Advertisement

ಏರೋಸ್ಪೇಸ್‌ ಪಾರ್ಕ್‌ ಶೀಘ್ರ

11:51 AM Nov 14, 2018 | |

ಬೆಂಗಳೂರು: ವೈಮಾನಿಕ ಹಾಗೂ ರಕ್ಷಣಾ ವಲಯಕ್ಕೆ ನುರಿತ ವೃತ್ತಿಪರರನ್ನು ಒದಗಿಸಲು ದೇವನಹಳ್ಳಿಯಲ್ಲಿ ಉದ್ಯಮ ಚಾಲಿತ “ಏರೋಸ್ಪೇಸ್‌ ಪಾರ್ಕ್‌’ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ. 

Advertisement

ಈಟನ್‌ ಸಂಸ್ಥೆಯಿಂದ ರಾಜ್ಯದಲ್ಲಿ ನಿರ್ಮಿಸುತ್ತಿರುವ ಮೊದಲ ವೈಮಾನಿಕ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದ ಅವರು, ವೈಮಾನಿಕ ಹಾಗೂ ರಕ್ಷಣಾ ವಲಯಕ್ಕೆ ವಿಶ್ವ ದರ್ಜೆಯ ನುರಿತ ವೃತ್ತಪರರ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಡಸಾಲ್ಟ್ ಸಂಸ್ಥೆಯ ಸಹಯೋಗದಲ್ಲಿ ಏರೋಸ್ಪೇಸ್‌ ಪಾರ್ಕ್‌ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ನಿರಂತರ ಪ್ರಯತ್ನದಿಂದ ಕರ್ನಾಟಕ ಇಂದು ವಿಶ್ವದ ವೈಮಾನಿಕ ಕ್ಷೇತ್ರದ ರಾಜಧಾನಿಯಾಗಿದ್ದು, ವೈಮಾನಿಕ ಉತ್ಪನ್ನಗಳ ಪೂರೈಕೆಯ ಪ್ರಮುಖ ಐದು ರಾಜ್ಯಗಳಲ್ಲಿ ಒಂದಾಗಿದೆ. ಅದರಂತೆ 2017-18ನೇ ಹಣಕಾಸು ವರ್ಷದಲ್ಲಿ 1.25 ಲಕ್ಷ ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ರಾಜ್ಯ ಪೂರೈಕೆ ಮಾಡಿದ್ದು, ಒಟ್ಟು ರಾಜ್ಯ ಸ್ಥಳೀಯ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಕೈಗಾರಿಕಾ ವಲಯ ಶೇ.25ರಷ್ಟು ಪಾಲು ಹೊಂದಿದೆ ಎಂದರು.

ದೇಶದ ಒಟ್ಟು ವೈಮಾನಿಕ ಕ್ಷೇತ್ರದ ಬಂಡವಾಳ ಹೂಡಿಕೆಯ ಪೈಕಿ ಶೇ.65ರಷ್ಟನ್ನು ಕರ್ನಾಟಕ ಆಕರ್ಷಿಸಿದ್ದು, ವಿಮಾನ ಹಾಗೂ ಬಾಹ್ಯಾಕಾಶ ನೌಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿರುವ ಶೇ.70ರಷ್ಟು ಕೈಗಾರಿಕೆಗಳು ವೈಮಾನಿಕ ಉತ್ಪನ್ನಗಳ ಪೂರೈಕೆಯಲ್ಲಿ ತೊಡಗಿದ್ದು, ರಕ್ಷಣಾ ಕ್ಷೇತ್ರದಲ್ಲಿನ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳ ಪೈಕಿ ಶೇ.67ರಷ್ಟು ಕರ್ನಾಟಕದಲ್ಲಿ ತಯಾರಾಗಿವೆ ಎಂಬುದೇ ಹೆಮ್ಮಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ದೇಶದ ಮೊದಲ ವೈಮಾನಿಕ ವಲಯದ ಕೈಗಾರಿಕೆಗಳಿಗಾಗಿ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌) ನಿರ್ಮಾಣ ಕಾರ್ಯ ನಡೆಯುತ್ತಿದ್ದು, ದೇಶದ ಮೊದಲ ಹೈ-ಟೆಕ್‌ ರಕ್ಷಣಾ ಮತ್ತು ವೈಮಾನಿಕ ಪಾರ್ಕ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಜತೆಗೆ ಪಾರ್ಕ್‌ಗೆ ಪೂರಕವಾದ ಬಿಡಿ ಭಾಗಗಳು, ಮಾಹಿತಿ ತಂತ್ರಜ್ಞಾನ ಹಾಗೂ ವೈಮಾನಿಕ ಉತ್ಪನ್ನಗಳನ್ನು ಒದಗಿಸುವ ಕೈಗಾರಿಕೆಗಳು ಸಹ ಅಲ್ಲಿಯೇ ಸ್ಥಾಪನೆಯಾಗಲಿವೆ ಎಂದು ಹೇಳಿದರು. 

Advertisement

ವೈಮಾನಿಕ ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರ ದೇವನಹಳ್ಳಿಯಲ್ಲಿ ಗ್ರೀನ್‌ಫೀಲ್ಡ್‌ ಯೋಜನೆ ಘೋಷಿಸಲಾಗಿದೆ. ಅದರಂತೆ ಈಟನ್‌ ಸಂಸ್ಥೆಯ ತನ್ನ ಮೊದಲ ವೈಮಾನಿಕ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ದು, ಯೋಜನೆಯಿಂದ ಗಡಿ ವೈಮಾನಿಕ ವಿಭಾಗ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅಗತ್ಯ ರಕ್ಷಣಾ ಉತ್ಪನ್ನಗಳು, ಬಿಡಿ ಭಾಗಗಳು ಹಾಗೂ ಸಿದ್ಧಪಡಿಸಿದ ಉತ್ಪನ್ನಗಳು ಪೂರೈಕೆಯಾಗಲಿವೆ. ಈಟನ್‌ ಸಂಸ್ಥೆಯಿಂದಾಗಿ ವೈಮಾನಿಕ ಉತ್ಪನ್ನಗಳ ತಯಾರಿಕೆಯಲ್ಲಿ ಕರ್ನಾಟಕ ಮತ್ತೂಂದು ಮೈಲಿಗಲ್ಲು ಸಾಧಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು. 

ವಿಮಾನ ಆಧಾರಿತ ನಿರ್ವಹಣೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್‌) ಹಾಗೂ ಮೈಸೂರಿನಲ್ಲಿ ನಿರ್ವಹಣೆ, ರಿಪೇರಿ ಹಾಗೂ ಸಮರ್ಪಣೆ (ಎಂಆರ್‌ಒ) ಘಟಕಗಳನ್ನು ನಿರ್ಮಿಸಿ, ಆ ಮೂಲಕ ರಾಜ್ಯವನ್ನು ಏಷ್ಯಾದ ಪ್ರಮುಖ ಎಂಆರ್‌ಒ ಹಬ್‌ ಆಗಿ ಪರಿವರ್ತಿಸುವುದು ಸರ್ಕಾರ ಯೋಜನೆಯಾಗಿದೆ.
-ಕೆ.ಜೆ.ಜಾರ್ಜ್‌, ಸಚಿವ 

ವೈಮಾನಿಕ ಉದ್ಯಮದ ಪರಿಹಾರ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಈಟನ್‌ ಹೈಡ್ರಾಲಿಕ್‌ ಸಿಸ್ಟಮ್ಸ್‌, ದೇವನಹಳ್ಳಿಯ 2.75 ಎಕರೆ ಜಾಗದಲ್ಲಿ 2019ರ ವೇಳೆಗೆ ಘಟಕ ಆರಂಭಿಸಲಿದೆ. ಸ್ಮಾರ್ಟ್‌ ಉತ್ಪಾದನಾ ತಂತ್ರಜ್ಞಾನಗಳನ್ನು ಸಂಸ್ಥೆಯು ಹೊಂದಿದ್ದು, ಸ್ಥಳೀಯ ಪ್ರಗತಿಗೆ ಉದ್ಯೋಗ, ಉದ್ಯಮ ಅವಕಾಶಗಳನ್ನು ಒದಗಿಸಲಿದೆ. 
-ನಿತಿನ್‌ ಚಲ್ಕೆ, ಈಟನ್‌ ಎಪಿಎಸಿ ವೆಹಿಕಲ್‌- ಹೈಡ್ರಾಲಿಕ್ಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next