ಕಿಂಗ್ಸ್ ಟೌನ್: ಐಸಿಸಿ ಟಿ20 ವಿಶ್ವಕಪ್ 2024 ಮತ್ತೊಂದು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದೆ. ಸತತ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸಾಗುತ್ತಿದ್ದ ಬಲಿಷ್ಠ ಆಸ್ಟ್ರೇಲಿಯಾಗೆ ಅಫ್ಘಾನಿಸ್ತಾನ ಕಡಿವಾಣ ಹಾಕಿದೆ. ಸೂಪರ್ 8 ಹಂತದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸೆಮಿ ಆಸೆ ಜೀವಂತವಾಗಿರಿಸಿಕೊಂಡಿದೆ.
ಕಿಂಗ್ಸ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದರೆ, ಆಸೀಸ್ ತಂಡವು ಕೇವಲ 127 ರನ್ ಮಾಡಲು ಮಾತ್ರ ಶಕ್ತವಾಯಿತು. ಈ ಮೂಲಕ ಅಫ್ಘಾನ್ 21 ರನ್ ಅಂತರದ ಗೆಲುವು ಸಾಧಿಸಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಅಫ್ಘಾನ್ ಗೆ ಗುರ್ಬಾಜ್ ಮತ್ತು ಜದ್ರಾನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಗೆ 118 ರನ್ ಒಟ್ಟುಗೂಡಿಸಿದ ಅವರು ಕೂಟದ ಮೂರನೇ ಶತಕದ ಜೊತೆಯಾಟವಾಡಿದರು. ಬೌಲರ್ ಗಳಿಗೆ ನೆರವು ನೀಡುತ್ತಿದ್ದ ಪಿಚ್ ನಲ್ಲಿ ಎಚ್ಚರಿಕೆಯ ಆಟವಾಡಿದ ಗುರ್ಬಾಜ್ 49 ಎಸೆತಗಳಲ್ಲಿ 60 ರನ್ ಮಾಡಿದರೆ, ಇಬ್ರಾಹಿಂ ಜದ್ರಾನ್ 48 ಎಸೆಗಳಲ್ಲಿ 51 ರನ್ ಗಳಿಸಿದರು.
ಇವರಿಬ್ಬರು ಔಟಾದ ಬಳಿಕ ಅಫ್ಘಾನ್ ಸತತ ವಿಕೆಟ್ ಕಳೆದುಕೊಂಡಿತು. ಜನ್ನತ್ 13 ರನ್, ನಬಿ 10 ರನ್ ಮಾಡಿದ್ದೆ ಬಳಿಕದ ಸಾಧನೆ. ಆಸೀಸ್ ಪರ ಪ್ಯಾಟ್ ಕಮಿನ್ಸ್ ಸತತ ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತು ವಿಶ್ವದಾಖಲೆ ಬರದರು.
ಇದನ್ನೂ ಓದಿ:T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್
ಗುರಿ ಬೆನ್ನತ್ತಿದ ಆಸೀಸ್ ಮೊದಲ ಓವರ್ ನಲ್ಲಿ ವಿಕೆಟ್ ಕಳೆದುಕೊಂಡಿರು. ಟ್ರಾವಿಸ್ ಹೆಡ್ ಅವರು ನವೀನ್ ಎಸೆತಕ್ಕೆ ಬೌಲ್ಡ್ ಆದರು. ಮ್ಯಾಕ್ಸವೆಲ್ 59 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ನಿಂತು ಆಡಲು ವಿಫಲರಾದರು.
ಅದ್ಭುತ ಬೌಲಿಂಗ್ ಮಾಡಿದ ಗುಲ್ಬದಿನ್ ನೈಬ್ ನಾಲ್ಕು ವಿಕೆಟ್ ಕಿತ್ತರೆ, ನವೀನ್ ಉಲ್ ಹಕ್ ಮೂರು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಅಫ್ಘಾನ್ ನ ಸೂಪರ್ 8 ಆಸೆ ಜೀವಂತವಾಗಿದೆ. ಭಾರತ ಸತತ ಎರಡು ಗೆಲುವಿನೊಂದಿಗೆ ಬಹುತೇಕ ಸೆಮಿ ಎಂಟ್ರಿ ಪಡೆದಿದೆ. ಅಫ್ಘಾನ್ ಮುಂದಿನ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಆಸೀಸ್ ತಂಡವು ಭಾರತದ ವಿರುದ್ದ ಕೊನೆಯ ಪಂದ್ಯವಾಡಲಿದೆ.