ಮುಂಬಯಿ: ಭಾರತದ ಅತಿದೊಡ್ಡ ಸಂಗೀತ ಕಂಪನಿ ಟಿ ಸೀರೀಸ್‌ನ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಜೀವನ ಚರಿತ್ರೆಯ ‘ಮೊಗುಲ್’ ಚಲನಚಿತ್ರವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಟಿ ಸಿರೀಸ್ ಮಾಲೀಕ ಭೂಷಣ್ ಕುಮಾರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಈ ಚಿತ್ರದಲ್ಲಿ ಅಮೀರ್ ಮತ್ತು ಭೂಷಣ್ ಕುಮಾರ್ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅಮೀರ್ ಅವರ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಕೆಲಸ ಮುಗಿದ ನಂತರ, ಅವರು ‘ಮೊಗುಲ್’ ಚಿತ್ರದ ಕೆಲಸ ಮಾಡಲು ಹೊರಟಿದ್ದರು. ‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೆ ಭಾರತದಲ್ಲಿ ಸರಿಯಾದ ಪ್ರತಿಕ್ರಿಯೆ ವ್ಯಕ್ತವಾಗದೇ, ಅಮೀರ್ ವೃತ್ತಿಜೀವನದ ದೊಡ್ಡ ಫ್ಲಾಪ್ ಆಗಿ ಹೊರಹೊಮ್ಮಿತು. ಈ ಎಲ್ಲಾ ಕಾರಣಗಳಿಂದ ಈ ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ.
5 ವರ್ಷಗಳ ಹಿಂದೆ ನಟ ಅಕ್ಷಯ್ ಕುಮಾರ್ ಅವರಿಗೆ ಈ ಚಿತ್ರದ ಆಫರ್ ಬಂದಿತ್ತು. ಆದರೆ ನಂತರ ಕಾರಣಾಂತರಗಳಿಂದ ಅಕ್ಷಯ್ ಅದರಿಂದ ಹೊರನಡೆದರು ಮತ್ತು ನಂತರ ಚಿತ್ರದಲ್ಲಿ ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಗಳು ಬಂದಿದ್ದವು.
ಗುಲ್ಶನ್ ಕುಮಾರ್ ಸಂಗೀತ ಲೋಕದಲ್ಲಿ ಬಹಳ ದೊಡ್ಡ ಹೆಸರು. ನಟನೆಯ ಕನಸು ಹೊತ್ತು ಮುಂಬಯಿಗೆ ಬಂದವರು ಕ್ಯಾಸೆಟ್ ಉದ್ಯಮದತ್ತ ಹೆಜ್ಜೆ ಹಾಕಿದರು .ಆಗ ಟಿ ಸಿರೀಸ್ ಹಾಡಿನ ಹಕ್ಕು ಕೋಟ್ಯಂತರ ರೂಪಾಯಿಗೆ ಮಾರಾಟವಾಗುತ್ತಿತ್ತು. ಹಕ್ಕುಗಳ ವಿವಾದದಿಂದಾಗಿ ಗುಲ್ಶನ್ ಕುಮಾರ್ ಹತ್ಯೆಗೀಡಾಗಿದ್ದರು.
ಗುಲ್ಶನ್ ಕುಮಾರ್ 1997 ಆಗಸ್ಟ್ 12 ರಂದು ಅಂಧೇರಿ ವೆಸ್ಟ್ ಉಪನಗರದ ಜೀತ್ ನಗರದಲ್ಲಿ ಜೀತೇಶ್ವರ್ ಮಹಾದೇವ ಮಂದಿರದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದರು. ಅವರ ಮೇಲೆ 16 ಗುಂಡುಗಳನ್ನ ಹಾರಿಸಲಾಗಿತ್ತು.