ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಮತ್ತು ಮಾನವೀಯ ಸಂಸ್ಥೆ ಹಾಗೂ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮಶನ್ ಸೈನ್ಸ್ ನೇತೃತ್ವದಲ್ಲಿ ಜಾಹೀರಾತು, ಸಾರ್ವಜನಿಕ ಸಂಪರ್ಕ ಮತ್ತು ಬ್ರ್ಯಾಂಡ್ ನಿರ್ವಹಣೆ ಕುರಿತು ಸೋಮವಾರ (ಆಗಸ್ಟ್ 29) ಪಾಂಡೇಶ್ವರದ ಸಿಟಿ ಕ್ಯಾಂಪಸ್ ನಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಮೈಸೂರಿನ ಅಮೃತ ವಿಶ್ವವಿದ್ಯಾಪೀಠಂನ ಉಪನ್ಯಾಸಕಿ ಶ್ರೀಗೌರಿ ಜೋಶಿ, ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜಾಹೀರಾತು ಒಂದು ಸಂಸ್ಥೆಯ ಉತ್ಪನ್ನ ಅಥವಾ ಸೇವೆಯನ್ನು ಪ್ರಚಾರ ಪ್ರಸ್ತುತಿ ಮಾಡುವಲ್ಲಿ ಕೆಲಸ ಮಾಡಿದರೇ, ಸಾರ್ವಜನಿಕ ಸಂಪರ್ಕ ಅದನ್ನು ಸಾರ್ವಜನಿಕ ವಲಯಕ್ಕೆ ತಲುಪಿಸುವ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಬ್ರ್ಯಾಂಡ್ ನಿರ್ವಹಣೆ ಸಂಸ್ಥೆಯ ಇನ್ನೊಂದು ಮಜಲು. ಒಂದು ಸಂಸ್ಥೆಗೆ ಪೂರಕವಾಗುವಂತೆ ಕಾರ್ಯ ಮಾಡುವುದು ಬ್ರ್ಯಾಂಡ್ ನಿರ್ವಹಣೆಯ ಹೊಣೆ ಎಂದು ಅವರು ಅಭಿಪ್ರಾಯ ಪಟ್ಟರು. ಇನ್ನು, ಜಾಹೀರಾತು, ಸಾರ್ವಜನಿಕ ಸಂಪರ್ಕ, ಬ್ರ್ಯಾಂಡ್ ನಿರ್ವಹಣೆಯ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡುವುದರೊಂದಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಮತ್ತು ಮಾನವಿಕ ವಿಭಾಗದ ಪ್ರೊಫೆಸರ್ ಡಾ.ಪ್ರದೀಪ್ ಎಂ. ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮಶನ್ ಸೈನ್ಸ್ ವಿಭಾಗದ ಡೀನ್ ಪ್ರೊಫೆಸರ್. ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು. ಕಾರ್ಯಕ್ರಮದ ಸಂಯೋಜಕ ಅಸಿಸ್ಟೆಂಟ್ ಪ್ರೊಫೆಸರ್. ಶ್ರೀರಾಜ್ ಎಸ್. ಆಚಾರ್ಯ, ಅಸಿಸ್ಟೆಂಟ್ ಪ್ರೊಫೆಸರ್ ಮೇಘಶ್ರೀ, ಅಸಿಸ್ಟೆಂಟ್ ಪ್ರೊಫೆಸರ್ ಸುಶ್ಮಿತಾ, ರಿಸರ್ಚ್ ಸ್ಕಾಲರ್ ಶಿವರಾಜ್, ಹರಿಸೂರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳು, ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು, ಸಮಾಜ ಸೇವಾಕಾರ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಗಾಯತ್ರಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯ ಮಾಡಿದರು. ಕೀರ್ತಿಪ್ರಿಯ ಸ್ವಾಗತಿಸಿ, ಆದಿತ್ಯಾ ವಂದಿಸಿದರು. ವಿದ್ಯಾಶ್ರೀ ನಿರೂಪಿಸಿದರು.