Advertisement

ಹೈಕೋರ್ಟ್‌ ಕಲಾಪಕ್ಕೆ ಗೈರಾಗಿ ವಕೀಲರ ಪ್ರತಿಭಟನೆ

07:15 AM Oct 04, 2017 | Team Udayavani |

ಬೆಂಗಳೂರು: ಹಿರಿಯ ನ್ಯಾಯಮೂರ್ತಿ ಜಯಂತ್‌ ಪಟೇಲ್‌ ವರ್ಗಾವಣೆಗೆ ಅಸಮಾಧಾನ ವ್ಯಕ್ತಪಡಿಸಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ ಕೋರ್ಟ್‌ ಕಲಾಪಗಳಿಗೆ ಹಾಜರಾಗದೇ ಮಂಗಳವಾರ ಸಮೂಹ ಸಾಂಕೇತಿಕ ಪ್ರತಿಭಟನೆ ನಡೆಸಿದರು. ನ್ಯಾ.ಜಯಂತ್‌ ಪಟೇಲ್‌ ಅವರ ದಿಢೀರ್‌ ವರ್ಗಾವಣೆ ಖಂಡಿಸಿ ಹಾಗೂ ಖಾಲಿಯಿರುವ ನ್ಯಾಯಮೂರ್ತಿಗಳ ನೇಮಕಾತಿಗೆ ಆಗ್ರಹಿಸಿ ರಾಜ್ಯ ವಕೀಲರ ಪರಿಷತ್‌ ಹಾಗೂ ಬೆಂಗಳೂರು ವಕೀಲರ ಸಂಘ ಬುಧವಾರ ರಾಜ್ಯದ ಎಲ್ಲ ಕೋರ್ಟ್‌ಗಳಲ್ಲಿ ಕಲಾಪಗಳಿಂದ ದೂರ ಉಳಿಯುವಂತೆ ಕರೆ
ನೀಡಿದೆ. ಆದರೆ, ಮಂಗಳವಾರವೂ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠವು ವಕೀಲರ ಗೈರು ಹಾಜರಿ ಪ್ರತಿಭಟನೆಯನ್ನು ಎದುರಿಸಿತು.

Advertisement

ಹಲವು ರೀತಿಯ ಆರೋಪಗಳನ್ನು ಎದುರಿಸುತ್ತಿರುವ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿಯಾಗುವ ಮುನ್ನ ಪ್ರಮುಖ ಪ್ರಕರಣಗಳನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸುವ ಸಾಧ್ಯತೆಯಿದೆ. ಜೊತೆಗೆ ನ್ಯಾ. ಜಯಂತ್‌ ಪಟೇಲ್‌ರ ರಾಜೀನಾಮೆಗೆ ಒಪ್ಪಿಗೆ ನೀಡಿರುವ ಮುಖ್ಯ ನ್ಯಾಯಮೂರ್ತಿಗಳ ಕ್ರಮ ಸರಿಯಲ್ಲ ಎಂಬುದು ವಕೀಲರ ಅಸಮಾಧಾನಕ್ಕೆ ಕಾರಣ.

ಗೈರಾಗಲು ಮನವಿ: ಮಂಗಳವಾರ ಎಂದಿನಂತೆ ಕೋರ್ಟ್‌ ಕಲಾಪಕ್ಕೆ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ ಕೋರ್ಟ್‌ ಹಾಲ್‌ 1ಕ್ಕೆ ಆಗಮಿಸಿತ್ತು. ವಕೀಲರ ಪರಿಷತ್‌ ಸಹ ಕಾರ್ಯಾಧ್ಯಕ್ಷ ವೈ.ಆರ್‌.ಸದಾಶಿವರೆಡ್ಡಿ ಸೇರಿ ಹಲವು ಹಿರಿಯ ವಕೀಲರನ್ನು ಒಳಗೊಂಡ 100ಕ್ಕೂ ಅಧಿಕ ವಕೀಲರು ಮುಖ್ಯ ನ್ಯಾಯ
ಮೂರ್ತಿಗಳು ನಡೆಸುವ ಅರ್ಜಿ ವಿಚಾರಣೆಗಳಿಗೆ ಗೈರು ಹಾಜರಾಗುವಂತೆ ವಕೀಲರಲ್ಲಿ ಮನವಿ ಮಾಡಿದರು. ಇದಕ್ಕೆ ವಕೀಲರು ಸಮ್ಮತಿ ಸೂಚಿಸಿದರು. ಈ ದಿಢೀರ್‌ ನಿರ್ಧಾರದಿಂದ ನ್ಯಾಯಪೀಠದಲ್ಲಿ ಆಸೀನರಾಗಿದ್ದ ಮುಖ್ಯ ನ್ಯಾಯಮೂರ್ತಿಗಳು ಬಳಿಕ ತಮ್ಮ ಛೇಂಬರ್‌ಗೆ ತೆರಳಿದರು. ಊಟದ ವಿರಾಮದ ಬಳಿಕ 2.30ರ ಸುಮಾರಿಗೆ ಕೋರ್ಟ್‌ ಕಲಾಪಕ್ಕೆ ಆಗಮಿಸಿದ್ದ ಮುಖ್ಯ ನ್ಯಾಯಮೂರ್ತಿಗಳ ಪೀಠದ ವಿಚಾರಣೆಗೆ ವಕೀಲರು ಆಗಮಿಸಲಿಲ್ಲ.
ಹೀಗಾಗಿ ಮಂಗಳವಾರ ನಡೆಯಬೇಕಿದ್ದ ಅರ್ಜಿಗಳ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿ ಮುಖ್ಯನ್ಯಾಯಮೂರ್ತಿಗಳು ತಮ್ಮ ಛೇಂಬರ್‌ಗೆ ತೆರಳಿದರು.

ಭ್ರಷ್ಟರು ಹೆಚ್ಚಳ: ಮಾಧ್ಯಮದ ಜತೆ ಮಾತನಾಡಿದ ಪರಿಷತ್‌ ಸಹ ಕಾರ್ಯಾಧ್ಯಕ್ಷ ವೈ.ಆರ್‌.ಸದಾಶಿವ ರೆಡ್ಡಿ, ನ್ಯಾಯಮೂರ್ತಿಗಳ ನೇಮಕ, ವರ್ಗಾವಣೆ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವಲ್ಲಿ ಕೊಲಿ ಜಿಯಂ ಸಂಪೂರ್ಣ ವಿಫ‌ಲವಾಗಿದೆ. ನ್ಯಾ. ಜಯಂತ್‌ ಪಟೇಲ್‌ ಅವರ ದಿಢೀರ್‌ ವರ್ಗಾವಣೆ, ಇದಕ್ಕೆ ಮನನೊಂದು ಅವರು
ನೀಡಿರುವ ರಾಜೀನಾಮೆ ಸಂಗತಿ ನಮ್ಮ ಮುಂದಿದೆ. ಇದು ಮುಗಿದ ಅಧ್ಯಾಯ. ಆದರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟರ ಸಂಖ್ಯೆ ಹೆಚ್ಚುತ್ತಿರುವುದರಿಂದ ಇಂತಹ ಸಂಗತಿಗಳು ಪುನರಾವರ್ತನೆಗೊಳ್ಳುತ್ತಿವೆ. ಇದನ್ನು ಖಂಡಿಸಿ ಬುಧವಾರ ಕೋರ್ಟ್‌ ಕಲಾಪಗಳಿಗೆ ಗೈರುಹಾಜರಾಗಲು ಕರೆ ನೀಡಲಾಗಿದೆ ಎಂದು ತಿಳಿಸಿದರು. ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೊರತು ಪಡಿಸಿ ಹೈಕೋರ್ಟ್‌ನ ಉಳಿದ ಪೀಠಗಳಲ್ಲಿ ಎಂದಿನಂತೆ ಅರ್ಜಿಗಳ ವಿಚಾರಣೆ ನಡೆಯಿತು. ವಕೀಲರ ದಿಢೀರ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಕೋರ್ಟ್‌ ಹಾಲ್‌ 1ಕ್ಕೆ ಹೆಚ್ಚಿನ ಪೊಲೀಸ್‌ ಬಿಗಿಬಂದೋಬಸ್ತ್ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next