿಂದ ಅತಿ ಹೆಚ್ಚು ಬಳಕೆಯಾಗುವ ನಿಂಬೆ ಹಣ್ಣೊಂದರ 4 ರೂ. ಬೆಲೆಯಿದೆ.

Advertisement

ತರಕಾರಿಗೆ ಆಸಕ್ತಿ
ಹಬ್ಬಗಳು ಮುಗಿಯುತ್ತಿದ್ದಂತೆ ಒಮ್ಮೆಗೆ ತರಕಾರಿಗಳ ಬೆಲೆ ಇಳಿಕೆ ಕಂಡರೂ ಶುಭ ಸಮಾರಂಭಗಳ ಸೀಸನ್‌ ಆರಂಭವಾಗುವುದರಿಂದ ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಮತ್ತೆ ಬೆಲೆ ಏರಿಕೆಯಾಗುತ್ತದೆ. ಬಿಸಿ ವಾತಾವರಣದ ಮಧ್ಯೆ ದೇಹದ ಉಷ್ಣತೆ ಹೆಚ್ಚಿಸುವ ಮಾಂಸಾಹಾರ ಸೇವನೆಗಿಂತ ತರಕಾರಿ ಪದಾರ್ಥಗಳತ್ತ ಜನರು ಹೆಚ್ಚು ಆಸಕ್ತಿ ವಹಿಸುತ್ತಾರೆ.

ಬೆಳೆಯುವವರು ಕಡಿಮೆ
ಹಬ್ಬದ ಸೀಸನ್‌ನಲ್ಲಿ ಅತಿ ಹೆಚ್ಚು ಬೇಡಿಕೆಯನ್ನು ಹೊಂದಿರುವ ಕದಳಿ ಬಾಳೆ ಹಣ್ಣಿನ ಬೆಲೆ ತುಳಸಿ ಪೂಜೆಯ ಬಳಿಕ 40 ರೂ. ಆಸುಪಾಸಿಗೆ ಬರಬಹುದು. ಇತ್ತೀಚೆಗೆ ಕದಳಿ ಬಾಳೆ ಬೆಳೆಯುವವರು ಕಡಿಮೆಯಾಗಿರುವುದರಿಂದ ಲೋಕಲ್‌ ಬೆಳೆಗಾರರಿಂದ ಸಿಗುತ್ತಿಲ್ಲ. ಬೇರೆ ಕಡೆಗಳಿಂದ ಆವಕವಾಗುವ ಕದಳಿ ಹಣ್ಣುಗಳು ಉತ್ತಮ ಗುಣಮಟ್ಟವನ್ನೂ ಹೊಂದಿಲ್ಲ.
ಕೇಶವ
ಹಣ್ಣು, ತರಕಾರಿ ವ್ಯಾಪಾರಿ, ಪುತ್ತೂರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next