ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ (ಎಂಸಿಡಿ) ತೆರವಾಗಿರುವ ಸ್ಥಾಯಿ ಸಮಿತಿಯ ಒಂದು ಸ್ಥಾನಕ್ಕೆ ಇಂದೇ (ಸೆ.27) ಚುನಾವಣೆ ನಡೆಸುವಂತೆ ಪಾಲಿಕೆಯ ಆಯುಕ್ತರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಗುರುವಾರ(ಸೆ. 26) ತಡರಾತ್ರಿ ಆದೇಶ ನೀಡಿದ್ದಾರೆ.
ಅದರಂತೆ ಇಂದು ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದೆ ಎಂದು ಪೌರಾಯುಕ್ತ ಅಶ್ವನಿಕುಮಾರ್ ತಿಳಿಸಿದ್ದಾರೆ.
ಬಿಜೆಪಿ ನಾಯಕ ಕಮಲ್‌ಜೀತ್ ಸೆಹ್ರಾವತ್ ಪಶ್ಚಿಮ ದೆಹಲಿ ಸಂಸದರಾಗಿ ಆಯ್ಕೆಯಾದ ನಂತರ ಅವರಿಂದ ತೆರವಾದ ಸಮಿತಿಯ ಆರನೇ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಗಿತ್ತು, ಗವರ್ನರ್ ಆದೇಶದಂತೆ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಜಿತೇಂದರ್ ಯಾದವ್ ಅವರನ್ನು ಎಂಸಿಡಿ ಹೌಸ್ ಸಭೆಯ ಅಧ್ಯಕ್ಷರಾಗಿ ಚುನಾವಣೆ ನಡೆಸಲು ನೇಮಿಸಲಾಗಿದೆ.
ಗುರುವಾರ ಸದಸ್ಯರ ಗದ್ದಲದಿಂದಾಗಿ ಚುನಾವಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಲಾಗಿತ್ತು. ಆದರೆ, ಮೇಯರ್ ಶೆಲ್ಲಿ ಒಬೆರಾಯ್ ಅವರ ಈ ಆದೇಶವನ್ನು ರದ್ದು ಮಾಡಿದ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ರಾತ್ರಿ 10ರೊಳಗೆ ವರದಿ ನೀಡುವಂತೆ ಆಯುಕ್ತರಿಗೆ ಸೂಚಿಸಿದ್ದರು. ಇದಾದ ಬಳಿಕ ನಡೆದ ಚರ್ಚೆಯಲ್ಲಿ ಶುಕ್ರವಾರ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಲಾಗಿದೆ.
ಪ್ರಸ್ತುತ ಸ್ಥಾಯಿ ಸಮಿತಿಯಲ್ಲಿ ಬಿಜೆಪಿ ಒಂಬತ್ತು ಮತ್ತು ಎಎಪಿ ಎಂಟು ಸದಸ್ಯರನ್ನು ಹೊಂದಿದ್ದು, ಸಮಿತಿಯಲ್ಲಿ ಒಟ್ಟು ಸದಸ್ಯರ ಸಂಖ್ಯೆ 18 ಆಗಿದೆ. ನಿಗಮದ ಪ್ರಮುಖ ನೀತಿಗಳು ಮತ್ತು ಯೋಜನೆಗಳು ಮತ್ತು ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಸ್ಥಾಯಿ ಸಮಿತಿಯು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಸದನದ ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸುವಲ್ಲಿ ಯಶಸ್ವಿಯಾದರೆ, ಅದು ಸಮಿತಿಯಲ್ಲಿ ಬಹುಮತವನ್ನು ಪಡೆಯುತ್ತದೆ.
ಒಂದು ವೇಳೆ ಉಪಚುನಾವಣೆಯಲ್ಲಿ ಎಎಪಿ ಗೆದ್ದರೆ ಎರಡೂ ಪಕ್ಷಗಳ ಸದಸ್ಯರ ಸಂಖ್ಯೆ ಸಮಾನವಾಗಿರುತ್ತದೆ. ಈ ಮೂಲಕ ಸಮಿತಿ ಅಧ್ಯಕ್ಷರ ಆಯ್ಕೆ ಕುತೂಹಲ ಮೂಡಿಸಲಿದೆ. ಈ ಬಾರಿಯ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಸಮಾನ ಮತ ಪಡೆದರೆ ಡ್ರಾ ಮೂಲಕ ಗೆಲುವು ನಿರ್ಧಾರವಾಗಲಿದೆ.
ಇದನ್ನೂ ಓದಿ: MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ಸಾಧ್ಯತೆ