ಪ್ರವಾಸ ಹೋಗ್ಬೇಕು, ದೂರದ ಊರುಗಳಿಗೆ ರೋಡ್ ಟ್ರಿಪ್ ಮಾಡ್ಬೇಕು ಅಂತ ಯಾರಿಗೆ ಆಸೆ ಇರೋದಿಲ್ಲ ಹೇಳಿ? ಕೆಲವರು ವರ್ಷಕ್ಕೊಮ್ಮೆ, ಆರು ತಿಂಗಳಿಗೊಮ್ಮೆ “ಸೋಲೋ ಟ್ರಿಪ್’ ಅಂತ, ತಮ್ಮ ಕನಸನ್ನು ನನಸು ಮಾಡಿಕೊಳ್ತಾರೆ. ಆದರೆ, ಅಂಥವರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯೇ. ಯಾಕಂದ್ರೆ, ಒಬ್ಬೊಬ್ಬರೇ ಟೂರ್ ಹೋಗುವುದು, ರೋಡ್ ಟ್ರಿಪ್ ಹೋಗೋದು ಸುರಕ್ಷಿತವಲ್ಲ ಎಂಬ ಭಾವನೆ ಹಲವರದ್ದು. ಈ ಮಾತಿಗೆ ಅಪವಾದ ಎಂಬಂತೆ, ಪ್ರವಾಸವನ್ನೇ ಬ್ಯುಸಿನೆಸ್ ಮಾಡಿಕೊಂಡ ಮಹಿಳೆಯೊಬ್ಬರಿದ್ದಾರೆ. ಅವರೇ ಮುಂಬೈನ ಸುಜಲ್ ಪಟವರ್ಧನ್.
ಸುಜಲ್, ಪ್ರತಿಷ್ಠಿತ ಕಂಪನಿಯೊಂದರಲ್ಲಿ 12 ವರ್ಷಗಳ ಕಾಲ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆಯಾಗಿದ್ದರು. ಮೀಟಿಂಗ್, ಡೆಡ್‌ಲೈನ್, ಸ್ಯಾಲರಿ, ಪ್ರಮೋಷನ್ ಅಂತ ಅವರ ಜೀವನಚಕ್ರ ಆಫೀಸಿನ ಸುತ್ತುತ್ತಲೇ ಸುತ್ತುತ್ತಿತ್ತು. ಆದರೆ, ಸುಜಲ್‌ಗೆ ಪ್ರವಾಸದ ಹುಚ್ಚಾ ಇತ್ತು. ಸಮಯದ ಅಭಾವದಿಂದ ಹಲವು ವರ್ಷಗಳ ಕಾಲ ಪ್ರವಾಸ ಮಾಡಲು ಆಗಿರಲಿಲ್ಲ. ತಮ್ಮ ಯಾಂತ್ರಿಕ ಬದುಕಿನಿಂದ ಬ್ರೇಕ್ ಪಡೆಯಲು 2015ರಲ್ಲಿ, ಗೆಳತಿ ಮೇಧಾ ಜೋಸೆಫ್ ಮತ್ತು ನಾಲ್ವರು ಸ್ನೇಹಿತರ ಜೊತೆಗೆ, ಮೊರಾಕ್ಕೋಗೆ ರೋಡ್ ಟ್ರಿಪ್ ಹೋಗಿದ್ದರು. 57 ದಿನಗಳಲ್ಲಿ 15 ದೇಶ, 23 ಸಾವಿರ ಕಿ.ಮೀ. ಪ್ರವಾಸ ಹೋದ ಅವರು, ಮತ್ತೆಂದೂ ಕೆಲಸಕ್ಕೆ ವಾಪಸಾಗುವ ಮನಸ್ಸು ಮಾಡಲಿಲ್ಲ.
ಮತ್ತೇನು ಮಾಡಿದರು ಗೊತ್ತಾ? ತಮ್ಮ ಪ್ರವಾಸದ ಆಸಕ್ತಿಯನ್ನೇ ಬ್ಯುಸಿನೆಸ್ ಆಗಿಸಿಕೊಂಡರು. ಸುಜಲ್-ಮೇಧಾ ಸೇರಿ, ಎರಡೇ ತಿಂಗಳಲ್ಲಿ ಇಂಬಾರ್ಕ್ ಹೆಸರಿನಲ್ಲಿ ಟ್ರಾವೆಲ್ ಸ್ಟಾರ್ಟ್ ಅಪ್ ಶುರು ಮಾಡಿದ್ರು. ಆ ಕಂಪನಿಯ ಕೆಲಸ ಏನೆಂದರೆ, ವಿದೇಶಗಳಿಗೆ ರೋಡ್ ಟ್ರಿಪ್ ಹೋಗುವವರಿಗೆ ಮಾಹಿತಿ ನೀಡುವುದು, ಪರವಾನಗಿ ಪಡೆಯಲು ಸಹಕರಿಸುವುದೂ ಸೇರಿದಂತೆ, ಎಲ್ಲ ರೀತಿಯಲ್ಲಿ ಪ್ರವಾಸಿಗರಿಗೆ ನೆರವಾಗುವುದು. ಒಟ್ಟಿನಲ್ಲಿ, ಪ್ರವಾಸದ ಅನುಭವವನ್ನು ಮತ್ತಷ್ಟು ಸ್ಮರಣೀಯಗೊಳಿಸುವ ಕೆಲಸವನ್ನು ಸುಜಲ್‌ರ ತಂಡ ಮಾಡುತ್ತದೆ. ಈಗಾಗಲೇ ಬಹಳಷ್ಟು ಮಹಿಳೆಯರು ಇವರ ಮಾರ್ಗದರ್ಶನದಲ್ಲಿ ಪ್ರವಾಸ ಕೈಗೊಂಡಿರುವುದು ಇವರಿಗೆ ಖುಷಿ ತಂದಿದೆ. ಮಹಿಳಾ ಪ್ರವಾಸಿಗರ ಸುರಕ್ಷತೆಗೆ ಇವರ ತಂಡ ಹೆಚ್ಚಿನ ಕಾಳಜಿ ವಹಿಸುತ್ತದೆ. ಆಸಕ್ತಿಯ ಕ್ಷೇತ್ರವನ್ನೇ ಉದ್ಯೋಗವಾಗಿಸಿಕೊಂಡಿರುವ ಸುಜಲ್‌ಗೆ ತಮ್ಮ ನಿರ್ಧಾರದ ಕುರಿತು ಎಳ್ಳಷ್ಟೂ ಪಶ್ಚಾತ್ತಾಪವಿಲ್ಲವಂತೆ.