ದುಬೈ: ಮುಂದಿನ ತಿಂಗಳು ಯುಎಇಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಫ್ಘಾನಿಸ್ತಾನ ತಂಡ ಯಾವ ಧ್ವಜದಡಿಯಲ್ಲಿ ಸ್ಪರ್ಧಿಸಬಹುದು ಎಂಬ ಪ್ರಶ್ನೆಯೊಂದು ಐಸಿಸಿಯನ್ನು ಕಾಡಿದೆ.
ತಾಲಿಬಾನ್ ಧ್ವಜದಡಿ ಆಡುವುದಾದರೆ ಅಫ್ಘಾನಿಸ್ತಾನವನ್ನು ಕೂಟದಿಂದ ಕೈಬಿಡುವುದು ಖಚಿತ ಎಂದು ತಿಳಿದು ಬಂದಿದೆ.
ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಎಲ್ಲ 16 ತಂಡಗಳು ತಮ್ಮ ರಾಷ್ಟ್ರಧ್ವಜವನ್ನು ಐಸಿಸಿಗೆ ಒಪ್ಪಿಸಬೇಕಿದೆ. ಒಂದು ವೇಳೆ ಅಫ್ಘಾನಿಸ್ಥಾನ ತಾಲಿಬಾನ್ ಧ್ವಜವನ್ನು ನೀಡಿದರೆ ಆಗೇನು ಮಾಡಬೇಕು ಎಂಬ ಕುರಿತು ಕ್ರಿಕೆಟ್ ಆಡಳಿತ ಮಂಡಳಿ ಯೋಚಿಸುತ್ತಿದೆ.
ಮತದಾನ ನಿರ್ಣಾಯಕ: ಅಫ್ಘಾನಿಸ್ತಾನ ಐಸಿಸಿಯ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಹೊಂದಿರುವ ತಂಡ. ಹಾಗೆಯೇ ಟಿ20 ವಿಶ್ವಕಪ್‌ಗೆ ನೇರಪ್ರವೇಶ ಪಡೆದಿರುವ ತಂಡವೂ ಹೌದು. ಹೀಗಾಗಿ ಏಕಾಏಕಿ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗದು. ಇದನ್ನು ಐಸಿಸಿಯ 17 ಮಂಡಳಿಗಳ ಸದಸ್ಯರು ಮತದಾನದ ಮೂಲಕ ನಿರ್ಧರಿಸಬೇಕಾಗುತ್ತದೆ. ಅಫ್ಘಾನ್‌ಗೆ ವಿರುದ್ಧವಾಗಿ 12 ಮತಗಳು ಬಂದರಷ್ಟೇ ಅದನ್ನು ಕೂಟದಿಂದ ಕೈಬಿಡಬಹುದಾಗಿದೆ.
ಆಗ ಐಸಿಸಿಯ ಮುಂದಿನ ಹೆಜ್ಜೆ ಇನ್ನಷ್ಟು ಕಠಿಣವಾಗಿರಲಿದೆ. ಕೂಟವನ್ನು 15 ತಂಡಗಳಿಗೆ ಸೀಮಿತಗೊಳಿಸುವುದೇ, ಅಫ್ಘಾನ್‌ಗೆ ಬದಲಿಯಾಗಿ ಬೇರೊಂದು ತಂಡವನ್ನು ಆರಿಸಬೇಕೇ, ಆರಿಸುವುದಾದರೆ ಇದಕ್ಕೇನು ಮಾನದಂಡ ಎಂಬ ಕುರಿತು ಅತೀ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಟಿ20 ವಿಶ್ವಕಪ್ ಆರಂಭಕ್ಕೆ ಉಳಿದಿರುವುದು 25 ದಿನ ಮಾತ್ರ.