ನವದೆಹಲಿ: ಮುಸ್ಲಿಮರಲ್ಲಿರುವ ವಿವಾದಾತ್ಮಕ ತ್ರಿವಳಿ ತಲಾಖ್ ಪದ್ಧತಿಗೆ ಸಂಬಂಧಿಸಿದಂತೆ ಆರು ದಿನಗಳ ಕಾಲ ನಡೆದ ಐತಿಹಾಸಿಕ ವಿಚಾರಣೆ ವಾದ, ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ಗುರುವಾರ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.
ತ್ರಿವಳಿ ತಲಾಖ್ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಜುಲೈನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಬೇಕೆಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್ ಗೆ ಮನವಿ ಮಾಡಿತ್ತು, ಇದು ಸತಿ ಮತ್ತು ದೇವದಾಸಿ ಪದ್ಧತಿಯಂತಿದ್ದು ಇದನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ವಾದ ಮಂಡಿಸಿತ್ತು.
ಪತಿ ನೀಡುವ ತ್ರಿವಳಿ ತಲಾಖ್‌ಗೆ “ಬೇಡ’ ಎನ್ನುವ ಅಧಿಕಾರ ಮಹಿಳೆಗಿದೆಯೇ ಎಂದು ಮುಸ್ಲಿಂ ವೈಯಕ್ತಿಕ
ಕಾನೂನು ಮಂಡಳಿಯನ್ನು ಸುಪ್ರೀಂ ಪ್ರಶ್ನಿಸಿತ್ತು. ಜತೆಗೆ, ಒಂದೇ ಬಾರಿಗೆ ವಿಚ್ಛೇದನ ನೀಡುವ ವಿಚಾರ ಕುರಾನ್
ನಲ್ಲಿ ಎಲ್ಲಾದರೂ ಉಲ್ಲೇಖವಾಗಿದೆಯೇ ಎಂದೂ ಸಿಜೆಐ ಜೆ.ಎಸ್.ಖೆಹರ್ ನೇತೃತ್ವದ ನ್ಯಾಯಪೀಠ ಕೇಳಿತ್ತು.
ತ್ರಿವಳಿ ತಲಾಖ್ ವಿರುದ್ಧ ವಾದ ಮಂಡಿಸಿದ ಕೇಂದ್ರ ಸರ್ಕಾರ ಮುಸ್ಲಿಂ ಕಾನೂನು ಮಂಡಳಿ ಪರನ್ಯಾಯವಾದಿ ಕಪಿಲ್ ಸಿಬಲ್ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯಲ್ಲೇ ಪ್ರತಿಕ್ರಿಯಿಸಿತು. “ಇದನ್ನು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಿನ ತಾರತಮ್ಯ ಎಂದು ನೋಡಬೇಡಿ. ಇದು ಉಳ್ಳವರು (ಪುರುಷರು) ಮತ್ತು ಇಲ್ಲದವರು (ಮಹಿಳೆಯರ) ನಡುವಿನ ಹೋರಾಟ. 25 ಇಸ್ಲಾ ಮಿಕ್ ರಾಷ್ಟ್ರಗಳಲ್ಲಿ ಈ ಪದ್ಧತಿ ಇಲ್ಲ ಎಂದಾದ ಮೇಲೆ ಅದು ಇಸ್ಲಾಂನಲ್ಲಿ ಕಡ್ಡಾಯ ಎಂದು ಹೇಳಲಾಗದು’ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಾದಿಸಿದ್ದರು.