Advertisement

ಮಣಿಪಾಲ್‌ ಆಸ್ಪತ್ರೆಯಲ್ಲಿ ಅರ್ಯೋಟಿಕ್‌ ಸರ್ಜರಿ ಯಶಸ್ವಿ

06:07 PM May 26, 2022 | Team Udayavani |

ಮೈಸೂರು: ಮಣಿಪಾಲ್‌ ಆಸ್ಪತ್ರೆಯ ಹೃದ್ರೋಗ ಮತ್ತು ವ್ಯಾಸ್ಕ್ಯುಲರ್‌ ತಜ್ಞರ ತಂಡ ಕಳೆದ 36 ತಿಂಗಳುಗಳಲ್ಲಿ 12 ಅರ್ಯೋಟಿಕ್‌ ಸರ್ಜರಿಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್‌ ವ್ಯಾಸ್ಕ್ಯುಲರ್‌ ಸರ್ಜನ್‌ ಡಾ.ಉಪೇಂದ್ರ ಶೆಣೈ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಯೋಟಿಕ್‌ ಸರ್ಜರಿ ಬಹಳ ಕ್ಲಿಷ್ಟಕರವಾದುದು. ಅರ್ಯೋಂಟಾ ಎಂದರೆ ಮನುಷ್ಯನ ದೇಹದ ಅತಿದೊಡ್ಡ ರಕ್ತನಾಳ. ಹೃದಯದಿಂದ ಬೇರೆಲ್ಲಾ ಅಂಗಗಳಿಗೂ ರಕ್ತ ಸರಬರಾಜು ಮಾಡುವ ಅತಿ ಮುಖ್ಯ ರಕ್ತನಾಳ ಇದು. ಈ ರಕ್ತನಾಳದ ಮೂಲಕ ಮೆದುಳು, ಹೃದಯ, ಕರುಳು, ಜೀರ್ಣಾಂಗ, ಕೈಕಾಲುಗಳಿಗೆ ರಕ್ತ ಸರಬರಾಜಾಗುತ್ತದೆ.

ಅಧ್ಯಯನಗಳ ಪ್ರಕಾರ ಅರ್ಯೋಟಿಕ್‌ ಸಂಬಂಧಿ ಸಮಸ್ಯೆಯಿಂದ ಬೇರೆ ಅಂಗಗಳ ರಕ್ತನಾಳಗಳಿಗೆ ಅಡಚಣೆಯಾದರೆ ಶೇ.40-50 ರೋಗಿಗಳ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಈ ಕಾಯಿಲೆಗೆ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ.ರೋಗಿಗಳು ಸಂಪೂರ್ಣ ಗುಣಮುಖವಾಗಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ಮಣಿಪಾಲ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಅರ್ಯೋಟಿಕ್‌ ಸರ್ಜರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ನುರಿತ ತಂಡ ಬೇಕು. ಇದು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾದ ಕಾರಣ ಅರ್ಯೋಟಿಕ್‌ ಸರ್ಜರಿ ಮಾಡಿಸಿಕೊಳ್ಳುವಾಗ ಸಾಕಷ್ಟು ಮಂದಿ ಅಸುನೀಗಿದ್ದಾರೆ. ನಮ್ಮ ತಂಡ ನಡೆಸಿದ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಜನರಿಂದ ಉತ್ತಮ ಅಭಿಪ್ರಾಯ ಪಡೆದುಕೊಂಡಿದೆ ಎಂದರು.

ಪದೇ ಪದೆ ಹೃದಯ ಸ್ತಂಭನ: ಕನ್ಸಲ್ಟೆಂಟ್‌ ಇಂಟರ್‌ ವೆನ್ಶನಲ್‌ ಕಾರ್ಡಿಯಾಲಜಿಸ್ಟ್‌ ಡಾ.ಸಿ.ಬಿ.ಕೇಶವ ಮೂರ್ತಿ ಮಾತನಾಡಿ, 38 ವರ್ಷದ ಗೃಹಿಣಿಯೊಬ್ಬರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಮನೆಯಲ್ಲಿ ಕುಸಿದು ಬಿದ್ದರು. ತಕ್ಷಣ ಆಕೆಗೆ ಹತ್ತಿರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಲಾಯಿತು. ನಂತರ ಇತರ ಪರೀಕ್ಷೆಗಳನ್ನು ಮಾಡಿದಾಗ ಅರ್ಯೋಟಾ ಒಡೆದಿರುವುದು ಕಂಡುಬಂತು. ಇದರಿಂದಾಗಿ ಅರ್ಯೋಟಿಕ್‌ ವಾಲ್ವ್ ಸೋರಿಕೆಯಾಗಿ ಹೃದಯದ ಸುತ್ತಲೂ ರಕ್ತ ಸ್ರಾವವಾಗಿತ್ತು. ತಕ್ಷಣ ಚಿಕಿತ್ಸೆ ಕೊಡಿಸದಿದ್ದರೆ ರೋಗಿಯ ಜೀವಕ್ಕೆ ಅಪಾಯವಾಗುತ್ತಿತ್ತು. ರಕ್ತದೊತ್ತಡ ಕಡಿಮೆಯಾಗಿ, ಪದೇ ಪದೆ ಹೃದಯ ಸ್ತಂಭನವಾಗಿ ಆಕೆಯ ಪರಿಸ್ಥಿತಿ ಗಂಭೀರವಾ ದಾಗ ಆಕೆಯನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು ಎಂದು ತಿಳಿಸಿದರು.

Advertisement

ಡಾ.ಉಪೇಂದ್ರ ಶಣೈ ಅವರ ನೇತೃತ್ವದ ಮಣಿಪಾಲ್‌ ಆಸ್ಪತ್ರೆಯ ಕಾರ್ಡಿಯೋ ವ್ಯಾಸ್ಕ್ಯುಲರ್‌ ತಜ್ಞರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಅರ್ಯೋಟಿಕ್‌ ನಾಳ ಹಾಗೂ ಅರ್ಯೋಟಿಕ್‌ ವಾಲ್ವ್ಅನ್ನು ಮರುಜೋಡಣೆ ಮಾಡಿ ರೋಗಿಗೆ ಮರು ಜನ್ಮ ನೀಡಲಾಯಿತು ಎಂದರು.

ಮತ್ತೂಂದು ಪ್ರಕರಣದಲ್ಲಿ 77 ವರ್ಷ ವಯಸ್ಸಿನ ರೈತರೊಬ್ಬರಿಗೆ ಇದ್ದಕ್ಕಿದ್ದಂತೆ ಕೈ-ಕಾಲು ಸೋತಂತಾಗಿ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಪರೀಕ್ಷಿಸಿದಾಗ ಅರ್ಯೇಂಟಾದಿಂದ ಮೆದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳದಲ್ಲಿ ಸಮಸ್ಯೆಯಾಗಿರುವುದು ಕಂಡುಬಂತು. ನಂತರ ಆ ರೋಗಿಯ ಮೆದುಳಿಗೆ ರಕ್ತ ಸರಬರಾಜು ಮಾಡುವ ನಾಳಕ್ಕೆ ಬೈಪಾಸ್‌ ಸರ್ಜರಿ ಮಾಡಿ ಅರ್ಯೋಟಾಗೆ ಸ್ಟಂಟ್‌ ಅಳವಡಿಸಲಾಯಿತು.

ಈ ರೀತಿ ಎರಡೂ ಶಸ್ತ್ರಚಿಕಿತ್ಸೆಗಳನ್ನು ಒಟ್ಟಿಗೆ ಮಾಡಿದ್ದು ಮೈಸೂರಿನಲ್ಲಿ ಇದೇ ಮೊದಲು. ನಂತರ ರೋಗಿ ಚೇತರಿಸಿಕೊಂಡಿದ್ದಾರಲ್ಲದೆ ಯಾವ ಸಮಸ್ಯೆಯೂ ಇಲ್ಲದೆ ಆರೋಗ್ಯವಾಗಿದ್ದಾರೆ ಎಂದು ವಿವರಿಸಿದರು. ಮೈಸೂರು ಮಣಿಪಾಲ್‌ ಆಸ್ಪತ್ರೆಯ ನಿರ್ದೇಶಕ ಡಾ.ಪ್ರಮೋದ್‌ ಕುಂದನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next