ಕಾಬೂಲ್: ಅಫ್ಘಾನಿಸ್ತಾನದ ಕಂದಾಹಾರ್ ಪ್ರದೇಶದಲ್ಲಿ ಖಾಶಾ ಝ್ವಾನ್ ಎಂದೇ ಜನಪ್ರಿಯರಾಗಿದ್ದ ಖ್ಯಾತ ಹಾಸ್ಯ ನಟ ನಝರ್ ಮೊಹಮ್ಮದ್ ಅವರನ್ನು ಶಂಕಿತ ತಾಲಿಬಾನ್ ಉಗ್ರರು ಹತ್ಯೆಗೈದಿದ್ದು, ಇದೊಂದು ಆಘಾತಕಾರಿ ಸಂಗತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ಶಾಮ್ಲಿ ಗ್ಯಾಂಗ್…ವಿಮಾನದಲ್ಲಿ ಬಂದು ಸರಗಳ್ಳತನ ಮಾಡ್ತಿದ್ರು!
ಈ ಹಿಂದೆ ಕಂದಾಹಾರ್ ಪೊಲೀಸ್ ಇಲಾಖೆಯಲ್ಲಿ ಮೊಹಮ್ಮದ್ ಸೇವೆ ಸಲ್ಲಿಸಿದ್ದರು. ಕಳೆದ ಗುರುವಾರ ರಾತ್ರಿ ಅಪರಿಚಿತ ಶಸ್ತ್ರಧಾರಿ ಗುಂಪು ಮನೆಯೊಳಕ್ಕೆ ನುಗ್ಗಿ ಮೊಹಮ್ಮದ್ ಅವರನ್ನು ಎಳೆದೊಯ್ದು ಹತ್ಯೆಗೈದಿರುವುದಾಗಿ ದ ಟೈಮ್ಸ್ ವರದಿ ಮಾಡಿದೆ.
ಈ ಹತ್ಯೆಗೆ ತಾಲಿಬಾನ್ ಕಾರಣ ಎಂದು ನಟ ಮೊಹಮ್ಮದ್ ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆದರೆ ಮೊಹಮ್ಮದ್ ಅವರ ಹತ್ಯೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ತಾಲಿಬಾನ್ ತಿಳಿಸಿರುವುದಾಗಿ ವರದಿ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾ ಪಡೆ ಹಿಂದಿರುಗಿದ ನಂತರ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ್ ಭದ್ರತಾ ಪಡೆ ವಿರುದ್ಧ ಸಮರ ಸಾರಿದ್ದು, ಶೇ.70ರಷ್ಟು ಅಫ್ಘಾನಿಸ್ತಾನ್ ಪ್ರದೇಶಗಳು ತಮ್ಮ ವಶದಲ್ಲಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.
ತಾಲಿಬಾನ್ ಉಗ್ರರ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಸ್ಯ ನಟ ಮೊಹಮ್ಮದ್ ಅವರ ಹತ್ಯೆ ಘಟನೆಯನ್ನು ಹಲವು ದೇಶಗಳು ಖಂಡಿಸಿವೆ ಎಂದು ವರದಿ ತಿಳಿಸಿದೆ.