ಮುಜಫ್ಫರ್ ನಗರ್: ಅಚಲವಾದ ಆತ್ಮವಿಶ್ವಾಸ, ಛಲಬಿಡದ ತ್ರಿವಿಕ್ರಮ ಪ್ರಯತ್ನ ಒಟ್ಟಾಗಿ ನೀಡಿದ ಫಲವಿದು. 19 ವರ್ಷಗಳ ಹಿಂದೆ ವೀರ ಮರಣ ಅಪ್ಪಿದ ಭಾರತೀಯ ಯೋಧನೊಬ್ಬನ ಪುತ್ರ, ಅಪ್ಪ ಹುತಾತ್ಮರಾದಾಗ ಮಾಡಿದ್ದ ಪ್ರತಿಜ್ಞೆಯಂತೆ ಈಗ ಭಾರತೀಯ ಸೇನೆ ಸೇರ್ಪಡೆಗೊಂಡಿದ್ದಾನೆ. ವಿಶೇಷವೆಂದರೆ, ಅಪ್ಪ ಲ್ಯಾನ್ಸ್ ನಾಯ್ಕ ಹುದ್ದೆಯಲ್ಲಿದ್ದಾಗ ಹುತಾತ್ಮರಾದರೆ, ಹೆಮ್ಮೆಯ ಪುತ್ರನು ಅಪ್ಪ ಸೇವೆ ಸಲ್ಲಿಸಿದ ಬೆಟಾಲಿಯನ್‌ಗೆ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾನೆ. ಬಾಲ್ಯದಲ್ಲೇ ತಂದೆಯನ್ನು ಕಳೆಕೊಂಡು, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದರೂ, ಇದೀಗ ಅಂದುಕೊಂಡಿದ್ದ ಗುರಿ ಮುಟ್ಟಿರುವ ಹಿತೇಶ್ ಕುಮಾರ್ ಎಂಬ ಯುವಕನ ಸಾಧನಾಗಾಥೆಯಿದು.
ಅದು 1999ರ ಜೂ.12. ಕಾರ್ಗಿಲ್ ಯುದ್ಧ ನಡೆಯುತ್ತಿದ್ದ ಸಮಯ. ಗಡಿಯ ಟೆಲೊಲಿಂಗ್ ಪ್ರಾಂತ್ಯದಲ್ಲಿ ಶತ್ರುಗಳೊಂದಿಗೆ ಹೋರಾಡುತ್ತಿದ್ದ 2ನೇ ರಜಪೂತ್ ಬೆಟಾಲಿಯನ್‌ನ ಯೋಧ ಬಚ್ಚನ್ ಸಿಂಗ್, ಶತ್ರುಗಳ ಗುಂಡಿಗೆ ಬಲಿಯಾದರು. ಅವರ ಸಾವಿನ ಸುದ್ದಿ ಕುಟುಂಬಕ್ಕೆ ಬರ ಸಿಡಿಲಿನಂತೆ ಅಪ್ಪಳಿಸಿತು. ಸುದ್ದಿ ತಿಳಿದ ಕೂಡಲೇ ಇಬ್ಬರು ಪುಟ್ಟ ಗಂಡು ಮಕ್ಕಳನ್ನು ತಬ್ಬಿ ಹಿಡಿದ ಆ ಯೋಧನ ಪತ್ನಿ ಬಿಕ್ಕಿ ಅಳುತ್ತಿದ್ದರೆ, ತಾಯಿಯ ಕಣ್ಣೀರನ್ನು ಒರೆಸಿದ ಹಿರಿ ಮಗ ಹಿತೇಶ್, ನಾನೂ ಯೋಧನಾಗಿ ಅಪ್ಪನಂತೆ ದೇಶಕ್ಕಾಗಿ ಪ್ರಾಣ ಮುಡಿಪಿಡುತ್ತೇನೆ ಎಂದು ಶಪಥ ಮಾಡಿಬಿಟ್ಟ.
ದುಃಖತಪ್ತಳಾಗಿದ್ದ ತಾಯಿ, ಮಗನ ಮಾತುಗಳನ್ನು ಆ ಕ್ಷಣಕ್ಕೆ ಗಂಭೀರವಾಗಿ ತೆಗೆದು ಕೊಂಡಳ್ಳೋ ಇಲ್ಲವೋ ಗೊತ್ತಿಲ್ಲ. ಆದರೆ, ಆ ಹುಡುಗನ ಗುಂಡಿಗೆಯಲ್ಲಿ ಈ ಶಪಥ ಗಟ್ಟಿಯಾಗಿ ನೆಲೆಯೂರಿತ್ತು. ಆತನ ನಿರ್ಧಾರ ಅಚಲವಾಗಿತ್ತು. ಕಾಲ ಬದಲಾದರೂ ಆತನ ಧೃಡ ನಿರ್ಧಾರ ಮಾತ್ರ ಬದಲಾಗಲಿಲ್ಲ.
ಮುಂದೆ, ಡೆಹ್ರಾಡೂನ್‌ನಲ್ಲಿರುವ ಭಾರತೀಯ ಸೇನಾ ಅಕಾಡೆಮಿಗೆ ಸೇರಿದ. ಈ ವರ್ಷ ಅಲ್ಲಿಂದ ಉತ್ತೀರ್ಣನಾಗಿ ಹೊರ ಬಂದಿರುವ ಆತ ಇದೀಗ ಭಾರತೀಯ ಸೇನೆಯ ಲೆಫ್ಟಿನೆಂಟ್ ಮಟ್ಟದ ಹುದ್ದೆಗೆ ನೇಮಕಗೊಂಡಿದ್ದಾನೆ. ಇಷ್ಟೇ ಅಲ್ಲ, ತನ್ನ ತಂದೆ ಸೇವೆ ಸಲ್ಲಿಸಿದ್ದ ರಜಪೂತ್ ಬೆಟಾಲಿಯನ್‌ಗೆ ಸೇರ್ಪಡೆಗೊಂಡು ವಿಶೇಷ ಎನ್ನಿಸಿಕೊಂಡಿದ್ದಾನೆ.
ನೇಮಕಾತಿಯ ಪತ್ರ ಕೈ ಸೇರಿದ ಕೂಡಲೇ, ಮುಜಫ್ಫರ್ ನಗರದ ಸಿವಿಲ್ ಲೈನ್ಸ್ ಪ್ರಾಂತ್ಯದಲ್ಲಿರುವ ತಂದೆಯ ಸಮಾಧಿಗೆ ತೆರಳಿದ ಹಿತೇಶ್, ತನ್ನ ತಂದೆಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ. ಬಳಿಕ ಪ್ರತಿಕ್ರಿಯಿಸಿರುವ ಅವರು, “”19 ವರ್ಷಗಳ ಹಿಂದೆ ನಾನು ಕಂಡಿದ್ದ ಕನಸನ್ನು ನನಸು ಮಾಡಿ ಕೊಂಡಿದ್ದೇನೆ. ತಾಯಿಯ ಬೆಂಬಲದೊಂದಿಗೆ ಗುರಿ ಸಾಧಿಸಿದ್ದೇನೆ” ಎಂದಿದ್ದಾರೆ.
ಹಿತೇಶ್‌ನ ತಮ್ಮ ಹೇಮಂತ್ ಕೂಡ ಇದೀಗ ಅಣ್ಣನಿಂದ ಸ್ಫೂರ್ತಿ ಪಡೆದು ಸೇನೆಗೆ ಸೇರಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “”ಅಪ್ಪ ತೀರಿ ಹೋದ ಮೇಲೆ ಬದುಕು ತೀರಾ ಕಷ್ಟವಾಗಿತ್ತು. ಅಮ್ಮ ತುಂಬಾ ಕಷ್ಟ ಪಟ್ಟು ನಮ್ಮನ್ನು ಬೆಳೆಸಿದರು. ಯೋಧನ ಮನೆಯ ಪರಿಸ್ಥಿತಿ ನೋಡಿದ್ದರೂ ನಮ್ಮ ಗುರಿ ಬದಲಾಗಿಲ್ಲ. ನಾನೂ ಅಣ್ಣನಂತೆ ಸೇನೆ ಸೇರುತ್ತೇನೆ” ಎಂದಿದ್ದಾರೆ.