ಬರ್ಲಿನ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರು ಅಧಿಕಾರವನ್ನು ತಮ್ಮ ವಶಕ್ಕೆ ಪಡೆದುಕೊಂಡ ನಂತರ ಮಾನವೀಯತೆಯ ಬಿಕ್ಕಟ್ಟು ತಲೆದೋರಿದ್ದು, ಹಸಿವಿನಿಂದ ಕಂಗೆಟ್ಟಿರುವ ಜನ ಬದುಕಲು ತಮ್ಮ ಮಕ್ಕಳು ಹಾಗೂ ತಮ್ಮ ದೇಹದ ಅಂಗಾಂಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವ ಆಹಾರ ಯೋಜನೆಯ ಡೇವಿಡ್ ಬಾಸ್ಲೈ, ಅಫ್ಘಾನಿಸ್ತಾನದ ಅರ್ಧದಷ್ಟು ಜನಸಂಖ್ಯೆಯು ಹಸಿವಿನಿಂದ ಬಳಲುತ್ತಿದ್ದು ಅಂತಾರಾಷ್ಟ್ರೀಯ ಸಮುದಾಯ ನೆರವು ನೀಡಬೇಕಾದ ಅಗತ್ಯವಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಒಂದೆಡೆ ಬರಗಾಲ, ಸಾಂಕ್ರಾಮಿಕ ರೋಗಗಳ ಭೀತಿ, ಆರ್ಥಿಕ ಕುಸಿತದ ಜತೆಗೆ ವರ್ಷಗಳ ಕಾಲದ ಸಂಘರ್ಷದ ಪರಿಣಾಮ ಜನರು ಅನುಭವಿಸುವಂತಾಗಿದೆ ಎಂದು ವರದಿ ಹೇಳಿದೆ. ಅಂದಾಜು 24 ಮಿಲಿಯನ್ ಜನರು ತೀವ್ರ ಆಹಾರ ಅಭದ್ರತೆಯನ್ನು ಅನುಭವಿಸುತ್ತಿದ್ದಾರೆ. ಈ ಚಳಿಗಾಲದಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆ ಆಹಾರ ಕ್ಷಾಮ ಎದುರಿಸಲಿದ್ದು, ಈ ವರ್ಷದಲ್ಲಿ ಶೇ.97ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಕ್ಕೆ ಕುಸಿಯಲಿದೆ ಎಂದು ವರದಿ ವಿವರಿಸಿದೆ.
ಇಡೀ ಜಗತ್ತಿನಲ್ಲಿ ಅಫ್ಘಾನಿಸ್ತಾನ ಬಡತನ ದೇಶಗಳಲ್ಲಿ ಅಫ್ಘಾನಿಸ್ತಾನ್ ಕೂಡಾ ಸೇರಿದೆ. ಎರಡು ದಶಕಗಳ ತಾಲಿಬಾನ್ ಸಂಘರ್ಷದ ಪರಿಣಾಮ ಇದಾಗಿದೆ ಎಂದು ಬೆಸ್ಲೈ ತಿಳಿಸಿದ್ದಾರೆ. ಈಗ ನಾವು ದುರಂತವನ್ನು ಎದುರಿಸುವಂತಾಗಿದೆ. ಅಫ್ಘಾನಿಸ್ತಾನದ 40 ಮಿಲಿಯನ್ ಜನಸಂಖ್ಯೆಯಲ್ಲಿ 23 ಮಿಲಿಯನ್ ಜನರು ಹಸಿವಿನ ಬಾಗಿಲು ತಟ್ಟುವಂತಾಗಿದೆ ಎಂದು ತಿಳಿಸಿದ್ದಾರೆ.
ಉಪವಾಸ, ಆರ್ಥಿಕ ಸಂಕಷ್ಟದಿಂದ ಪಾರಾಗಲು ಅಫ್ಘಾನಿಸ್ತಾಣದ ಮಹಿಳೆಯೊಬ್ಬರು ತಮ್ಮ ಮಗಳನ್ನು ಮತ್ತೊಂದು ಕುಟುಂಬಕ್ಕೆ ಮಾರಾಟ ಮಾಡಿರುವುದಾಗಿ ಬೆಸ್ಲೈ ಬಹಿರಂಗಪಡಿಸಿದ್ದಾರೆ. ಆಗಸ್ಟ್ ನಲ್ಲಿ ಅಮೆರಿಕ ಮತ್ತು ಮೈತ್ರಿ ಪಡೆಗಳನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಯಿಸಿಕೊಂಡ ನಂತರ ತಾಲಿಬಾನ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
ಬಳಿಕ ಅಫ್ಘಾನಿಸ್ತಾನದಲ್ಲಿ ತಲೆದೋರಿದ ಬಿಕ್ಕಟ್ಟು, ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಹಲವಾರು ಅಂತಾರಾಷ್ಟ್ರೀಯ ಚಾರಿಟಿ ಮತ್ತು ಆರ್ಥಿಕ ನೆರವು ನೀಡುವುದನ್ನು ಮುಂದುವರಿಸುವ ಮೂಲಕ ದೇಶದಲ್ಲಿನ ಆಹಾರ ಅಭದ್ರತೆ ನೀಗಿಸಲು ಪ್ರಯತ್ನಿಸುತ್ತಿರುವುದಾಗಿ ವರದಿ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿನ ಹಸಿವಿನ ಬಿಕ್ಕಟ್ಟನ್ನು ಪರಿಹರಿಸಲು ಜಗತ್ತಿನ ಶ್ರೀಮಂತ ದೇಶಗಳು ನೆರವು ನೀಡಬೇಕೆಂದು ಬೆಸ್ಲೈ ಮನವಿ ಮಾಡಿಕೊಂಡಿದ್ದಾರೆ. ಇಲ್ಲಿನ ಜನರು ಹಸಿವಿನಿಂದ ಬಳಲುತ್ತಿದ್ದು, ಇದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.