Advertisement

ನೀಡಿದ ಭರವಸೆ ಈಡೇರಿಸುತ್ತೇನೆಂದು ಕೋರ್ಟ್‌ಗೆ ಅಫಿಡವಿಟ್‌

04:36 PM Apr 30, 2018 | |

ಹುಬ್ಬಳ್ಳಿ: ಹಲವು ಅಭ್ಯರ್ಥಿಗಳು ಮದ್ಯ ಹಂಚಿ ಮತಯಾಚನೆ ಮಾಡುತ್ತಾರೆ. ಆದರೆ, ನಾನು ಮದ್ಯಪಾನ ಚಟ ಬಿಡಿಸುವ ಔಷಧ ನೀಡಿ ಮತ ಕೇಳುತ್ತೇನೆಂದು ನವಲಗುಂದ ಕ್ಷೇತ್ರದ ಅಭ್ಯರ್ಥಿ ಡಾ| ಎಂ.ಜಿ. ಜೇಡರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

Advertisement

ಅಭ್ಯರ್ಥಿಗಳು ಮದ್ಯದ ಆಮಿಷದಿಂದ ಮತ ಪಡೆಯುತ್ತಾರೆ. ನಾನು ಆಯುರ್ವೇದ ವೈದ್ಯನಾಗಿದ್ದು, ಗಿಡಮೂಲಿಕೆಗಳಿಂದ ತಯಾರಿಸಿದ, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡದ ಕುಡಿತದ ಚಟ ಬಿಡಿಸುವ ಔಷಧ ನೀಡಿ ಮತ ಬೇಡುತ್ತೇನೆ. ಈಗಾಗಲೇ ನಮ್ಮ ಕ್ಷೇತ್ರದಲ್ಲಿ ನಾನು ನೀಡಿದ ಔಷಧದಿಂದ ಸುಮಾರು 500 ಜನರು ಮದ್ಯಪಾನ ದುಶ್ಚಟದಿಂದ ಮುಕ್ತರಾಗಿದ್ದಾರೆ. ಚುನಾವಣಾ ಆಯೋಗದ ಅನುಮತಿ ಪಡೆದು ಮದ್ಯ ವರ್ಜನೆ ಔಷಧಿ ಹಂಚಿ ಮತ ಕೇಳಲು ನಿರ್ಧರಿಸಿದ್ದೇನೆ ಎಂದರು.

ಕೋರ್ಟ್‌ ಅಫಿಡವಿಟ್‌ ಸಲ್ಲಿಕೆ:
ನಾನು ಶಾಸಕನಾಗಿ ಆಯ್ಕೆಯಾದರೆ ಯಾವ ಯೋಜನೆಗಳನ್ನು ಜಾರಿಗೊಳಿಸಲಿದ್ದೇನೆ ಎಂಬುದನ್ನು ಕೋರ್ಟ್‌ ಅಫಿಡವಿಟ್‌ ಮೂಲಕ ದೃಢಪಡಿಸುತ್ತಿದ್ದೇನೆ. ನಾನು ಭರವಸೆಗಳನ್ನು ಈಡೇರಿಸದಿದ್ದರೆ ಮತದಾರರು ನನ್ನ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬಹುದು. ಅಫಿಡವಿಟ್‌ ಪ್ರತಿಗಳನ್ನು ಮತದಾರರಿಗೆ ನೀಡಲಿದ್ದೇನೆ ಎಂದರು.

5 ವರ್ಷಗಳಲ್ಲಿ ಕ್ಷೇತ್ರದಲ್ಲಿ 20,000 ಉದ್ಯೋಗ ಸೃಷ್ಟಿಸಲಾಗುವುದು. ಜೀರೊ ಅನ್‌ಎಂಪ್ಲಾಯ್‌ಮೆಂಟ್‌ ಮಾಡೆಲ್‌ ಸಹಕಾರದೊಂದಿಗೆ ಬೃಹತ್‌ ಕೈಗಾರಿಕೆಗಳು ಆರಂಭಗೊಳ್ಳುವಂತೆ ಮಾಡಲಾಗುವುದು. ನವಲಗುಂದದಲ್ಲಿ ಗೋವಿನಜೋಳ ಸಂಸ್ಕರಣಾ ಘಟಕ, ಅಣ್ಣಿಗೇರಿಯಲ್ಲಿ ಹತ್ತಿ ಕಾರ್ಖಾನೆ ಮರು ಆರಂಭಿಸಲಾಗುವುದು. ಕ್ಷೇತ್ರವನ್ನು ಸಾರಾಯಿ ಮುಕ್ತ ಕ್ಷೇತ್ರವಾಗಿಸಲಾಗುವುದು. ವಾಟರ್‌ ಅಸೆಂಬ್ಲಿ ಮೂಲಕ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಹಿತಕ್ಕಾಗಿ ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು. ವಸತಿ, ನೀರು, ಸಾರಿಗೆ ಸೌಲಭ್ಯ, ಶಿಕ್ಷಣ, ಆರೋಗ್ಯ ನ್ಯಾಯಯುತವಾಗಿ ಒದಗಿಸಿಕೊಡಲಾಗುವುದು ಎಂದು ಹೇಳಿದರು.

ಜೀರೋ ಅನ್‌ಎಂಪ್ಲಾಯ್‌ಮೆಂಟ್‌ ಮಾಡೆಲ್‌ ರಾಷ್ಟ್ರೀಯ ಸಂಯೋಜಕ ಚಂದ್ರ ಮಿಶ್ರಾ ಮಾತನಾಡಿ, ಉದ್ಯೋಗ ನೀಡಿಕೆಗೆ ಸರಕಾರಗಳು ಆದ್ಯತೆ ನೀಡದಿರುವುದರಿಂದ ಚುನಾವಣೆಯಲ್ಲಿ ಇದನ್ನು ಪ್ರಮುಖ ವಿಷಯವಾಗಿ ಹೊರಹೊಮ್ಮುವಂತೆ ಮಾಡಲು ನಮ್ಮ ಸಂಸ್ಥೆ ಯತ್ನಿಸುತ್ತಿದೆ. ಉದ್ಯೋಗಾವಕಾಶ ಸೃಷ್ಟಿಗೆ ಪ್ರಾಮುಖ್ಯತೆ ನೀಡುವ ಯುವ ಅಭ್ಯರ್ಥಿಗಳಿಗೆ ನಮ್ಮ ಸಂಸ್ಥೆ ಬೆಂಬಲಿಸಲಿದೆ ಎಂದರು. ಓಡಿಶಾ ಸರಕಾರ ಜೀರೋ ಅನ್‌ಎಂಪ್ಲಾಯ್‌ ಮೆಂಟ್‌ ಮಾಡೆಲ್‌ ಅನುಷ್ಠಾನಗೊಳಿಸಿದ್ದು, ಅಲ್ಲಿ ವ್ಯಾಪಕ ಬದಲಾವಣೆಯಾಗುತ್ತಿದೆ. ಉದ್ಯೋಗಾವಕಾಶಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಕರ್ನಾಟಕ ಸರಕಾರಕ್ಕೆ ಕೂಡ ನಮ್ಮ ಸಂಸ್ಥೆ ವತಿಯಿಂದ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ಸರಕಾರದಿಂದ ಯಾವುದೇ ಉತ್ತರ ಬರದಿರುವುದು ಬೇಸರ ಮೂಡಿಸಿತು ಎಂದು ತಿಳಿಸಿದರು. ಕೊಪ್ಪಳ ಜಿಲ್ಲೆ ಯಲಬುರ್ಗಾ ಕ್ಷೇತ್ರದ ಅಭ್ಯರ್ಥಿ ನವೀನ ಹೊಸಪೇಟಿ, ಹಾವೇರಿ ಜಿಲ್ಲೆ ಹಿರೇಕೆರೂರ ಕ್ಷೇತ್ರದ ಅಭ್ಯರ್ಥಿ ವಿಜಯ ಪಾಟೀಲ, ವಿಕಾಸ ಸೊಪ್ಪಿನ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next