ನವದೆಹಲಿ: ಶ್ರದ್ಧಾ ವಾಲ್ಕರ್ ಮೃತದೇಹವನ್ನು ಆರೋಪಿ ಅಫ್ತಾಬ್ ಪೂನಾವಾಲಾ ಗರಗಸ ಬಳಸಿ ತುಂಡರಿಸಿರುವುದು ವೈಜ್ಞಾನಿಕ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ನವದೆಹಲಿಯ ವಿವಿಧೆಡೆ ಸಂಗ್ರಹಿಸಿದ್ದ ಶ್ರದ್ಧಾ ಅವರ 23 ಮೂಳೆಗಳನ್ನು ಪೊಲೀಸರು ವೈಜ್ಞಾನಿಕ ಪರೀಕ್ಷೆಗಾಗಿ ನವದೆಹಲಿಯ ಏಮ್ಸ್‌ಗೆ ಕಳುಹಿಸಿದ್ದರು. ಶ್ರದ್ಧಾ ಅವರ ತಂದೆಯ ಡಿಎನ್‌ಎ ಜತೆ ದಕ್ಷಿಣ ದೆಹಲಿಯ ಮೆಹೌಲಿ ಅರಣ್ಯ ಪ್ರದೇಶದಲ್ಲಿ ಸಿಕ್ಕ ಮೂಳೆಗಳ ಡಿಎನ್‌ಎ ಹೊಂದಿಕೆಯಾದ ಹಿನ್ನೆಲೆಯಲ್ಲಿ ಅದನ್ನು ನಡೆಸಲಾಗಿದೆ.
ಮೂಳೆ ಹಾಗೂ ಕೂದಲಿನ ಮಾದರಿಗಳನ್ನು ಹೈದರಾಬಾದ್‌ನಲ್ಲಿರುವ ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ಆ್ಯಂಡ್ ಡಯಾಗ್ನೊಸ್ಟಿಕ್(ಸಿಡಿಎಫ್ಡಿ) ಕೇಂದ್ರಕ್ಕೆ ಕಳುಹಿಸಲಾಗಿತ್ತು. ಗರಗಸ ಬಳಸಿ ಮೃತದೇಹವನ್ನು ತುಂಡರಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಕುರಿತಂತೆ ಮಾಸಾಂತ್ಯಕ್ಕೆ ದೆಹಲಿಯ ಸಾಕೇತ್ ಕೋರ್ಟ್‌ಗೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಆರೋಪಿ ಆಫ್ತಾಬ್‌ನ ಪಾಲಿಗ್ರಾಫ್ ಮತ್ತು ನಾರ್ಕೊ ಪರೀಕ್ಷೆಯ ವರದಿಯನ್ನು ಪೊಲೀಸರು ಪಡೆದಿದ್ದಾರೆ.
2022ರ ಮೇ 18ರಂದು ಶ್ರದ್ಧಾಳನ್ನು ಹತ್ಯೆ ಮಾಡಿದ್ದ ಆಫ್ತಾಬ್, ಆಕೆಯ ಮೃತದೇಹಗಳನ್ನು 35 ತುಂಡುಗಳಾಗಿ ಕತ್ತರಿಸಿ ದೇಹದ ಭಾಗಗಳನ್ನು ದೆಹಲಿ ಮತ್ತು ಗುರುಗ್ರಾಮದ ಅರಣ್ಯ ಪ್ರದೇಶದ ವಿವಿಧೆಡೆ ಎಸೆದಿದ್ದ. ನ.12ರಂದು ಪೊಲೀಸರು ಆಫ್ತಾಬ್‌ನನ್ನು ಬಂಧಿಸಿದ್ದರು.