ಅಫಜಲಪುರ: ಈ ಬಾರಿಯ ಮುಂಗಾರು ಬಿತ್ತನೆಗಾಗಿ ರೈತಾಪಿ ವರ್ಗದ ಜನ ಭೂಮಿ ಹದಗೊಳಿಸಿಕೊಂಡು ಸಜ್ಜಾಗಿದ್ದಾರೆ. ಇಷ್ಟು ದಿನ ಕೋವಿಡ್ ಭೀತಿಯಲ್ಲಿದ್ದ ರೈತರು ಕೊಂಚ ಆತಂಕದಿಂದ ಹೊರಬಂದು ಬಿತ್ತನೆಗಾಗಿ ಭೂಮಿ ಹದಗೊಳಿಸಿಕೊಂಡು ಬಿತ್ತನೆಗೆ ಸಜ್ಜಾಗಿದ್ದಾರೆ. ಬೀಜ, ಗೊಬ್ಬರ ಕೈಗೆ ಸಿಕ್ಕು ಒಂದೇ ಮಳೆ ಬಂದರೂ ಭೂಮಿಗೆ ಬೀಜ ಹಾಕಲು ಕಾತುರರಾಗಿದ್ದಾರೆ.
ಅಧಿಕಾರಿಗಳ ಅಭಯ: ಈ ಬಾರಿಯ ಮುಂಗಾರು ಬಿತ್ತನೆಗಾಗಿ ಬೇಕಾದ ಬೀಜ, ಗೊಬ್ಬರದ ದಾಸ್ತಾನಿನ ಬಗ್ಗೆ ತಾಲೂಕು ಕೃಷಿ ಅಧಿಕಾರಿಗಳು ಅಭಯ ನೀಡಿದ್ದಾರೆ. ಪ್ರಸಕ್ತ ವರ್ಷ ತಾಲೂಕಿನಾದ್ಯಂತ ಭೌಗೋಳಿಕ ಕ್ಷೇತ್ರ 1,30,479 ಹೆಕ್ಟೇರ್ ಇದ್ದು, ಇದರಲ್ಲಿ ಖುಷ್ಕಿ ಕ್ಷೇತ್ರ 1,10,590 ಹೆಕ್ಟೇರ್ ಇದೆ. ನೀರಾವರಿ ಪ್ರದೇಶ 19 ಸಾವಿರ ಹೆಕ್ಟೇರ್ ಇದೆ. ಮುಂಗಾರು ಬಿತ್ತನೆ ಕ್ಷೇತ್ರ 99850 ಹೆಕ್ಟೇರ್ ಇದೆ. ಇಷ್ಟು ಪ್ರದೇಶದಲ್ಲಿ ತಾಲೂಕಿನಾದ್ಯಂತ ರೈತರು ಹೆಚ್ಚಾಗಿ ತೊಗರಿ,ಉದ್ದು, ಹೆಸರು, ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಬಿತ್ತನೆ ಮಾಡುತ್ತಾರೆ.
ದಾಸ್ತಾನು: ತಾಲೂಕಿನ ಮೂರು ರೈತ ಸಂಪರ್ಕ ಕೇಂದ್ರಗಳು ಸೇರಿ ತೊಗರಿ 687 ಕ್ವಿಂಟಲ್, ಹೆಸರು 7.20 ಕ್ವಿಂಟಲ್, ಉದ್ದು 2.78 ಕ್ವಿಂಟಲ್, ಅತನೂರ ರೈತ ಸಂಪರ್ಕ ಕೇಂದ್ರದಲ್ಲಿ ಸಜ್ಜೆ 9 ಕ್ವಿಂಟಲ್, ಸೂರ್ಯಕಾಂತಿ 3.9 ಕ್ವಿಂಟಲ್, ಮೆಕ್ಕೆಜೋಳ 4 ಕ್ವಿಂಟಲ್ ದಾಸ್ತಾನು ಇದೆ. ಮಳೆಗಾಗಿ ಕಾದಿರುವ ರೈತರು: ಭೂಮಿ ಹದಗೊಳಿಸಿಕೊಂಡಿರುವ ರೈತರು ಸದ್ಯ ಮಳೆರಾಯನಿಗಾಗಿ ಕಾದಿದ್ದಾರೆ. ಮುಂಗಾರು ಹಂಗಾಮಿನ ಮಿರಗಾ ಮಿಂಚಿ ಮಳೆ ಬಂದರೆ ಸಾಕಪ್ಪ ಭೂಮಿಗೆ ಬೀಜ ಬಿತ್ತುತ್ತೇವೆಂಬ ಖುಷಿಯಲ್ಲಿದ್ದಾರೆ ತಾಲೂಕಿನ ರೈತಾಪಿ ವರ್ಗದ ಜನ.
ಈ ಬಾರಿಯ ಮುಂಗಾರು ಬಿತ್ತನೆಗೆ ಬೇಕಾದ ಬೀಜ, ಗೊಬ್ಬರದ ದಾಸ್ತಾನಿದೆ. ಎಲ್ಲಾ ರೈತರಿಗೆ ಸಾಮಾಜಿಕ ಅಂತರದ ಮೂಲಕ ಬೀಜ, ಗೊಬ್ಬರ ಪೂರೈಸಲಾಗುತ್ತದೆ.
ಮಹಮ್ಮದ್ ಖಾಸೀಂ,
ಕೃಷಿ ಸಹಾಯಕ ನಿರ್ದೇಶಕ,
ಕೃಷಿ ಇಲಾಖೆ ಅಫಜಲಪುರ.
ಬೀಜ ಪಡೆದುಕೊಳ್ಳಬೇಕಾದರೆ ರೈತರು ತಮ್ಮ ಜಮೀನಿನ ಪಹಣಿ, ಆಧಾರ್ ಹಾಗೂ ರೈತರ ನೋಂದಣಿ ಸಂಖ್ಯೆ ನೀಡಿ ರಿಯಾಯಿತಿ ದರದಲ್ಲಿ ಬಿಜ ಪಡೆದುಕೊಳ್ಳಬೇಕು.
ಅರವಿಂದಕುಮಾರ
ರಾಠೊಡ, ಕೃಷಿ ಅಧಿ ಕಾರಿ
ಅಫಜಲಪುರ.
ಮಲ್ಲಿಕಾರ್ಜುನ ಹಿರೇಮಠ