ಆಗ್ರಾ: ಉತ್ತರ ಪ್ರದೇಶದ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಸಂಕೀರ್ಣದ ಪ್ರಾಥಮಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಆಗ್ರಾದ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ಮಾಡುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದು, ಇದೀಗ ಪ್ರದೇಶದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಸಂಕೀರ್ಣದ ಪ್ರಾಥಮಿಕ ಸಮೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡುತಿದ್ದಂತೆ ಅಖಿಲ ಭಾರತೀಯ ಹಿಂದೂ ಮಹಾಸಭಾದ ಸದಸ್ಯರು ಮಸೀದಿ ಬಳಿ ಬಂದು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮಥುರಾ ಮಸೀದಿ ಸಮೀಕ್ಷೆಗೆ ಸಮ್ಮತಿ ಸಿಗುತಿದ್ದಂತೆ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಸಂಜಯ್ ಜಾಟ್ ಅವರು ಆಗ್ರಾದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಒತ್ತಾಯಿಸಿದರು, ಮಥುರಾದ ಕೇಶವದೇವ ದೇವಾಲಯದಿಂದ ತೆಗೆದ ‘ವಿಗ್ರಹ’ವನ್ನು ಚಕ್ರವರ್ತಿ ಔರಂಗಜೇಬ್ ಮಸೀದಿಯ ಮೆಟ್ಟಿಲುಗಳ ಕೆಳಗೆ ಹೂಳಿದ್ದಾರೆ ಎಂದು ಪ್ರತಿಪಾದಿಸಿದರು.
ಈ ಹೇಳಿಕೆ ನೀಡಿದ ಬೆನ್ನಲ್ಲೇ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಗೊಂಡಿದ್ದು ಕೂಡಲೇ ಪೊಲೀಸರು ಮುಂಜಾಗ್ರತೆ ವಹಿಸಿ ಹಿಂದೂ ಮಹಾಸಭಾದ ಪ್ರಮುಖರು ಹಾಗು ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿ ಸಮಾಜದಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಕ್ರಮಗಳಿಂದ ದೂರವಿರುವಂತೆ ಒತ್ತಾಯಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಮಸೀದಿ ಹಾಗೂ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.
ಇದನ್ನೂ ಓದಿ: IT ದಾಳಿ ವೇಳೆ ಸಿಕ್ಕ 350ಕೋಟಿ ರೂ. ಯಾರದ್ದು? ಯಾರಿಗೆ ಸೇರಿದ್ದು? ಧೀರಜ್ ಸಾಹು ಹೇಳಿದ್ದೇನು?