ಕಾಬೂಲ್: ಅಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್ ಮನ್ ಉಸ್ಮಾನ್ ಘನಿ ಅವರು ದೇಶದ ಕ್ರಿಕೆಟ್ ಮಂಡಳಿಯಲ್ಲಿನ ರಾಜ್ಯ ವ್ಯವಹಾರಗಳ ವಿರುದ್ಧ ಅಸಮಾಧಾನ ತೋರಿದ್ದಾರೆ. ಮುಂಬರುವ ಬಾಂಗ್ಲಾದೇಶದ ವಿರುದ್ಧದ ದ್ವಿಪಕ್ಷೀಯ ಸರಣಿಗಾಗಿ ತಂಡದಲ್ಲಿ ಸ್ಥಾನ ಪಡೆಯದ ಘನಿ ಆಟದಿಂದ ‘ವಿರಾಮ ತೆಗೆದುಕೊಳ್ಳಲು’ ನಿರ್ಧರಿಸಿದ್ದಾರೆ.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ಎಸಿಬಿ) ವಿರುದ್ಧ ಮಾತನಾಡಿರುವ ಘನಿ, ಮೇಲಧಿಕಾರಿಗಳನ್ನು ‘ಭ್ರಷ್ಟರು’ ಎಂದು ಕರೆದಿದ್ದಾರೆ.
ಪ್ರಸ್ತುತ ತನ್ನನ್ನು ಕೈಬಿಟ್ಟಿರುವ ಬಗ್ಗೆ ಮುಖ್ಯ ಆಯ್ಕೆದಾರರು ಯಾವುದೇ ವಿವರಣೆಯನ್ನು ಹೊಂದಿಲ್ಲದ ಕಾರಣ ಮ್ಯಾನೇಜ್‌ಮೆಂಟ್ ಬದಲಾದ ನಂತರ ತಂಡಕ್ಕೆ ಮರಳಲು ಬಯಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:Shah Rukh Khan: ಶೂಟಿಂಗ್ ವೇಳೆ ಅವಘಡ; ರಕ್ತ ನಿಲ್ಲಲು ಸರ್ಜರಿಗೆ ಒಳಗಾದ ಶಾರುಖ್ ಖಾನ್
“ಎಚ್ಚರಿಕೆಯಿಂದ ಆಲೋಚಿಸಿದ ನಂತರ, ನಾನು ಅಫ್ಘಾನಿಸ್ತಾನ ಕ್ರಿಕೆಟ್ ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಕ್ರಿಕೆಟ್ ಮಂಡಳಿಯಲ್ಲಿರುವ ಭ್ರಷ್ಟ ನಾಯಕತ್ವ ನನ್ನನ್ನು ಹಿಂದೆ ಸರಿಯುವಂತೆ ಮಾಡಿದೆ. ನಾನು ನನ್ನ ಕಠಿಣ ಪರಿಶ್ರಮವನ್ನು ಮುಂದುವರಿಸುತ್ತೇನೆ. ಸರಿಯಾದ ಮ್ಯಾನೇಜ್ ಮೆಂಟ್ ಮತ್ತು ಆಯ್ಕೆ ಸಮಿತಿಯನ್ನು ಜಾರಿಗೆ ತರುವುದನ್ನು ಉತ್ಸುಕತೆಯಿಂದ ಕಾಯುತ್ತಿದ್ದೇನೆ” ಎಂದು ಘನಿ ಟ್ವಿಟರ್‌ನಲ್ಲಿ ಬರೆದ ಪೋಸ್ಟ್‌ಗಳ ಸರಣಿಯಲ್ಲಿ ತಿಳಿಸಿದ್ದಾರೆ.
ಉಸ್ಮಾನ್ ಘನಿ ಅವರು ಅಫ್ಘಾನಿಸ್ತಾನ ತಂಡದ ಪರ 17 ಏಕದಿನ ಮತ್ತು 35 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮಾರ್ಚ್ 27 ರಂದು ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಅವರು ಕೊನೆಯದಾಗಿ ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದರು. ಜನವರಿ 2022 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ತಂಡಕ್ಕಾಗಿ ಅವರ ಕೊನೆಯ ಏಕದಿನ ಪಂದ್ಯವಾಡಿದ್ದರು.