Advertisement

ವಕೀಲರು-ತಹಶೀಲ್ದಾರ್‌ ವಾಗ್ವಾದ: ಡಿಸಿ ಪ್ರವೇಶ

11:26 AM Apr 08, 2018 | Team Udayavani |

ಬೆಳ್ತಂಗಡಿ: ಚುನಾವಣೆ ಪ್ರಯುಕ್ತ ಶಾಂತಿ ಪಾಲನೆಗೆ ಸಂಬಂಧಿಸಿದಂತೆ ಮುಚ್ಚಳಿಕೆ ಬರೆಸಿಕೊಳ್ಳಲು ಸುಮಾರು 90ಕ್ಕೂ ಹೆಚ್ಚು ಮಂದಿಗೆ ತಾ| ದಂಡಾಧಿಕಾರಿಯಿಂದ ನೋಟಿಸ್‌ ಜಾರಿ ಮಾಡಲಾಗಿತ್ತು. ಈ ಮಧ್ಯೆ ತಾ| ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರ್‌, ಕೋರ್ಟ್‌ ನಿಂದ ವಕೀಲರನ್ನು ಹೊರಹೋಗುವಂತೆ ಸೂಚಿಸಿದ್ದು, ವಕೀಲರನ್ನು ಕೆರಳಿಸಿದೆ. ಈ ವೇಳೆ ವಕೀಲರು ಹಾಗೂ ತಹಶೀಲ್ದಾರ್‌ ನಡುವೆ ವಾಗ್ವಾದ ನಡೆದಿದೆ.

Advertisement

ನೊಟೀಸ್‌ ಜಾರಿಯಾದ ಹಿನ್ನೆಲೆ, 90ಕ್ಕೂ ಹೆಚ್ಚು ಮಂದಿ ಮಿನಿ ವಿಧಾನಸೌಧಕ್ಕೆ ಆಗಮಿಸಿದ್ದರು. ಶಾಂತಿ ಭಂಗ ಉಂಟಾಗದಂತೆ, ಮುನ್ನೆಚ್ಚರಿಕೆಯಾಗಿ ವ್ಯಕ್ತಿಯ ವಿಚಾರಣೆ ನಡೆಸಿ, ನಿರ್ದಿಷ್ಟ ದಿನಗಳ ಮಟ್ಟಿಗೆ ಬಾಂಡ್‌ ಬರೆಸಿಕೊಳ್ಳಲಾಗುತ್ತದೆ. ಈ ಸಂದರ್ಭ ಬಾಂಡ್‌ ನೀಡಿದವರು ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದಲ್ಲಿ ಆಸ್ತಿ ಮುಟ್ಟು ಗೋಲು ಹಾಕಿಕೊಳ್ಳುವ ಅಧಿಕಾರ ತಾ| ದಂಡಾಧಿಕಾರಿ ಹೊಂದಿದ್ದಾರೆ.

ಆದರೆ ಈ ವೇಳೆ ಕೆಲವರ ಪರವಾಗಿ ವಕೀಲರು ಆಗಮಿಸಿದ್ದರು. ಕೋರ್ಟ್‌ ನಿಯಮದಂತೆ ಕಲಾಪ ನಡೆಯುವ ವೇಳೆ ಕೂರುವ ಅವಕಾಶವಿದೆ. ಆದರೆ ತಮ್ಮನ್ನು ಹೊರ ಕಳುಹಿಸಲಾಗಿದೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ವಾಗ್ವಾದ ನಡೆದಿದ್ದು, ಸಮರ್ಪಕ ಕಾರ್ಯ ನಿರ್ವಹಣೆಗಾಗಿ ವಕೀಲರಿಂದ ಮನವಿ ನೀಡಲಾಗಿದೆ. 

ಜಿಲ್ಲಾಧಿಕಾರಿ ಮಧ್ಯ ಪ್ರವೇಶ
ತಾ| ದಂಡಾಧಿಕಾರಿ ಕೋರ್ಟ್‌ನಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ತಹಶೀಲ್ದಾರ್‌ ತಮ್ಮಣ್ಣ ಚಿನ್ನಪ್ಪ ಹಾದಿಮನಿ ಹಾಗೂ ವಕೀಲರ ಜತೆ ವಾಗ್ವಾದ ನಿರಂತರವಾಗಿ ಸಾಗಿತು. ಈ ವೇಳೆ ಚುನಾವಣೆ ಪ್ರಕ್ರಿಯೆ ಪ್ರಯುಕ್ತ ಮಿನಿ ವಿಧಾನಸೌಧಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಮಾತುಕತೆ ನಡೆಸಿ, ಸಮರ್ಪಕ ಕಾರ್ಯನಿರ್ವಹಣೆಗೆ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ. ಬಳಿಕ ವಕೀಲರೂ ಸ್ಥಳದಿಂದ ತೆರಳಿದರು.

ಅಸಮಾಧಾನ
ಒಂದೇ ದಿನ 90ಕ್ಕೂ ಹೆಚ್ಚು ಮಂದಿಗೆ ಹಾಜರಾಗಲು ನೋಟಿಸು ಜಾರಿ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ. 90ಕ್ಕೂ ಹೆಚ್ಚು ಮಂದಿ ವಿಚಾರಣೆಗಾಗಿ ಬೆಳಗ್ಗೆ 10ರಿಂದಲೇ ತಹಶೀಲ್ದಾರ್‌ ಕೊಠಡಿ ಮುಂದೆ ಕಾಯುವ ಪರಿಸ್ಥಿತಿ ಉಂಟಾಯಿತು. 

Advertisement

ತಹಶೀಲ್ದಾರ್‌ಗೆ ಮನವಿ
ತಾ| ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್‌ ಕುಮಾರ್‌ ಎ. ನೇತೃತ್ವದಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ನ್ಯಾಯಾ ಲಯ ಕಲಾಪ ನಡೆಸಲು ವಕೀಲರು ತೊಂದರೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಯಾಗಿ ಮಾಹಿತಿ ನೀಡಿ ಮನವಿ ಸಲ್ಲಿಸಲಾಯಿತು. ತಾ| ದಂಡಾಧಿಕಾರಿ ನ್ಯಾಯಾಲಯದಲ್ಲಿ ನ್ಯಾಯವಾದಿಗಳಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ, ವಿನಾಕಾರಣ ಕಲಾಪ ಸ್ಥಗಿತಗೊಳಿಸುವ ಬಗ್ಗೆ ಮನವಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next