ಬೆಂಗಳೂರು: ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರ ಹಾಜರಾತಿ ಶೇ.50 ಮಾತ್ರ ಇರುತ್ತದೆ. ಸದಸ್ಯರ ಹಾಜರಾತಿ ಹೆಚ್ಚಿಸಲು ಸಹಾಯ ಮಾಡಿ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮನವಿ ಮಾಡಿಕೊಂಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 13ರಿಂದ ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನವನ್ನು ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಶಾಸಕರನ್ನು ಸದನಕ್ಕೆ ಕರೆಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಮಾಧ್ಯಮದವರು ಏನಾದರೂ ಸಹಾಯ ಮಾಡಿ ಎಂದು ಸಭಾಪತಿ ಮನವಿ ಮಾಡಿಕೊಂಡರು.
ತಾವು ಸಭಾಪತಿಯಾಗಿ ಕಾರ್ಯನಿರ್ವಹಿಸಿದ ಎಂಟು ವರ್ಷಗಳಲ್ಲಿ ಪರಿಷತ್ತಿನಲ್ಲಿ 75 ಜನರಲ್ಲಿ ಸರಾಸರಿ 38 ಜನರ ಹಾಜರಾತಿ ಇದೆ. ಅಂದರೆ, ಶೇ.50 ಹಾಜರಾತಿ ಇದೆ. ಕೆಲವು ಬಾರಿ ಶೇ.90 ಸದಸ್ಯರ ಹಾಜರಾತಿ ಇದ್ದರೂ ಸರಾಸರಿ ಗಮನಿಸಿದಾಗ ಕಡಿಮೆ ಹಾಜರಾತಿ ಇರುವುದರಿಂದ ಶಾಸಕರ ಹಾಜರಾತಿ ಹೆಚ್ಚಿಸುವ ಪ್ರಯತ್ನ ನಡೆಯಬೇಕಿದೆ ಎಂದರು.
ಶಾಸಕರು ಪ್ರತಿ ದಿನ ಸದನಕ್ಕೆ ಹಾಜರಾದರೆ, ಬೆಂಗಳೂರಿನಲ್ಲಿ 2000ರೂ., ಬೆಳಗಾವಿ ಅಧಿವೇಶನದಲ್ಲಿ 2500ರೂ., ಭತ್ಯೆ, ಹುಬ್ಬಳ್ಳಿಯಿಂದ ಪ್ರಯಾಣ ಮಾಡುವವರಿಗೆ 5 ಸಾವಿರ ದಿನಭತ್ಯೆ ನೀಡುತ್ತೇವೆ. ಬೆಳಗಾವಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿರುತ್ತದೆ. ಆದರೆ ರಾತ್ರಿ ಊಟದ ವ್ಯವಸ್ಥೆಯನ್ನು ಶಾಸಕರೇ ಮಾಡಿಕೊಳ್ಳಬೇಕು ಎಂದು ಹೇಳಿದರು.
60 ದಿನ ನಡೆಸಲು ಸಲಹೆ: ರಾಜ್ಯ ವಿಧಾನಮಂಡಲವೇ ಅಂಗೀಕರಿಸಿರುವ ವಾರ್ಷಿಕ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕೆಂಬ ನಿಯಮವನ್ನು ಸರ್ಕಾರ ಪಾಲಿಸಬೇಕೆಂದು ಶಂಕರಮೂರ್ತಿ ಮನವಿ ಮಾಡಿಕೊಂಡರು. ನಿಯಮ ಜಾರಿಗೆ ಬಂದಾಗಿನಿಂದಲೂ 2015ರಲ್ಲಿ ಮಾತ್ರ ಕನಿಷ್ಠ 60 ದಿನ ಅಧಿವೇಶನ ನಡೆಸಲಾಗಿದೆ. ಉಳಿದ ವರ್ಷಗಳಲ್ಲಿ ಕನಿಷ್ಠ ದಿನಗಳನ್ನೂ ನಡೆಸಲಾಗಿಲ್ಲ. ಇದರಲ್ಲಿ ಸರ್ಕಾರ ಮತ್ತು ಪ್ರತಿಪಕ್ಷದ ಸಹಕಾರ ಮುಖ್ಯವಾಗಿದೆ ಎಂದರು.
18ಕ್ಕೆ ಕಾರವಾರ ನೌಕಾ ನೆಲೆ ಪ್ರವಾಸ: ನ.18ರಂದು ವಿಧಾನ ಪರಿಷತ್ ಸದಸ್ಯರಿಗೆ ಕಾರವಾರ ಸೀ ಬರ್ಡ್ ನೌಕಾ ನೆಲೆಯನ್ನು ವೀಕ್ಷಿಸಲು ಒಂದು ದಿನದ ಪ್ರವಾಸ ಕೈಗೊಳ್ಳಲಾಗುವುದು. ಪ್ರಧಾನಿ ನರೇಂದ್ರ ಮೋದಿ ಸಲಹೆ ಮೇರೆಗೆ ಸೀಬರ್ಡ್ ನೌಕಾ ನೆಲೆಯ ಮುಖ್ಯಸ್ಥರು ಎರಡೂ ಸದನದ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಅವರ ಆಹ್ವಾನದ ಮೇರೆಗೆ ಪರಿಷತ್ ಸದಸ್ಯರಿಗೆ ನ.18 ರಂದು ಒಂದು ದಿನದ ಪ್ರವಾಸ ಕೈಗೊಳ್ಳಲಾಗಿದೆ ಎಂದು ಶಂಕರಮೂರ್ತಿ ಹೇಳಿದರು.