ಮಂಡ್ಯ/ಮದ್ದೂರು: ಗೌರಿ-ಗಣೇಶ ಹಬ್ಬದ ನಂತರ ಬಸ್ ಪ್ರಯಾಣದರವನ್ನು ಶೇ.18ರಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವ ಎನ್.ತಮ್ಮಣ್ಣ ಸ್ಪಷ್ಟಪಡಿಸಿದರು.
ಬಸ್ ದರ ಏರಿಕೆ ಸಂಬಂಧ ಮೂರು ತಿಂಗಳ ಹಿಂದೆಯೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ದರ ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ಹೊರೆಯಾಗುವುದು ಎಂಬ ಉದ್ದೇಶದಿಂದ ತಡೆಹಿಡಿಯಲಾಗಿತ್ತು. ತೈಲ ಬೆಲೆ ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದರು.
ಪ್ರಸ್ತುತ ಪೆಟ್ರೋಲ್ ಲೀ.ಗೆ 84 ರೂ.ಹಾಗೂ ಡೀಸೆಲ್‌ಗೆ 73 ರೂ.ಆಗಿರುವುದರಿಂದ ಸಂಸ್ಥೆಗೆ ಆಗುತ್ತಿರುವ ನಷ್ಟ ತಪ್ಪಿಸಬೇಕಾದರೆ ಬಸ್ ದರ ಏರಿಕೆ ಮಾಡುವ ಅನಿವಾರ್ಯತೆ ಇದೆ. ಗೌರಿ-ಗಣೇಶ ಹಬ್ಬದ ನಂತರ ದರ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರವೊಂದರಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಪ್ರತಿ ದಿನ ಬಿಎಂಟಿಸಿ ಬಸ್‌ನಲ್ಲಿ 45 ಲಕ್ಷ ಜನ ಪ್ರಯಾಣಿಸಿದರೆ,ಮೆಟ್ರೋದಲ್ಲಿ 4 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಮಹಾನಗರದ ಜನರು ಸಂಚಾರಕ್ಕೆ ಸಾರ್ವಜನಿಕ ಸಂಪರ್ಕ ಸಾರಿಗೆಯನ್ನು ಅವಲಂಬಿಸಿದ್ದಾರೆ ಎಂದರು.
ಭಾರತ್ ಬಂದ್‌ಗೆ ಬೆಂಬಲ:
ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸೋಮವಾರ ಕರೆ ನೀಡಿರುವ ಭಾರತ್ ಬಂದ್‌ಗೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ. ಇದರಿಂದಾಗಿ ಸಾರಿಗೆ ಬಸ್ಗಳು ರಸ್ತೆಗಿಳಿಯುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.