Advertisement

World Cup ಚೇತರಿಸಿದ ಲಂಕೆಗೆ ಅಫ್ಘಾನ್‌ ಸವಾಲು

12:23 AM Oct 30, 2023 | Team Udayavani |

ಪುಣೆ: ಸತತ ಎರಡು ಪಂದ್ಯಗಳನ್ನು ಗೆದ್ದ ಖುಷಿಯಲ್ಲಿರುವ ಶ್ರೀಲಂಕಾ ಸೋಮವಾರ ವಿಶ್ವಕಪ್‌ ಪಂದ್ಯದಲ್ಲಿ ಅಪಾಯಕಾರಿ ಅಫ್ಘಾನಿ ಸ್ಥಾನವನ್ನು ಎದುರಿಸಲಿದೆ.

Advertisement

ಎರಡೂ ತಂಡಗಳು 5 ಪಂದ್ಯಗಳ ನ್ನಾಡಿದ್ದು, ಎರಡರಲ್ಲಿ ಜಯ ಸಾಧಿಸಿವೆ. ಆದರೆ ಇಲ್ಲಿ ಯಾರೇ ಗೆದ್ದು ಬಂದರೂ ದೊಡ್ಡ ಲಾಭವೇನೂ ಆಗದು. ಸೋತ ತಂಡ ನಿರ್ಗಮನಕ್ಕೆ ಹತ್ತಿರವಾಗಲಿದೆ. ಇದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಇಬ್ಬರೂ ಜಿದ್ದಾಜಿದ್ದಿ ಪೈಪೋಟಿ ನಡೆಸ ಬಹುದೆಂಬುದೊಂದು ಲೆಕ್ಕಾಚಾರ.

ಶ್ರೀಲಂಕಾ ಸತತ 3 ಸೋಲಿನ ಬಳಿಕ ಗೆಲುವಿನ ಮುಖ ಕಂಡಿತ್ತು. ಅಷ್ಟರಲ್ಲಿ ತಂಡದ ಯಶಸ್ವಿ ಬೌಲರ್‌ ಲಹಿರು ಕುಮಾರ ಗಾಯಾಳಾಗಿ ಹೊರಬೀಳುವ ಸಂಕಟಕ್ಕೆ ಸಿಲುಕಿದರು. ಇದು ಖುಷಿಯ ನಡುವೆ ಲಂಕೆಗೆ ಎದುರಾಗಿರುವ ದೊಡ್ಡ ಆಘಾತ. ಇವರ ಸ್ಥಾನವನ್ನು ತುಂಬು ವಲ್ಲಿ ದುಷ್ಮಂತ ಚಮೀರ ಯಶಸ್ವಿ ಆಗಬಹುದೇ ಎಂಬುದೊಂದು ಪ್ರಶ್ನೆ.

ಕಳೆದ ಪಂದ್ಯದಲ್ಲಿ ವಿಶ್ವ ಚಾಂಪಿ ಯನ್‌ ಇಂಗ್ಲೆಂಡ್‌ ತಂಡವನ್ನು ಉರುಳಿ ಸುವಲ್ಲಿ ಲಹಿರು ಕುಮಾರ ವಹಿಸಿದ ಪಾತ್ರ ಅಮೋಘವಾಗಿತ್ತು. ಹಿರಿಯ ಆಟಗಾರ ಏಂಜೆಲೊ ಮ್ಯಾಥ್ಯೂಸ್‌ ಕೂಡ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿ ದ್ದರು. ಫೀಲ್ಡಿಂಗ್‌ನಲ್ಲೂ ಲಂಕಾ ಮಿಂಚಿತ್ತು.

ದಿಲ್ಶನ್‌ ಮದುಶಂಕ (11 ವಿಕೆಟ್‌) ಮತ್ತು ಕಸುನ್‌ ರಜಿತ (7 ವಿಕೆಟ್‌) ಲಂಕೆಯ ಈವರೆಗಿನ ಯಶಸ್ವಿ ಬೌಲರ್‌ಗಳು. ಆದರೆ ಮಹೀಶ್‌ ತೀಕ್ಷಣ ಅವರ ಸ್ಪಿನ್‌ ದಾಳಿ ಅಷ್ಟೇನೂ ತೀಕ್ಷ್ಣವಾಗಿ ಗೋಚರಿಸಿಲ್ಲ. ಮೇಲ್ನೋಟಕ್ಕೆ ಲಂಕೆಗಿಂತ ಅಫ್ಘಾನಿಸ್ಥಾನದ ಬೌಲಿಂಗ್‌ ದಾಳಿಯೇ ಅತ್ಯಂತ ಹರಿತ ಎಂಬುದರಲ್ಲಿ ಎರಡು ಮಾತಿಲ್ಲ.

Advertisement

ಲಂಕಾ ಬ್ಯಾಟಿಂಗ್‌ ಸರದಿಯಲ್ಲಿ ಪಥುಮ್‌ ನಿಸ್ಸಂಕ, ಸದೀರ ಸಮರ ವಿಕ್ರಮ ಮೇಲೆ ಹೆಚ್ಚಿನ ನಂಬಿಕೆ ಇರಿಸಬಹುದು. ನಿಸ್ಸಂಕ ಈಗಾಗಲೇ ಸತತ 4 ಅರ್ಧ ಶತಕ ಬಾರಿಸಿ ಪ್ರಚಂಡ ಫಾರ್ಮ್ ತೆರೆದಿರಿಸಿದ್ದಾರೆ. ಹಾಗೆಯೇ ಕುಸಲ್‌ ಮೆಂಡಿಸ್‌ ಕೂಡ ಶತಕದೊಂದಿಗೆ ಮೆರೆದಿದ್ದಾರೆ.

ಪಾಕ್‌ಗೆ ಏಟು ನೀಡಿದ ತಂಡ
ಯಾವುದಕ್ಕೂ ಅಫ್ಘಾನ್‌ ಪಡೆ ಪಾಕಿಸ್ಥಾನವನ್ನು ಉರುಳಿಸಿ ಬಂದಿ ತೆಂಬುದನ್ನು ಮರೆಯುವಂತಿಲ್ಲ. ಏಕದಿನದಲ್ಲಿ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಬಂದ ಹುಮ್ಮಸ್ಸು ಮುಂದಿನ ಕೆಲವು ಪಂದ್ಯಗಳಿಗೆ ಸಾಕು. ಹೀಗಾಗಿ ಅದು ಲಂಕೆಯನ್ನೂ ಬುಡ ಮೇಲು ಮಾಡಿದರೆ ಅಚ್ಚರಿಯಿಲ್ಲ. ಈ ನಡುವೆ ಅಫ್ಘಾನ್‌ ಆಟಗಾರರಿಗೆ ಭರ್ತಿ ಒಂದು ವಾರದ ವಿಶ್ರಾಂತಿ ಕೂಡ ಲಭಿಸಿದೆ.

ಗುರ್ಬಜ್‌ 224 ರನ್‌ ಗಳಿಸಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿ ದ್ದಾರೆ. ಇಬ್ರಾಹಿಂ ಜದ್ರಾನ್‌, ನಾಯಕ ಹಶ್ಮತುಲ್ಲ ಶಾಹಿದಿ, ರೆಹಮತ್‌ ಶಾ, ಅಜ್ಮತುಲ್ಲ ಒಮರ್‌ಜಾಯ್‌ ಕೂಡ ಬ್ಯಾಟಿಂಗ್‌ ಲಯದಲ್ಲಿದ್ದಾರೆ. ಒಂದು ವೇಳೆ ನವೀನ್‌ ಉಲ್‌ ಹಕ್‌, ಫ‌ಜಲ್‌ ಹಕ್‌ ಫಾರೂಖೀ ಸೇರಿಕೊಂಡು ಲಂಕೆಗೆ ಆರಂಭಿಕ ಆಘಾತವಿಕ್ಕಿದ್ದೇ ಆದರೆ ಅಫ್ಘಾನ್‌ ಮೇಲುಗೈ ನಿರೀಕ್ಷಿಸಬಹುದು. ಬಳಿಕ ಹೇಗೂ ತ್ರಿವಳಿ ಸ್ಪಿನ್ನರ್‌ಗಳಾದ ರಶೀದ್‌ ಖಾನ್‌, ಮೊಹಮ್ಮದ್‌ ನಬಿ ಮತ್ತು ಮುಜೀಬ್‌ ಉರ್‌ ರೆಹಮಾನ್‌ ಇದ್ದಾರೆ.

 ಆರಂಭ: ಅ. 2.00
 ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ವಿಶ್ವಕಪ್‌ ಮುಖಾಮುಖಿ
 ಪಂದ್ಯ: 02
 ಶ್ರೀಲಂಕಾ ಜಯ: 02
 ಅಫ್ಘಾನಿಸ್ಥಾನ ಜಯ: 00
2019ರ ವಿಶ್ವಕಪ್‌ ಫ‌ಲಿತಾಂಶ
 ಶ್ರೀಲಂಕಾಕ್ಕೆ 34 ರನ್‌ ಜಯ

3ನೇ ಬದಲಾವಣೆ; ಕುಮಾರ ಬದಲು ಚಮೀರ

ಕುಮಾರ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ದುಷ್ಮಂತ ಚಮೀರ ಅವರನ್ನು ಸೇರಿಸಿಕೊಳ್ಳಲಾಗಿದೆ.
ಲಹಿರು ಕುಮಾರ ಉತ್ತಮ ಲಯದಲ್ಲಿದ್ದರು. ಇಂಗ್ಲೆಂಡ್‌ ವಿರುದ್ಧ 35ಕ್ಕೆ 3 ವಿಕೆಟ್‌ ಉರುಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಇವರ ಗೈರು ಲಂಕಾ ಬೌಲಿಂಗ್‌ ವಿಭಾಗಕ್ಕೆ ಬಿದ್ದ ದೊಡ್ಡ ಹೊಡೆತ. ದುಷ್ಮಂತ ಚಮೀರ ವಿಶ್ವಕಪ್‌ ತಂಡದ ಆಯ್ಕೆಯ ವೇಳೆ ಗಾಯಾಳಾದ ಕಾರಣ ಅವಕಾಶ ಪಡೆದಿರಲಿಲ್ಲ.

ಇದು ವಿಶ್ವಕಪ್‌ ತಂಡ ಪ್ರಕಟಗೊಂಡ ಬಳಿಕ ಶ್ರೀಲಂಕಾ ತಂಡದಲ್ಲಿ ಸಂಭವಿಸಿದ 3ನೇ ಬದಲಾವಣೆ. ಇದಕ್ಕೂ ಮೊದಲು ಮತೀಶ ಪತಿರಣ, ನಾಯಕ ದಸುನ್‌ ಶಣಕ ಕೂಟದಿಂದ ಬೇರ್ಪಟ್ಟಿದ್ದರು. ಇವರ ಬದಲು ಚಮಿಕ ಕರುಣಾರತ್ನೆ ಮತ್ತು ಏಂಜೆಲೊ ಮ್ಯಾಥ್ಯೂಸ್‌ ಅವರನ್ನು ಸೇರಿಸಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next