ವಾಷಿಂಗ್ಟನ್: ಸದ್ಯ ಉಗ್ರರ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಹಲವು ರೀತಿಯ ಸಂಕಷ್ಟಗಳಿಗೆ ಒಳಗಾಗುತ್ತಿದೆ. ವಿಶೇಷವಾಗಿ ಅಲ್ಲಿನ ಜನರು ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಡೆಂಗ್ಯೂ, ದಡಾರ, ಅತಿಸಾರ, ಕೊರೊನಾ ಸೋಂಕು ಅಲ್ಲಿನ ಜನರನ್ನು ಬಾಧಿಸುತ್ತಿದೆ. ವಿಶೇಷವಾಗಿ ಅತಿಸಾರ ಅಲ್ಲಿನ ಜನರನ್ನು ಹೈರಾಣುಗೊಳಿಸಿದೆ. ಕಾಬೂಲ್, ಪಕ್ತಿಕಾ, ಖೋಸ್ಟ್, ಜವಾಜ್‌ಜಾನ್, ಘಜ್ನಿ, ಕಂದಹಾರ್, ಜಬುಲ್ ಪ್ರಾಂತ್ಯಗಳಲ್ಲಿ ಅತಿಸಾರ ಹೆಚ್ಚಿನ ಸಂಖ್ಯೆಯಲ್ಲಿ ಬಾಧಿಸುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಈ ವಲಯಗಳಲ್ಲಿಯೇ 19,050 ಕೇಸುಗಳು ದೃಢಪಟ್ಟಿವೆ.
ಇದಲ್ಲದೆ ಹೆಚ್ಚಿನ ಪ್ರಾಂತ್ಯಗಳಲ್ಲಿ ದಡಾರದ ಪ್ರಕರಣಗಳೂ ಒಂದು ಬಾರಿ ತಾರಕಕ್ಕೆ ಏರಿ ಕಡಿಮೆಯಾಗಿವೆ. ಇತ್ತೀಚಿನ ವರದಿಗಳ ಪ್ರಕಾರ 64,654 ದಡಾರ ಪ್ರಕರಣಗಳು ಆ ದೇಶದಾದ್ಯಂತ ದೃಢಪಟ್ಟಿವೆ.
ಮತ್ತೊಂದು ಮಾರಕ ರೋಗ ಎಂದು ಪರಿಗಣಿಸಲಾಗಿರುವ ಕಾಂಗೋ ಜ್ವರ ಕೂಡ ಅಫ್ಘಾನಿಸ್ತಾನದ ಕೇಂದ್ರ, ಆಗ್ನೇಯ ಮತ್ತು ದಕ್ಷಿಣ ಭಾಗದ 13 ಪ್ರಾಂತ್ಯಗಳಲ್ಲಿ ದೃಢಪಟ್ಟಿದೆ.
ಹೀಗಾಗಿ, ಅಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೆರವು ನೀಡುವ ನಿಟ್ಟಿನಲ್ಲಿ ಡಬ್ಲ್ಯೂ ಎಚ್‌ಒ ತಾಲಿಬಾನ್ ಸರ್ಕಾರಕ್ಕೆ ನೆರವು ನೀಡುವುದಾಗಿ ಹೇಳಿದೆ. ಇತ್ತೀಚೆಗಷ್ಟೇ ಅಲ್ಲಿ ಭೂಕಂಪ ನಡೆದು ಭಾರೀ ಪ್ರಮಾಣದ ಹಾನಿ ಉಂಟಾಗಿತ್ತು.