Advertisement

ಅದಲು ಬದಲಾದ ಬ್ಯಾಲೆಟ್ ಪೇಪರ್: ಗೊಂದಲ ಸೃಷ್ಟಿ, ಚುನಾವಣೆ ಮುಂದೂಡಿಕೆ

10:00 AM Dec 23, 2019 | keerthan |

ಶಿವಮೊಗ್ಗ: ಕುರುಬರ ಸಂಘದ ರಾಜ್ಯ ನಿರ್ದೇಶಕರ ಸ್ಥಾನಕ್ಕೆ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಚುನಾವಣೆಯನ್ನು ದಿಢೀರ್ ಸ್ಥಗಿತಗೊಳಿಸಲಾಗಿದೆ. ಬ್ಯಾಲೆಟ್ ಪೇಪರ್ ಅದಲು ಬದಲು ಆಗಿದ್ದರಿಂದ, ಮತಗಟ್ಟೆಯಲ್ಲಿ ಭಾರಿ ಗೊಂದಲ ಸೃಷ್ಟಿಯಾಯಿತು.

Advertisement

ಗೊಂದಲಕ್ಕೆ ಕಾರಣವೇನು?
ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಕುರುಬರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿತ್ತು. ಶಿವಮೊಗ್ಗದಿಂದ ನಾಲ್ಕು ನಿರ್ದೇಶಕರ ಆಯ್ಕೆ ಆಗಬೇಕಿತ್ತು. ಆದರೆ ಬ್ಯಾಲೆಟ್ ಪುಸ್ತಕದಲ್ಲಿ ಶಿವಮೊಗ್ಗ ಜಿಲ್ಲೆಯ ನಿರ್ದೇಶಕರ ಬದಲು, ಬೀದರ್ ಜಿಲ್ಲೆಯ ನಿರ್ದೇಶಕರ ಫೋಟೊ, ಚಿಹ್ನೆ ಇರುವ ಬ್ಯಾಲೆಟ್ ಪೇಪರ್’ಗಳಿದ್ದವು. ವಿಚಾರ ತಿಳಿಯುತ್ತಿದ್ದಂತೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಚುನಾವಣಾ ಅಕ್ರಮದ ಆರೋಪ ಮಾಡಿದರು.

ಗೊಂದಲ, ಗದ್ದಲ, ಮತದಾನ ಸ್ಥಗಿತ
ಬೆಳಗ್ಗೆ 9 ಗಂಟೆಗೆ ದುರ್ಗಿಗುಡಿ ಶಾಲೆಯಲ್ಲಿ ಮತದಾನ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಸುಮಾರು 600 ಮಂದಿ ಮತ ಚಲಾಯಿಸಿದ್ದರು. ಬ್ಯಾಲೆಟ್ ಪೇಪರ್ ಗೊಂದಲ ಸೃಷ್ಟಿಯಾಗುತ್ತಿದ್ದಂತೆ ಮತ ಕೇಂದ್ರದಲ್ಲಿ ಗೊಂದಲ, ಗದ್ದಲ ಶುರುವಾಯಿತು. ಪೊಲೀಸರು ಕೂಡಲೆ ಮತಗಟ್ಟೆ ಬಳಿ ಜನರನ್ನು ನಿಯಂತ್ರಿಸಿದರು. ಇನ್ನು, 9 ಬೂತ್’ನಲ್ಲಿ ನಡೆಯುತ್ತಿದ್ದ ಮತದಾನ ಸ್ಥಗಿತಗೊಳಿಸಲಾಯಿತು.

ಚುನಾವಣಾಧಿಕಾರಿಗಳ ವಿರುದ್ಧ ಆಕ್ರೋಶ
ಬ್ಯಾಲೆಟ್ ಪೇಪರ್’ನಲ್ಲಿ ಗೊಂದಲಕ್ಕೆ ಚುನಾವಣಾಧಿಕಾರಿಗಳೇ ಕಾರಣ ಎಂದು ಆರೋಪಿಸಿ ಕೆಲವರು ಮತಗಟ್ಟೆಯಲ್ಲಿಯೇ ಪ್ರತಿಭಟನೆ ನಡೆಸಿದರು. ಚುನಾವಣಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ನಡುವೆ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್ ಅಭ್ಯರ್ಥಿಗಳು, ಚುನಾವಣಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ನಂತರ ಸ್ಥಳಕ್ಕೆ ಬಂದ ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ಅಭ್ಯರ್ಥಿಗಳು, ಚುನಾವಣಾಧಿಕಾರಿ ಅವರನ್ನು ಪ್ರತ್ಯೇಕ್ಷ ಕೊಠಡಿಯಲ್ಲಿ ಕೂರಿಸಿ ಸಭೆ ನಡೆಸಿದರು.

ಎಲೆಕ್ಷನ್ ಮುಂದೂಡಿದ ಚುನಾವಣಾಧಿಕಾರಿ
ಸಭೆ ಬಳಿಕ ಚುನಾವಣಾಧಿಕಾರಿ ಸುಧೀರ್ ಪಾಷಾ ಅವರು ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು. ಇದರಿಂದ ಪರಿಸ್ಥಿತಿ ಶಾಂತವಾಯಿತು. ಆದರೆ ಮತಗಟ್ಟೆಯ ಹೊರಗೆ ಅಭ್ಯರ್ಥಿಗಳ ಬೆಂಬಲಿಗರು ಚುನಾವಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next