ಕಲಬುರಗಿ: ಜಿಲ್ಲಾ ವಿಜ್ಞಾನ ಕೇಂದ್ರದ ಮುಂಭಾಗದ ಪ್ರವೇಶ ದ್ವಾರದ ಹತ್ತಿರ ವಿಜ್ಞಾನ ಕೇಂದ್ರದ ಸೌಲಭ್ಯಗಳ ಆಕರ್ಷಕ ಮಾಹಿತಿ ಫಲಕ ಅಳವಡಿಸುವ ಮೂಲಕ ವಿಜ್ಞಾನ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಮತ್ತು ನಾಗರಿಕರನ್ನು ಆಕರ್ಷಿಸಬೇಕೆಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.
ಶನಿವಾರ ಸಂಜೆ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಜಿಲ್ಲಾ ವಿಜ್ಞಾನ ಕೇಂದ್ರದ ಮೂಲ ಅವಶ್ಯಕತೆಗಳ ಪಟ್ಟಿಮಾಡಿ ಮನವಿ ಸಲ್ಲಿಸಿದರೆ, ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಧನಸಹಾಯ ಪಡೆಯಲಾಗುವುದು ಎಂದರು.
ವಿಜ್ಞಾನ ಕೇಂದ್ರದಲ್ಲಿ ಸೈನ್ಸ್ ಆನ್ ಸ್ಪೀಯರ್ ಹಾಗೂ ಹ್ಯೂಮನ್ ಬಯಾಲಜಿ ವಿಭಾಗ ಪ್ರಾರಂಭಿಸಲು, ವಿಕಲಚೇತನರಿಗಾಗಿ ಲಿಫ್ಟ್ ವ್ಯವಸ್ಥೆಗಾಗಿ ಬೇಡಿಕೆಯನ್ನು ಸಲ್ಲಿಸುವಂತೆ ಜಿಲ್ಲಾ ವಿಜ್ಞಾನಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ವಿಜ್ಞಾನ ಕೇಂದ್ರಕ್ಕೆ ಗ್ರಾಮಾಂತರ ಪ್ರದೇಶದ ಮಕ್ಕಳು ಬರುವಂತಾಗಬೇಕು.
ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ಶಾಲೆಗಳ ಮಕ್ಕಳು ಕಡ್ಡಾಯವಾಗಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುವಂತೆ ಕ್ರಮ ಜರುಗಿಸಬೇಕು. ಮಕ್ಕಳನ್ನು ಶಾಲೆಗಳಿಂದ ವಿಜ್ಞಾನ ಕೇಂದ್ರಕ್ಕೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ವಿಜ್ಞಾನಾಧಿಕಾರಿ ಲಕ್ಷಿ ನಾರಾಯಣ ಮಾತನಾಡಿ, ವಿಜ್ಞಾನ ಕೇಂದ್ರದಲ್ಲಿ ಇನೋವೇಷನ್ ಕಾರ್ನರ್ ವಿಭಾಗವನ್ನು ಪ್ರಾರಂಭಿಸಲಾಗುತ್ತಿದೆ. ವಿಜ್ಞಾನ ಸಂಶೋಧನಾ ವಿದ್ಯಾರ್ಥಿಗಳಿಗೆ ತಾವು ಮಾಡಿರುವ ಸಂಶೋಧನೆಯನ್ನು ಅಭಿವೃದ್ಧಿಗೊಳಿಸಲು ಸಹಾಯ ಮಾಡಲಾಗುವುದು. ಸಂಶೋಧನಾ ವಿದ್ಯಾರ್ಥಿಗಳಿಂದ 500 ರೂ. ಶುಲ್ಕವನ್ನು ಪಡೆದು ಸಂಶೋಧನೆಗೆ ಅವಶ್ಯಕವಿರುವ ಎಲ್ಲ ಸವಲತ್ತು ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದರು.
ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಶಿಕ್ಷಣಾಧಿಕಾರಿ ವೆಂಕಟೇಶ್ವರಲು ಆರ್. ಪಾಲ್ಗೊಂಡಿದ್ದರು.