ಬಾಗಲಕೋಟೆ: ದೇಶದ 125 ಕೋಟಿ ಜನರಿಗೂ ಸ್ವಚ್ಛತೆಯ ಅರಿವು ಮೂಡಿಸುವ ಸಂಕಲ್ಪ ಕೇಂದ್ರ ಸರ್ಕಾರ ಮಾಡಿದೆ. ದೇಶದ 4041 ಪಟ್ಟಣ, ಗ್ರಾಮಗಳನ್ನು ಈಗಾಗಲೇ ಸ್ವಚ್ಛ ಪಟ್ಟಣ-ಗ್ರಾಮಗಳೆಂದು ಘೋಷಿಸಲಾಗಿದೆ. 2019ರ ವರೆಗೆ ಇಡೀ ದೇಶವನ್ನು ಸ್ವಚ್ಛ ಭಾರತ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದು ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲೀಕರಣ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ನಗರದ ಬಿವಿವಿ ಸಂಘದ ಜನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿಶ್ವ ಯುವಕರ ಕೌಶಲ ದಿನಾಚರಣೆ ಹಾಗೂ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನವಾದ 2019ರ ವೇಳೆಗೆ ಇಡೀ ದೇಶವನ್ನು ಸ್ವಚ್ಛ ಭಾರತ ಮಾಡುವ ಸಂಕಲ್ಪ ಕೇಂದ್ರ ಸರ್ಕಾರ ಹೊಂದಿದೆ. ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಆಂದೋಲನ ಆರಂಭಿಸಲಾಗಿದೆ. ಐದು ವರ್ಷಗಳಲ್ಲಿ 125 ಕೋಟಿ ಜನರಲ್ಲೂ ಅರಿವು ಮೂಡಿಸುವ ಉದ್ದೇಶ ಸರ್ಕಾರದ್ದಾಗಿದೆ. ಈಗಾಗಲೇ 2.50 ಕೋಟಿ ಶೌಚಾಲಯ ದೇಶದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಯುವ ಶಕ್ತಿ ಒಂದು ರಾಷ್ಟ್ರದ ಅಮೂಲ್ಯ ಸಂಪತ್ತು. ಈ ಶಕ್ತಿಯನ್ನು ಬಳಸುವುದರ ಮೇಲೆ ಆ ರಾಷ್ಟ್ರದ ಒಳಿತು- ಕೆಡುಕು ಅಡಗಿದೆ. ಯುವ ಶಕ್ತಿಯನ್ನು ರಚನಾತ್ಮಕವಾಗಿ, ವೈಜ್ಞಾನಿಕವಾಗಿ ಹಾಗೂ ಮೌಲ್ಯಯುಕ್ತವಾಗಿ ಬಳಸಿದರೆ ಆ ರಾಷ್ಟ್ರ ಅಭಿವೃದ್ಧಿ ಹೊಂದುತ್ತದೆ. ಇಲ್ಲವಾದರೆ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ಕಂಟಕ ಪ್ರಾಯವಾಗಿ ಮಾರ್ಪಡುತ್ತದೆ.
ಈ ಕಾರಣಕ್ಕಾಗಿಯೇ 2014 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ವಿಶ್ವ ಯುವಕರ ಕೌಶಲ ದಿನಾಚರಣೆ ಆಚರಿಸಲು ಘೋಷಣೆ ಮಾಡಲಾಯಿತು. ಕೌಶಲಾಭಿವೃದ್ಧಿಯಿಂದ ಜೀವನದಲ್ಲಿ ಬದಲಾವಣೆ ಎಂಬ ಧ್ಯೇಯ ವ್ಯಾಖ್ಯಾನ ಇಟ್ಟುಕೊಂಡು ಈ ದಿನಾಚರಣೆ ನಡೆಸಲಾಗುತ್ತಿದೆ ಎಂದರು. ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಹೊಣೆ. ಯುವಕರು ಕೌಶಲಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಸಲಹೆ ನೀಡಿದರು. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಡಾ|ವೀರಣ್ಣ ಚರಂತಿಮಠ, ವೀರಣ್ಣ ಜಿ. ಕಿರಗಿ ಮಾತನಾಡಿದರು.
ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ|ನಾಗರತ್ನ ಟಿಎಂ ಅವರು ವಿಶ್ವ ಯುವಕರ ಕೌಶಲ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಬಸವೇಶ್ವರ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಜೆ.ವಿ ಚವ್ಹಾಣ, ಡಾ|ಎಂ ನಂಜುಂಡಸ್ವಾಮಿ, ಎಂ.ಜಿ ಜಿಗಬಡ್ಡಿ, ಬಸವೇಶ್ವರ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ, ಜನ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಎಸ್.ಎಚ್. ಶೆಟ್ಟರ ಮಾತನಾಡಿದರು. ಸುರೇಖಾ ಮಠದ ನಿರೂಪಿಸಿದರು. ರವಿ ಮೇಳಿ ವಂದಿಸಿದರು.