Advertisement

ಅಫ್ಘಾನ್‌: ಭಾರತದ ಹೂಡಿಕೆಗಳ ಮೇಲೆ ತಾಲಿಬಾನಿಗಳ ಕರಿನೆರಳು 

11:01 PM Aug 18, 2021 | Team Udayavani |

ಅಫ್ಘಾನಿಸ್ಥಾನದಲ್ಲಿ ಶಾಂತಿ ನೆಲೆಸಿದ ಮೇಲೆ ಭಾರತವೂ ಆ ದೇಶ ಕಟ್ಟುವ ಕಾಯಕದಲ್ಲಿ ಕೈಜೋಡಿಸಿತ್ತು. ಅಮೆರಿಕ ಮತ್ತು ನ್ಯಾಟೋ ಪಡೆಗಳು, ಅದಕ್ಕೆ ಭದ್ರತೆಯ ಶಕ್ತಿ ನೀಡಿದ್ದರೆ, ಭಾರತ ಮೂಲಸೌಕರ್ಯಗಳ ಶಕ್ತಿ ನೀಡಿತ್ತು.

Advertisement

ಅಲ್ಲಿನ ಸಂಸತ್‌ ಭವನದಿಂದ ಹಿಡಿದು ನೀರಾವರಿಗಾಗಿ ಡ್ಯಾಂವೊಂದನ್ನೂ ಭಾರತ ನಿರ್ಮಿಸಿಕೊಟ್ಟಿತ್ತು. ಅಷ್ಟೇ ಅಲ್ಲ ಇನ್ನೂ ಹಲವು ಮೂಲಸೌಕರ್ಯಗಳಿಗೆ ಹಣ ಸುರಿದಿತ್ತು. ಒಟ್ಟಾರೆಯಾಗಿ 300 ಕೋಟಿ ಅಮೆರಿಕನ್‌ ಡಾಲರ್‌ಗಿಂತ ಹೆಚ್ಚು

ಹಣವನ್ನು ಭಾರತ ವೆಚ್ಚ ಮಾಡಿದೆ. ಇದೀಗ ತಾಲಿಬಾನ್‌ ಉಗ್ರರು ದೇಶದ ಮೇಲೆ ಹಿಡಿತ ಸಾಧಿಸಿರುವುದರಿಂದ ಭಾರತದ ಈ ಎಲ್ಲ ಹೂಡಿಕೆಗಳ ಮೇಲೆ ಆತಂಕದ ಕರಿಛಾಯೆ ಆವರಿಸಿದೆ.

ಅಮೆರಿಕ ಮತ್ತು ನ್ಯಾಟೋ ಪಡೆಗಳ ನಿರ್ಗಮನದ ಅನಂತರ ಅಫ್ಘಾನಿಸ್ಥಾನದ ಮೇಲೆ ತನ್ನ ಪೂರ್ಣ ಹಿಡಿತವನ್ನು ಸಾಧಿಸಿರುವ ತಾಲಿಬಾನ್‌ ಉಗ್ರರು ಅಫ್ಘಾನಿಸ್ಥಾನದ ಆಡಳಿತವನ್ನು ತನ್ನ ತೆಕ್ಕೆಗೆ ಸೆಳೆದು­ಕೊಂಡಿದ್ದಾರೆ. ತಾಲಿಬಾನಿಗಳು ದಶಕಗಳಿಂದ ನಡೆಸುತ್ತ ಬಂದಿದ್ದ ಹಿಂಸಾತ್ಮಕ ಹೋರಾಟ ಒಂದಿಷ್ಟು ಹಿನ್ನೆಲೆಗೆ ಸರಿದು ಅಲ್ಲಿ ಪ್ರಜಾಸತ್ತಾತ್ಮಕ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತ ಕಳೆದೆರಡು ದಶಕಗಳಿಂದೀಚೆಗೆ ಅಫ್ಘಾನಿಸ್ಥಾನದ ಪುನರ್‌ನಿರ್ಮಾಣಕ್ಕಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದೇ ಅಲ್ಲದೆ ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನೂ ಮಾಡಿದೆ. ಇದು ಭಾರತ ಮತ್ತು ಅಫ್ಘಾನಿಸ್ಥಾನದ ನಡುವೆ ಸೌಹಾರ್ದ­ಯುತ ಬಾಂಧವ್ಯಕ್ಕೆ ನಾಂದಿ ಹಾಡಿತು. ವಾಣಿಜ್ಯ ಮತ್ತು ರಕ್ಷಣ ಕಾರ್ಯತಂತ್ರದ ವಿಚಾರಗಳಲ್ಲೂ ಅಫ್ಘಾನಿಸ್ಥಾನ ಭಾರತದ ಪರಮಾಪ್ತ ರಾಷ್ಟ್ರವಾಗಿದೆ.

1996 ಮತ್ತು 2001ರ ಅವಧಿಯಲ್ಲಿ ಅಫ್ಘಾನಿಸ್ಥಾನ ದಲ್ಲಿ ತಾಲಿಬಾನಿ ಆಡಳಿತವಿದ್ದ ಸಂದರ್ಭದಲ್ಲಿ ಅಫ್ಘಾನಿಸ್ಥಾನದೊಂದಿಗಿನ ಮೈತ್ರಿಯನ್ನು ಭಾರತ ಸಂಪೂರ್ಣ ಕಡಿದುಕೊಂಡು ವಿಶ್ವ ಸಮುದಾಯ­ದೊಂದಿಗೆ ಗುರುತಿಸಿಕೊಂಡಿತ್ತು ( ಈ ಅವಧಿಯಲ್ಲಿ ಪಾಕಿಸ್ಥಾನ, ಯುಎಇ ಮತ್ತು ಸೌದಿ ಅರೇಬಿಯಾ ಮಾತ್ರ ಅಫ್ಘಾನ್‌ನೊಂದಿಗಿನ ಸಂಬಂಧವನ್ನು ಮುಂದು ವರಿಸಿದ್ದವು). 9/11ರ ದಾಳಿಯ ಬಳಿಕ ಅಮೆರಿಕವು ತಾಲಿಬಾನ್‌ ಉಗ್ರರ ವಿರುದ್ಧ ಕಠಿನ ನಿಲುವನ್ನು ತನ್ನದಾಗಿಸಿಕೊಂಡಿದ್ದೇ ಅಲ್ಲದೆ ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳನ್ನು ದಮನಿಸಿ ಅಲ್ಲಿ ಶಾಂತಿಯುತ ಮತ್ತು ಸ್ಥಿರ ಸರಕಾರದ ಸ್ಥಾಪನೆಗಾಗಿ ತನ್ನ ಸೇನಾಪಡೆಗಳನ್ನು ರವಾನಿಸಿತು. ಅಫ್ಘಾನಿಸ್ಥಾನದಲ್ಲಿನ ತಾಲಿಬಾನಿ ಆಡಳಿತಕ್ಕೆ ಅಂತ್ಯ ಕಾಣಿಸಿ ಅಲ್ಲಿ ಪ್ರಜಾಸತ್ತಾತ್ಮಕ ಸರಕಾರವನ್ನು ಅಧಿಕಾರಕ್ಕೇರಿಸುವಲ್ಲಿ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಯಶಸ್ವಿಯಾಗಿದ್ದವು. ಅಷ್ಟು ಮಾತ್ರವಲ್ಲದೆ ಇದಾದ ಬಳಿಕ ನ್ಯಾಟೋ ಪಡೆಗಳು ಆ ದೇಶದ ರಕ್ಷಣೆಗಾಗಿ ಅಲ್ಲೇ ನೆಲೆನಿಂತು ಆ ದೇಶದ ಯೋಧರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಿದ್ದವು.

Advertisement

ಈ ಅವಧಿಯಲ್ಲಿ ಭಾರತವು ಅಫ್ಘಾನಿಸ್ಥಾನದ ಪುನರ್‌ ನಿರ್ಮಾಣ ಕಾರ್ಯದಲ್ಲಿ ಆ ರಾಷ್ಟ್ರದೊಂದಿಗೆ ಕೈಜೋಡಿಸಿತು. ಪ್ರಮುಖ ರಸ್ತೆಗಳು, ಅಣೆಕಟ್ಟುಗಳು, ವಿದ್ಯುತ್‌ ಪ್ರಸರಣ ಮಾರ್ಗಗಳು ಮತ್ತು ಸಬ್‌ಸ್ಟೇಶನ್‌ಗಳು, ಶಾಲೆಗಳು ಹಾಗೂ ಆಸ್ಪತ್ರೆಗಳು ಇತ್ಯಾದಿಗಳ ನಿರ್ಮಾಣಕ್ಕಾಗಿ ಸರಿಸುಮಾರು 300 ಕೋಟಿ ಡಾಲರ್‌ಗಳಿಗೂ ಅಧಿಕ ಹಣಕಾಸು ನೆರವನ್ನು ಭಾರತ ನೀಡಿದೆ. 2011ರಲ್ಲಿ ಉಭಯ ದೇಶಗಳ ನಡುವೆ ಮಾಡಿ ಕೊಳ್ಳಲಾದ ಕಾರ್ಯತಂತ್ರದ ಸಹಭಾಗಿತ್ವ ಒಪ್ಪಂದದಲ್ಲಿ ಮೂಲಸೌಕರ್ಯ ಮತ್ತು ಸಂಸ್ಥೆಗಳ ಪುನರ್‌ ನಿರ್ಮಾಣ, ಶಿಕ್ಷಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಸಲು ತಾಂತ್ರಿಕ ಸಹಕಾರ ಹಾಗೂ ಅಫ್ಘಾನಿಸ್ಥಾನದಲ್ಲಿ ಹೂಡಿಕೆ ಮಾಡಲು ಉತ್ತೇಜನ ನೀಡಲು ಭಾರತ ಸಮ್ಮತಿಸಿತು. ಅಷ್ಟು ಮಾತ್ರವಲ್ಲದೆ ಅಫ್ಘಾನಿಸ್ಥಾನದಲ್ಲಿ ತಯಾರಾದ ಉತ್ಪನ್ನಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸುಂಕ ರಿಯಾಯಿತಿ­ಯನ್ನು ನೀಡುವ ಘೋಷಣೆಯನ್ನು ಮಾಡಿತು. ಇದೀಗ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ವ್ಯಾಪಾರವು 100 ಕೋಟಿ ಡಾಲರ್‌ ಮೌಲ್ಯದ್ದಾಗಿದೆ.

ಸದ್ಯ ಅಫ್ಘಾನ್‌ನ ಎಲ್ಲ 34 ಪ್ರಾಂತಗಳಲ್ಲೂ ಭಾರತ ಒಂದಲ್ಲ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದ್ದು ಅದರಂತೆ ಸುಮಾರು 400ಕ್ಕೂ ಅಧಿಕ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದೀಗ ಅಫ್ಘಾನಿಸ್ಥಾನದಲ್ಲಿ ನಡೆಯು­ತ್ತಿರುವ ಬೆಳವಣಿಗೆಗಳು ಈ ಎಲ್ಲ ಯೋಜನೆಗಳ ಮೇಲೂ ಕರಿಛಾಯೆ ಬೀರುವ ಆತಂಕವನ್ನು ಮೂಡಿಸಿದೆ. ತಾಲಿಬಾನಿಗಳ ಕುಕೃತ್ಯಗಳಿಗೆ ಪಾಕಿಸ್ಥಾನ ಮತ್ತು ಚೀನ ಪರೋಕ್ಷವಾಗಿ ಬೆಂಬಲ ನೀಡುತ್ತಿರು­ವುದು ಭಾರತದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಅಫ್ಘಾನಿಸ್ಥಾನದಲ್ಲಿ ಭಾರತ ಕೈಗೆತ್ತಿಕೊಂಡ ಅಭಿವೃದ್ಧಿ ಯೋಜನೆಗಳು ಮತ್ತು ನೀಡಿದ ಕೊಡುಗೆಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಜರಾಂಜ್‌-ಡೆಲರಾಮ್‌ ಹೈವೇ :

ಇರಾನ್‌ ಗಡಿಯ ಸನಿಹದಲ್ಲಿರುವ ಜರಂಜ್‌ ಮತ್ತು ಡೆಲರಾಮ್‌ ನಡುವೆ 218 ಕಿ. ಮೀ. ದೂರದ ರಾಷ್ಟ್ರೀಯ ಹೆದ್ದಾರಿಯು ಭಾರತದ ಮಹತ್ತರ ಯೋಜನೆ­ಯಾಗಿದೆ. ಬಾರ್ಡರ್‌ ರೋಡ್‌ ಆರ್ಗನೈ­ಸೇಶನ್‌(ಬಿಆರ್‌ಒ) 150 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ ಈ ಹೆದ್ದಾರಿಯನ್ನು ನಿರ್ಮಿಸಿದೆ. ಅಫ್ಘಾನ್‌ನೊಂದಿಗಿನ ವ್ಯಾಪಾರಕ್ಕಾಗಿ ಭಾರತವು ತನ್ನ ಭೂಪ್ರದೇಶ ಬಳಸುವುದಕ್ಕೆ ಪಾಕಿಸ್ಥಾನ ನಿರ್ಬಂಧ ಹೇರಿರುವು ದರಿಂದಾಗಿ ಈ ಹೆದ್ದಾರಿಯು ಭಾರತ ಮತ್ತು ಅಫ್ಘಾನಿಸ್ಥಾನ ನಡುವಣ ಸರಕು ಸಾಗಣೆಗೆ ಅತ್ಯಂತ ಮಹತ್ತರವಾದ ಪರ್ಯಾಯ ಮಾರ್ಗವಾಗಿದೆ. ಭಾರತ ಅಭಿವೃದ್ಧಿ ಪಡಿಸಿರುವ ಇರಾನ್‌ನ ಚಬಾಹರ್‌ ಬಂದರಿನ ಮೂಲಕ ಅಫ್ಘಾನಿಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದೆ. ಕೊರೊನಾ ಸಾಂಕ್ರಾಮಿಕದ ವೇಳೆ ಭಾರತವು

75,000 ಟನ್‌ಗಳಷ್ಟು ಗೋಧಿಯನ್ನು ಇದೇ ಬಂದರಿನ ಮೂಲಕ ಅಫ್ಘಾನಿಸ್ಥಾನಕ್ಕೆ ರವಾನಿಸಿತ್ತು. ಚಬಾಹರ್‌ ಬಂದರಿನ ಅಭಿವೃದ್ಧಿ, ಜರಂಜ್‌ ಮತ್ತು ಡೆಲರಾಮ್‌ ನಡುವಣ ಈ ಹೆದ್ದಾರಿ ಮತ್ತು ಪರ್ಯಾಯ ಜಲಮಾರ್ಗಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಭಾರತ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗಿನ ತನ್ನ ವಾಣಿಜ್ಯ-ವ್ಯವಹಾರ ಸಂಬಂಧವನ್ನು ವೃದ್ಧಿಸಿಕೊಂಡಿದೆ.

300ಕ್ಕೂ ಹೆಚ್ಚು ಭಾರತೀಯರ ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ಈ ಹೆದ್ದಾರಿಯ ನಿರ್ಮಾಣ ಕಾಮಗಾರಿಯಲ್ಲಿ ಅಫ್ಘಾನಿಸ್ಥಾನಿಯರೊಂದಿಗೆ ಕೈಜೋ ಡಿ­­ಸಿ­­ದ್ದರು. ಈ ಸಂದರ್ಭದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಆರು ಭಾರತೀಯರು ಬಲಿಯಾಗಿದ್ದರೆ 5 ಮಂದಿ ಅಪಘಾತಗಳಲ್ಲಿ ಸಾವನ್ನಪ್ಪಿದ್ದರು. ಇದಲ್ಲದೆ ಭಾರತ ಅಫ್ಘಾನ್‌ನಲ್ಲಿ ಇನ್ನೂ ಹಲವಾರು ಸಣ್ಣ ಸಣ್ಣ ರಸ್ತೆಗಳನ್ನೂ ನಿರ್ಮಿಸಿದೆ.

ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ :

1972ರಲ್ಲಿ ಕಾಬೂಲ್‌ನಲ್ಲಿ ಭಾರತದ ಸಹಾಯ­ದೊಂದಿಗೆ ನಿರ್ಮಿಸಲಾಗಿದ್ದ ಮಕ್ಕಳ ಆಸ್ಪತ್ರೆ ತಾಲಿಬಾನಿ ಉಗ್ರರ ಹೋರಾಟದ ಸಂದರ್ಭದಲ್ಲಿ ಪಾಳು ಬಿದ್ದಿತ್ತು. ಈ ಆಸ್ಪತ್ರೆಯನ್ನು ಭಾರತವೇ ಪುನರ್‌ನಿರ್ಮಿಸಿ ಅದಕ್ಕೆ 1985ರಲ್ಲಿ ಇಂದಿರಾಗಾಂಧಿ ಇನ್‌ಸ್ಟಿಟ್ಯೂಟ್‌ ಫಾರ್‌ ಚೈಲ್ಡ್‌ ಹೆಲ್ತ್‌ ಎಂದು ಪುನರ್‌ ನಾಮಕರಣ ಮಾಡಲಾ­ಯಿತು. ಇಂಡಿಯನ್‌ ಮೆಡಿಕಲ್‌ ಮಿಷನ್ಸ್‌ನ ಅಡಿಯಲ್ಲಿ ಅಫ್ಘಾನ್‌ನ ವಿವಿಧೆಡೆ ಉಚಿತ ಸಲಹಾ ಶಿಬಿರಗಳನ್ನು ನಡೆಸಲಾಗಿದೆ. ಯುದ್ಧದ ಬಳಿಕ ಅತಂತ್ರರಾಗಿ ಗಣಿಗಳಲ್ಲಿ ದುಡಿಯುತ್ತಿದ್ದ ವೇಳೆ ಕೈಕಾಲು ಕಳೆದುಕೊಂಡ ಸಾವಿರಾರು ಜನರಿಗೆ ಜೈಪುರದ ಕೃತಕ ಕಾಲುಗಳನ್ನು ( ರಬ್ಬರ್‌ ಆಧಾರಿತ ಪ್ರಾಸ್ಥೆಟಿಕ್‌ ಕಾಲು) ಜೋಡಿಸಲಾಗಿದೆ. ಅಫ್ಘಾನ್‌ನ ಗಡಿ ಪ್ರಾಂತಗಳಾದ ಬಡಕ್‌ಶಾನ್‌, ಬಾಲ್‌V, ಕಂದಹಾರ್‌, ಖೋಸ್ಟ್‌, ಕುನಾರ್‌, ನಂಗರ್‌ಹಾರ್‌, ನಿಮೂÅಜ್‌, ನೂರಿಸ್ಥಾನ್‌, ಪಕ್ತಿಯಾ ಮತ್ತು ಪಕ್ತಿಕಾಗಳಲ್ಲಿ ಭಾರತವು ಚಿಕಿತ್ಸಾ­ಲಯಗಳನ್ನು ನಿರ್ಮಿಸಿದೆ.

ಇತರ ಯೋಜನೆಗಳು :

ಅಫ್ಘಾನ್‌ನಲ್ಲಿನ ಶಾಲೆಗಳಿಗೆ ಡೆಸ್ಕ್ಗಳು ಮತ್ತು ಬೆಂಚುಗಳನ್ನು ಭಾರತ ಕೊಡುಗೆಯಾಗಿ ನೀಡಿದೆ. ದೂರದ ಹಳ್ಳಿಗಳಲ್ಲಿ ಸೌರ ಫ‌ಲಕಗಳನ್ನು ಅಳವಡಿಸಿದೆ. ಕಾಬೂಲ್‌ನಲ್ಲಿ ಶೌಚಾಲಯ ಬ್ಲಾಕ್‌ಗಳನ್ನು ನಿರ್ಮಿಸಿದೆ. ಇವುಗಳ ಜತೆಯಲ್ಲಿ ಅಫ್ಘಾನ್‌ನ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನ, ವೃತ್ತಿಪರ ತರಬೇತಿ ಸಂಸ್ಥೆಗಳು, ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ನೌಕರರಿಗೆ ಮಾರ್ಗದರ್ಶನ ಕಾರ್ಯಕ್ರಮಗಳು ಹಾಗೂ ವೈದ್ಯರು ಮತ್ತು ಇತರರಿಗಾಗಿ ತರಬೇತಿಗಳನ್ನೂ ಭಾರತ ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಈ ಮೂಲಕ ಶಿಕ್ಷಣದಲ್ಲಿ ತೀವ್ರವಾಗಿ ಹಿಂದುಳಿದಿರುವ ಅಫ್ಘಾನಿಸ್ಥಾನದ ಮಕ್ಕಳನ್ನು ಸಾಕ್ಷರರನ್ನಾಗಿಸಲು ಪಣತೊಟ್ಟು ಕಾರ್ಯೋನ್ಮುಖವಾಗಿದೆ. ದುರಂತ ಎಂದರೆ ತಾಲಿಬಾನಿಗಳು ಶಿಕ್ಷಣದ ವಿರೋಧಿಗಳಾಗಿದ್ದು ಭಾರತದ ಈ ಎಲ್ಲ ಪ್ರಯತ್ನ, ನೆರವುಗಳು ಇದೀಗ ನೀರ ಮೇಲಣ ಗುಳ್ಳೆಯ ಸ್ಥಿತಿಯಲ್ಲಿವೆ.

ಚಾಲ್ತಿಯಲ್ಲಿರುವ ಯೋಜನೆಗಳು :

ಕಾಬೂಲ್‌ ಜಿಲ್ಲೆಯಲ್ಲಿ ಶತೂತ್‌ ಅಣೆಕಟ್ಟು ನಿರ್ಮಾ­ಣಕ್ಕೆ ಭಾರತವು ಅಫ್ಘಾನಿಸ್ಥಾನದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇದು ಅಲ್ಲಿನ 20ಲಕ್ಷ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲಿದೆ. 80 ಮಿಲಿ­ಯನ್‌ ಡಾಲರ್‌ ವೆಚ್ಚದಲ್ಲಿ ಸುಮಾರು 100 ಸಮು­ದಾಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳ­ಲಿ­ರುವುದಾಗಿ ಭಾರತ 2020ರ ನವೆಂಬರ್‌ನಲ್ಲಿ ಘೋಷಿ­­ಸಿತ್ತು. 10ಲಕ್ಷ ಡಾಲರ್‌ ವೆಚ್ಚದಲ್ಲಿ ದಕ್ಷಿಣ ಕಾಬೂಲ್‌ನಲ್ಲಿನ ಬಾಲಾ ಹಿಸ್ಸಾರ್‌ ಕೋಟೆಯನ್ನು ಪುನರ್‌ ನಿರ್ಮಿಸಲು ಭಾರತ ತನ್ನ ಸಮ್ಮತಿಯನ್ನು ಸೂಚಿಸಿದೆ.

ಸ್ಟೋರ್‌ ಪ್ಯಾಲೇಸ್‌ :

19 ಶತಮಾನದಲ್ಲಿ ನಿರ್ಮಾಣಗೊಂಡಿದ್ದ ಕಾಬೂಲ್‌ನ ಸ್ಟೋರ್‌ ಪ್ಯಾಲೇಸ್‌ ಅನ್ನು ಭಾರತ ಪುನರ್‌ ನಿರ್ಮಿಸಿದೆ. 1965ರ ವರೆಗೆ ಈ ಕಟ್ಟಡದಲ್ಲಿ ಅಫ್ಘಾನ್‌ನ ವಿದೇಶಾಂಗ ಸಚಿವರು ಮತ್ತು ವಿದೇಶಾಂಗ ಸಚಿವಾಲಯ ಕಾರ್ಯನಿರ್ವಹಿಸುತ್ತಿತ್ತು. 2009ರಲ್ಲಿ ಭಾರತ, ಅಫ್ಘಾನಿಸ್ಥಾನ ಮತ್ತು ಅಘಾ ಖಾನ್‌ ಡೆವಲಪ್‌ಮೆಂಟ್‌ ನೆಟ್‌ವರ್ಕ್‌ ನಡುವೆ ನಡೆದ ತ್ರಿಪಕ್ಷೀಯ ಒಪ್ಪಂದದಂತೆ ದ ಅಘಾ ಖಾನ್‌ ಟ್ರಸ್ಟ್‌ ಆಫ್ ಕಲ್ಚರ್‌ 2013-2016 ನಡುವೆ ಕಟ್ಟಡದ ಪುನರ್‌ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿತು. 2016ರಲ್ಲಿ ಅಫ್ಘಾನ್‌ ಅಧ್ಯಕ್ಷ ಅಶ್ರಫ್ ಘನಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಟ್ಟಡವನ್ನು ಉದ್ಘಾಟಿಸಿದ್ದರು.

ಸಲ್ಮಾ ಅಣೆಕಟ್ಟು  :

ಅಫ್ಘಾನ್‌ನ ಹೆರಾತ್‌ ಪ್ರಾಂತ್ಯದಲ್ಲಿ ಭಾರತ ಜಲ ವಿದ್ಯುತ್‌ ಘಟಕವೊಂದನ್ನು ನಿರ್ಮಿಸಿದ್ದು 42 ಮೆಗಾ ವ್ಯಾಟ್‌ಗಳಷ್ಟು ವಿದ್ಯುತ್‌ ಉತ್ಪಾದನೆಯಾ­ಗುತ್ತಿದೆ. ಸಲ್ಮಾ ಅಣೆಕಟ್ಟು ಜಲ ವಿದ್ಯುತ್‌ ಘಟಕದ ಜತೆಯಲ್ಲಿ ಈ ಪ್ರದೇಶದ ಪ್ರಮುಖ ನೀರಾವರಿ ಯೋಜನೆಯಲ್ಲಿ ಒಂದಾಗಿದೆ. 2016ರಲ್ಲಿ ಉದ್ಘಾಟನೆಗೊಂಡಿ­ರುವ ಈ ಅಣೆಕಟ್ಟು ಅಫ್ಘಾನ್‌-ಭಾರತದ ನಡುವಣ “ಸ್ನೇಹಸೇತು’ ಎಂದೇ ಪ್ರಸಿದ್ಧಿಯಾಗಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ತಾಲಿಬಾನಿಗಳು ಈ ಅಣೆಕಟ್ಟಿನ ಸಮೀಪದ ಸ್ಥಳಗಳಲ್ಲಿ ಮಾತ್ರವಲ್ಲದೆ ಅಣೆಕಟ್ಟನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಹಲವಾರು ಭದ್ರತ ಸಿಬಂದಿಯನ್ನು ಹತ್ಯೆ ಮಾಡಿದ್ದಾರೆ. ಅದೃಷ್ಟವಶಾತ್‌ ಅಣೆಕಟ್ಟಿಗೆ ಯಾವುದೇ ಹಾನಿ ಸಂಭವಿಸಿಲ್ಲವಾ­ದರೂ ಇದೀಗ ಇಡೀ ದೇಶದ ಹಿಡಿತ ತಾಲಿಬಾನಿಗಳ ಕೈಯ್ಯಲ್ಲಿರುವುದರಿಂದ ಈ ಅಣೆಕಟ್ಟಿನ ಸುರಕ್ಷೆಯ ಬಗೆಗೆ ಭಾರೀ ಆತಂಕ ಎದುರಾಗಿದೆ.

90 ದಶಲಕ್ಷ ಡಾಲರ್‌ ವೆಚ್ಚದಲ್ಲಿ ಸಂಸತ್‌ ಭವನ :

ಕಾಬೂಲ್‌ನಲ್ಲಿ ಅಫ್ಘಾನ್‌ ಸಂಸತ್ತನ್ನು ಭಾರತವು 90 ದಶಲಕ್ಷ ಡಾಲರ್‌ ವೆಚ್ಚದಲ್ಲಿ ನಿರ್ಮಿಸಿದೆ. 2015ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಕಟ್ಟಡವನ್ನು ಉದ್ಘಾಟಿಸಿದ್ದರು. ಕಟ್ಟಡದ ಒಂದು ಬ್ಲಾಕ್‌ಗೆ ಭಾರತದ ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ ಅವರ ಹೆಸರಿಡಲಾಗಿದೆ. ತಾಲಿಬಾನಿಗಳು ಅಫ್ಘಾನ್‌ ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಸಂಸತ್‌ ಭವನವೂ ತಾಲಿಬಾನಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ.

ವಿದ್ಯುತ್‌ ಮೂಲ ಸೌಕರ್ಯ ಅಭಿವೃದ್ಧಿ :

ಅಫ್ಘಾನಿಸ್ಥಾನದಲ್ಲಿ ಭಾರತ ಕೈಗೆತ್ತಿಕೊಂಡ ಇನ್ನಿತರ ಯೋಜನೆಗಳಲ್ಲಿ ವಿದ್ಯುತ್‌ ಮೂಲಸೌಕರ್ಯ­ಗಳ ಅಭಿವೃದ್ಧಿಯೂ ಸೇರಿದೆ. ಬಾಗ್ಲಾನ್‌ ಪ್ರಾಂತದ ರಾಜಧಾನಿ ಪುಲ್‌-ಎ-ಕುಮ್ರಿಯಿಂದ ಉತ್ತರ ಕಾಬೂಲ್‌ಗೆ 220 ಕೆವಿ ಡಿಸಿ ಪ್ರಸರಣ ಮಾರ್ಗವನ್ನು ನಿರ್ಮಿಸಿದೆ. ಇಷ್ಟು ಮಾತ್ರವಲ್ಲದೆ ಭಾರತೀಯ ಗುತ್ತಿಗೆದಾರರು ಮತ್ತು ಕಾರ್ಮಿಕರು ಅಫ್ಘಾನ್‌ನ ಹಲವಾರು ಪ್ರಾಂತಗಳಲ್ಲಿ ದೂರಸಂಪರ್ಕ ವ್ಯವಸ್ಥೆಗಳನ್ನು ಪುನರ್‌ ಸ್ಥಾಪಿಸುವಲ್ಲಿ ಕೈಜೋಡಿಸಿದ್ದಾರೆ.

ಸಾರಿಗೆ ವ್ಯವಸ್ಥೆಗೆ ಕೊಡುಗೆ :

ಭಾರತವು ನಗರ ಸಾರಿಗೆಗಾಗಿ 400 ಬಸ್‌ಗಳು ಮತ್ತು 200 ಮಿನಿ ಬಸ್‌ಗಳು, ಪುರಸಭೆಗೆ 105 ಯುಟಿಲಿಟಿ ವಾಹನಗಳು, ಅಫ್ಘಾನ್‌ ರಾಷ್ಟ್ರೀಯ ಸೇನೆಗೆ 28 ಸೇನಾ ವಾಹನಗಳು ಮತ್ತು ಐದು ನಗರಗಳ ಸಾರ್ವಜನಿಕ ಆಸ್ಪತ್ರೆಗಳಿಗೆ 10 ಆ್ಯಂಬುಲೆನ್ಸ್‌ಗಳನ್ನು ಕೊಡುಗೆಯಾಗಿ ನೀಡಿದೆ. ಅಫ್ಘಾನ್‌ನ ರಾಷ್ಟ್ರೀಯ ವಾಯುಯಾನ ಸಂಸ್ಥೆ ಅರೈನಾ ತನ್ನ ವಿಮಾನಯಾನ ಸೇವೆಯನ್ನು ಪುನರಾರಂಭಿಸಿದ ವೇಳೆ ಭಾರತ ಮೂರು ಏರ್‌ ಇಂಡಿಯಾ ಏರ್‌ಕ್ರಾಫ್ಟ್ಗಳನ್ನು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next