Advertisement

ಬೆಳಗಾವಿಗೆ ಅಂಟಿದ ‘ಕಳಪೆ ಸ್ಮಾರ್ಟ್‌ ಸಿಟಿ’ಅಪಖ್ಯಾತಿ

02:39 AM May 25, 2017 | Team Udayavani |

ಹೊಸದಿಲ್ಲಿ: ದೇಶದ ಪ್ರಮುಖ ನಗರಗಳಲ್ಲಿ ಜೀವನ ಮಟ್ಟ ಸುಧಾರಿಸುವ ಗುರಿಯೊಂದಿಗೆ ಕೇಂದ್ರ ಸರಕಾರ ಆರಂಭಿಸಿರುವ ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಆಯ್ಕೆಯಾಗಿರುವ ನಗರಗಳು ನಿಜಕ್ಕೂ ಸ್ಮಾರ್ಟಾಗಿವೆಯಾ? ಇಲ್ಲ ಎನ್ನುತ್ತಿದೆ ಸರಕಾರದ ವರದಿ! ಇದೇ ವರ್ಷ ಜನವರಿ ತಿಂಗಳು ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾದ ದೇಶದ 20 ನಗರಗಳು ಮೂಲ ಸೌಲಭ್ಯ ಅಭಿಧಿವೃದ್ಧಿಯ ಕನಿಷ್ಠ ಗುರಿಯನ್ನೂ ತಲುಪಿಲ್ಲ. ಈ 20 ಹಿಂದುಳಿದ ಸ್ಮಾರ್ಟ್‌ ಸಿಟಿಗಳ ಪಟ್ಟಿಯಲ್ಲಿ ರಾಜ್ಯದ ದಾವಣಗೆರೆ ಹಾಗೂ ಬೆಳಗಾವಿ ನಗರಗಳೂ ಇವೆ. ಅದರಲ್ಲೂ ಬೆಳಗಾವಿ ನಗರ ಪಟ್ಟಿಯಲ್ಲಿ 20ನೇ ರ್‍ಯಾಂಕ್‌ ಪಡೆಯುವ ಮೂಲಕ ಅತ್ಯಂತ ‘ಕಳಪೆ ಸ್ಮಾರ್ಟ್‌ ಸಿಟಿ’ ಎಂಬ ಅಪಖ್ಯಾತಿಗೆ ಗುರಿಯಾಗಿದೆ.

Advertisement

ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆ (ಎನ್‌ಐಯುಎ) ನೀಡಿರುವ ಅಧ್ಯಯನ ವರದಿಯಿಂದ ಈ ಅಂಶ ತಿಳಿದಿದೆ. ಯೋಜನೆಯಡಿ ಆಯ್ಕೆಯಾದ ನಗರಗಳಲ್ಲಿನ ನೈರ್ಮಲ್ಯ, ಮೂಲ ಸೌಲಭ್ಯಗಳು, ಆಡಳಿತ ಸುಧಾರಣೆ ಮತ್ತು ಸಮಾಜ – ಆರ್ಥಿಕ ಸೂಚಕಗಳ ಆಧಾರದಲ್ಲಿ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ಎಲ್ಲ ವಿಭಾಗಗಳಲ್ಲೂ ಕಳಪೆ ಸಾಧನೆ ತೋರುವ ಮೂಲಕ ಕಡೇ ಸ್ಥಾನದಲ್ಲಿದೆ.

ಸ್ಲಂಗಳೇ ಹೆಚ್ಚು: ದೇಶದ ಎಲ್ಲ ನಗರಗಳಲ್ಲಿ ಸರಾಸರಿ ಶೇ.17.14ರಷ್ಟು ಸ್ಲಂ ನಿವಾಸಿಗಳಿದ್ದರೆ, ಈ 20 ನಗರಗಳ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.18.75 ಜನ ಕೊಳೆಗೇರಿಗಳಲ್ಲಿ ವಾಸವಿದ್ದಾರೆ. ಈ 20 ನಗರಗಳು ಕಳಪೆ ಸ್ಮಾರ್ಟ್‌ ಸಿಟಿಗಳೆನಿಸಿಕೊಳ್ಳಲು ಇದು ಪ್ರಮುಖ ಕಾರಣವಾಗಿದೆ. ಚೆನ್ನೈ, ಇಂದೋರ್‌, ಕಾಕಿನಾಡ ಮತ್ತು ಜಬಲ್ಪುರ ನಗರಗಳಲ್ಲಿ ಅತಿ ಹೆಚ್ಚು ಸ್ಲಂ ನಿವಾಸಿಗಳಿದ್ದಾರೆ. 

ಬಹುತೇಕ ನಗರಗಳಲ್ಲಿ ಮೂಲ ನಾಗರಿಕ ಸೌಲಭ್ಯ ಹೊಂದಿರುವ ಮನೆಗಳ ಸಂಖ್ಯೆ ತೀರಾ ಕಡಿಮೆ ಇರುವುದು ಮತ್ತೂಂದು ಗಮನಾರ್ಹ ಅಂಶ. ಗುವಾಹಟಿಯಲ್ಲಿ ಶೇ.34.6 ರಷ್ಟು ನಗರಗಳು ಮಾತ್ರ ಕೊಳಾಯಿ ಸೌಲಭ್ಯ ಹೊಂದಿದ್ದು, ಸೊಲ್ಹಾಪುರ, ಭುವನೇಶ್ವರ, ಪುಣೆ, ಜಬಲ್ಪುರ ಮತ್ತು ಭೋಪಾಲ್‌ ನಗರಗಳಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲ. ಇನ್ನು ಬೆಳಗಾವಿ, ಭುವನೇಶ್ವರ, ಗುವಾಹಟಿ, ಕಾಕಿನಾಡ, ಕೊಚ್ಚಿ ನಗರಗಳಲ್ಲಿ ಕನಿಷ್ಠ ಒಳಚರಂಡಿ ಸೌಲಭ್ಯವೂ ಇಲ್ಲ. 

‘ಪ್ರಸ್ತುತ ಗುರುತಿಸಿರುವ 20 ನಗರಗಳು ಮೂಲ ಸೌಲಭ್ಯಗಳ ದೃಷ್ಟಿಯಿಂದ ತೀರಾ ಹಿಂದುಳಿದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದುಳಿದ ನಗರಗಳ ಬಗ್ಗೆ ಹೆಚ್ಚು ಗಮನಹರಿಸಿ, ಆದ್ಯತೆಯ ಮೇರೆಗೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿ ಎಂಬ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗಿದೆ,’ ಎಂದು ಎನ್‌ಐಯುಎ ವರದಿ ಹೇಳಿದೆ. 

Advertisement

ಸ್ಮಾರ್ಟ್‌ ಅಲ್ಲದ 20 ಸಿಟಿಗಳು!
ದಾವಣಗೆರೆ, ಬೆಳಗಾವಿ, ವಿಶಾಖಪಟ್ಟಣ, ಕಾಕಿನಾಡ, ಗುವಾಹಟಿ, ಎನ್‌ಡಿಎಂಸಿ, ಅಹಮದಾಬಾದ್‌, ಸೂರತ್‌, ಕೊಚ್ಚಿ, ಭೂಪಾಲ್‌, ಇಂದೋರ್‌, ಜಬಲ್ಪುರ್‌, ಪುಣೆ, ಸೊಲಾಪುರ್‌, ಭುವನೇಶ್ವರ್‌, ಲೂಧಿಯಾನ, ಜೈಪುರ, ಉದಯ್‌ಪುರ, ಚೆನ್ನೈ ಮತ್ತು ಕೊಯಮತ್ತೂರು (ಯೋಜನೆಯಡಿ ಆಯ್ಕೆಯಾಗಿರುವ ಇತರ 98 ಸಂಭಾವ್ಯ ಸ್ಮಾರ್ಟ್‌ ಸಿಟಿಗಳಿಗೆ ಹೋಲಿಸಿದರೆ ಈ 20 ನಗರಗಳು, ಆಡಳಿತ, ಅಭಿವೃದ್ಧಿ ವಿಷಯದಲ್ಲಿ ತೀರಾ ಹಿಂದುಳಿದಿವೆ).

Advertisement

Udayavani is now on Telegram. Click here to join our channel and stay updated with the latest news.

Next