Advertisement

ನೀರು ಬಿಟ್ಟಿದ್ದಕ್ಕೆ ರೈತರ ಆಕ್ರೋಶ

11:48 AM May 02, 2020 | Naveen |

ಅಫಜಲಪುರ: ಚಿನಮಳ್ಳಿ ಬ್ಯಾರೇಜ್‌ ನಿಂದ ಕಲಬರುಗಿ ಜಿಲ್ಲೆಗೆ ನೀರು ಸರಬರಾಜಾಗುವ ಸರಡಗಿ ಬ್ಯಾರೇಜ್‌ ಗೆ 0.1 ಟಿಎಂಸಿ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ 70 ರೈತರು ಚಿನಮಳ್ಳಿ ಬ್ಯಾರೇಜ್‌ ಬಳಿ ಸಾಮಾಜಿಕ ಅಂತರ ಕಾಪಾಡಿಕೊಂಡು ಒಂದೆಡೆ ಸೇರಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಯುವ ಶಕ್ತಿ ಸಂಘದ ಜಿಲ್ಲಾಧ್ಯಕ್ಷ ಅಯ್ಯನಗೌಡ ಪಾಟೀಲ, ಚಿನಮಳ್ಳಿ ಬ್ಯಾರೇಜ್‌ ಕೇವಲ 0.71 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ ಬ್ಯಾರೇಜ್‌ನಲ್ಲಿ 0.25 ಪ್ರಮಾಣದಷ್ಟು ನೀರಿದೆ. ಹೀಗಿದ್ದು ಚಿನಮಳ್ಳಿ ಬ್ಯಾರೇಜ್‌ನಿಂದ ನೀರು ಹರಿಬಿಟ್ಟಿದ್ದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಚಿನಮಳ್ಳಿಗಿಂತ ಮೇಲಿರುವ ಗಾಣಗಾಪುರ, ಘತ್ತರಗಾ, ಸೊನ್ನ ಬ್ಯಾರೇಜ್‌ಗಳಿಂದ ನೀರು ಹರಿಸಬೇಕಾಗಿತ್ತು. ಇದರಲ್ಲಿ ಮರಳು ಮಾಫಿಯಾದವರ ಕೈವಾಡವಿದೆ. ಅಲ್ಲದೇ ಅಫಜಲಪುರ ಹಾಗೂ ಜೇವರ್ಗಿ ಶಾಸಕರ ನಿರ್ಲಕ್ಷ್ಯವೂ ಇದೆ ಎಂದು ಆರೋಪಿಸಿದ ಅವರು, ಮತ್ತೆ ಚಿನಮಳ್ಳಿ ಬ್ಯಾರೇಜ್‌ನಿಂದ ನೀರು ಹರಿಬಿಟ್ಟರೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ವೇಳೆ ಮಾತನಾಡಿದ ಕೆಬಿಜಿಎನ್‌ ಎಲ್‌ ಎಇಇ ಎಸ್‌.ವೈ. ಛಲವಾದಿ, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಲಬುರಗಿ ನಗರಕ್ಕೆ ಕುಡಿಯುವ ನೀರು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಎಇಗಳಾದ ಎ.ಆರ್‌. ಕುಂಬಾರ, ಉಮೇಶ, ಸತ್ಯಾಗೋಳ, ಕರ್ನಾಟಕ ನೀರು ಸರಬರಾಜು ಎಇ ಅಬ್ದುಲ್‌ ಬಾಸಿತ್‌, ನೆಲೊಗಿ ಪಿಎಸ್‌ಐ ಮಲ್ಲಣ್ಣ ಯಲಗೋಡ, ರೈತರಾದ ಬಸವರಾಜ
ಕಟ್ಟಿಮನಿ, ಮಲ್ಲಿಕಾರ್ಜುನ ಚಕ್ರ, ಸುನೀಲ, ಪರಪ್ಪ ಮ್ಯಾಕೇರಿ, ಆನಂದ ಪಾಟೀಲ, ಸಂಜು ಕುಲಕರ್ಣಿ, ಅರ್ಜುನ ಭೋವಿ, ಭೀಮರಾಯ ಪೂಜಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next