ಕಾಬೂಲ್/ಹೊಸದಿಲ್ಲಿ: ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ದುರಾಕ್ರಮಣದ ವಿರುದ್ಧ ಪ್ರತಿರೋಧ ಹೆಚ್ಚುತ್ತಿದ್ದು, 350 ಉಗ್ರರನ್ನು ಹತ್ಯೆ ಮಾಡಲಾಗಿದೆ. ತಾಲಿಬಾನ್ ಉಗ್ರರಿಗೆ ಮೊದಲ ಅತ್ಯಂತ ಪ್ರಬಲ ಆಘಾತವಿದು ಎನ್ನಲಾಗುತ್ತಿದೆ. ಅಫ್ಘಾನಿಸ್ಥಾನದ ಕೆಲವು ಪ್ರದೇಶಗಳಲ್ಲಿ ತಾಲಿಬಾನ್ ವಿರೋಧಿ ಮನೋಭಾವ ಬಲವಾಗುತ್ತಿದೆ. ಭಗ್ಲಾನ್ ಪ್ರಾಂತ್ಯದ ಅಂದರಾಬಾದ್‌ನಲ್ಲಿ ಸ್ಥಳೀಯರು 300 ಮಂದಿ ತಾಲಿಬಾನ್ ಉಗ್ರರನ್ನು ಕೊಂದು ಹಾಕಿದ್ದಾರೆ.
ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರ ನಾರ್ದರ್ನ್ ಅಲಯನ್ಸ್‌ಗೆ ಅಂದರಾಬಾದ್‌ನ ಸ್ಥಳೀಯರು ಬೆಂಬಲ ನೀಡಿದ್ದಾರೆ. ಸಲೇಹ್ ಉಗ್ರರಿಗೆ ನೇರ ಸವಾಲು ಹಾಕಿರುವುದರಿಂದ ಪಂಜ್‌ಶೀರ್, ಕಪಿಸಾದಲ್ಲಿ ಹೋರಾಟಗಳು ನಡೆದಿವೆ ಎಂದು ವರದಿಯಾಗಿದೆ.
ಫಜ್‌ನಲ್ಲಿ 50 ಸಾವು:
ಮತ್ತೂಂದು ಪ್ರಾಂತ್ಯ ಫಜ್‌ನಲ್ಲಿ 50 ತಾಲಿಬಾನಿಗಳನ್ನು ಕೊಲ್ಲ ಲಾಗಿದೆ. ಸತ್ತವರಲ್ಲಿ ಜಿಲ್ಲೆಯ ತಾಲಿಬಾನ್ ಮುಖ್ಯಸ್ಥ ಕೂಡ ಸೇರಿದ್ದಾನೆ. 20 ಮಂದಿಯನ್ನು ಸೆರೆ ಹಿಡಿಯಲಾಗಿದೆ. ಈ ನಡುವೆ ಉತ್ತರ ಭಾಗದ ಮೂರು ಜಿಲ್ಲೆಗಳನ್ನು ಸ್ಥಳೀಯರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ.
ಆ. 31ರ ಗಡುವು: ತಾಲಿಬಾನ್ :
ಅಮೆರಿಕ ಮತ್ತು ಬ್ರಿಟಿಶ್ ಯೋಧರು ಆ. 31ರ ಬಳಿಕ ಅಫ್ಘಾನ್‌ನಲ್ಲಿ ಇರುವಂತಿಲ್ಲ. ಗಡುವು ಮೀರಿದರೆ ಪ್ರತಿಕೂಲ ಪರಿಣಾಮ ಖಚಿತ ಎಂದು ತಾಲಿಬಾನಿಗಳು ಎಚ್ಚರಿಸಿದ್ದಾರೆ. ವಕ್ತಾರ ಸುಹೈಲ್ ಶಹೀನ್ ಮಾತನಾಡಿ, ಅವಧಿ ವಿಸ್ತರಣೆ ಸಾಧ್ಯವಿಲ್ಲ ಎಂದಿದ್ದಾನೆ. ಇದೇ ವೇಳೆ ಕಾಬೂಲ್‌ನಲ್ಲಿ ಗೊಂದಲ, ಗುಂಡು ಹಾರಾಟ ಮುಂದು ವರಿದಿದ್ದು, ಅಫ್ಘಾನ್ ಯೋಧನೊಬ್ಬ ಅಸುನೀಗಿದ್ದಾನೆ.