Advertisement
ಪಾಲಿಕೆಯ ಕೆಂಪೇಗೌಡ ಸಭಾಗಂಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ರೂಪಿಸಿರುವ “ಬಿಬಿಎಂಪಿ ಜಾಹೀರಾತು ನಿಯಮಗಳು-2019’ರ ಕರಡು ವಿರುದ್ಧ ಪಕ್ಷಾತೀತವಾಗಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ದುರುದ್ದೇಶದಿಂದ ಕೂಡಿದ ಈ ಹೊಸ ಕರಡು ಕೈಬಿಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಪರಿಣಾಮ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸಭೆಯನ್ನು ಮಂಗಳವಾರಕ್ಕೆ ಮುಂದೂಡಿದರು.
Related Articles
Advertisement
ಮೂರು ತಿಂಗಳಲ್ಲೇ ಅನುಮೋದಿಸಬೇಕಿತ್ತು: ಪದ್ಮನಾಭ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ ಪಾಲಿಕೆ ಸದಸ್ಯ ಮಂಜುನಾಥ ರಾಜು, “ಬಿಬಿಎಂಪಿ 2018ರಲ್ಲಿ ರೂಪಿಸಿದ ಜಾಹೀರಾತು ಬೈಲಾವನ್ನು ಸರ್ಕಾರ ಮೂರು ತಿಂಗಳಲ್ಲೇ ಅನುಮೋದಿಸಬೇಕಿತ್ತು. ಆದರೆ, ಅನುಮೋದನೆ ನೀಡದ ಕಾರಣ “ಕರ್ನಾಟಕ ಪೌರಾಡಳಿತ ಕಾಯ್ದೆ-1976’ರ ಕಲಂ 425 ಪ್ರಕಾರ, ಡೀಮ್ಡ್ ಅನುಮೋದನೆ ಹೊಂದಿದೆ. ಜಾಹೀರಾತು ನಿಷೇಧದ ಬಗ್ಗೆ ಪಾಲಿಕೆ ಸರ್ವಾನುಮತದಿಂದ ನಿರ್ಣಯ ತೆಗೆದುಕೊಂಡಿದೆ. ನಗರಾಭಿವೃದ್ಧಿ ಇಲಾಖೆಯು ಏಕಾಏಕಿ ಪಾಲಿಕೆಯ ಗಮನಕ್ಕೆ ತರದೆ ಕರಡು ರೂಪಿಸಿರುವುದು ಕೌನ್ಸಿಲ್ ಧ್ವನಿ ಅಡಗಿಸಿದಂತಾಗಿದೆ. ಇದರಲ್ಲಿ ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿದರು.
ಕೆಎಂಸಿ ಕಲಂ 427 ತಪ್ಪಾಗಿ ಬಳಸಿಕೊಳ್ಳಲಾಗಿದೆ. ಕೌನ್ಸಿಲ್ ಬೈಲಾ ಮಾಡದಿದ್ದರೆ, ಸರ್ಕಾರ ನಿರ್ಣಯ ತೆಗೆದುಕೊಳ್ಳಬಹುದು. ಆದರೆ, ಪಾಲಿಕೆಯ ಎಲ್ಲ ಸದಸ್ಯರು ಒಮ್ಮತದಿಂದ ತೆಗೆದುಕೊಂಡಿರುವ ನಿರ್ಣಯವನ್ನು ಕಡೆಗಣಿಸುವುದು ಸರಿಯಲ್ಲ. ಸರ್ಕಾರ ಮತ್ತು ಪಾಲಿಕೆಯ ನಡುವೆ ತೊಡಕು ಉಂಟಾಗುವುದು ಬೇಡ. ಈ ಹಿಂದೆ ಪಾಲಿಕೆ ರೂಪಿಸಿರುವ ಬೈಲಾವನ್ನೇ ಮುಂದುವರಿಸುವಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ವಿರೋಧ ಪಕ್ಷದ ಸದಸ್ಯರಾದ ಕೆ. ಉಮೇಶ್ ಶೆಟ್ಟಿ, ಸತ್ಯನಾರಾಯಣ , ಎನ್. ಶಾಂತಕುಮಾರಿ ಮತ್ತು ಆಡಳಿತ ಪಕ್ಷದ ಸದಸ್ಯರಾದ ಗುಣಶೇಖರ್, ರಿಜ್ವಾನ್ ಹಾಗೂ ಮಂಜುನಾಥ ರೆಡ್ಡಿ ದನಿಗೂಡಿಸಿದರು. ಪಾಲಿಕೆ ಸದಸ್ಯ ಗುಣಶೇಖರ್ ಮಾತನಾಡಿ, ಸರ್ಕಾರ ಬಿಬಿಎಂಪಿಯ ಬೈಲಾ ತಿರಸ್ಕರಿಸಿರುವ ಬಗ್ಗೆ ಆಯುಕ್ತರು ವಿವರಣೆ ನೀಡಬೇಕು. ಜಾಹೀರಾತಿಗೆ ಪಾಲಿಕೆ ಜಾಗ ನೀಡುವುದರಿಂದ ಯಾವುದೇ ಲಾಭವಿಲ್ಲ. ಯಾವ ಪುರುಷಾರ್ಥಕ್ಕೆ ಜಾಹೀರಾತಿಗೆ ಅನುಮತಿ ನೀಡಬೇಕು ಎಂದು ಪ್ರಶ್ನೆ ಮಾಡಿದರು.
ಮಾಜಿ ಮೇಯರ್ ಮಂಜುನಾಥ ರೆಡ್ಡಿ ಮಾತನಾಡಿ, ಪಾಲಿಕೆ ಸದಸ್ಯರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಸದಾ ಚಟುವಟಿಕೆಯಲ್ಲಿ ಇರುವ ಮಾಫಿಯಾ ಎಂದು ಯಾವುದಾದರೂ ಇದ್ದರೆ, ಅದು ಜಾಹೀರಾತು ಮಾಫಿಯಾ. ಬೆಂಗಳೂರಿಗೆ ಮತ್ತೆ ಜಾಹೀರಾತು ಬೇಡ. ಈ ವಿಷಯವಾಗಿ ಬಿಬಿಎಂಪಿಗೆ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ. ಸಾರ್ವಜನಿಕರಿಂದಲೂ ಇದರ ಬಗ್ಗೆ ತೀವ್ರ ವಿರೋಧವಿದೆ. ಬಿಬಿಎಂಪಿಗೆ ಜಾಹೀರಾತಿನಿಂದ ಯಾವುದೇ ಲಾಭವಿಲ್ಲ. ಆದರೆ, ಈ ವಿಷಯವಾಗಿ ಕಳೆದ ಹತ್ತು ವರ್ಷಗಳಲ್ಲಿ ಕೋರ್ಟ್‌ಗೆ ಬಿಬಿಎಂಪಿ ಲಕ್ಷಾಂತರ ರೂ. ಖರ್ಚು ಮಾಡಿದೆ ಎಂದು ಹೇಳಿದರು.
ನಾನು ಭಾಗವಹಿಸುವಂತಿರಲಿಲ್ಲ; ಆಯುಕ್ತರ ಸಮಜಾಯಿಷಿ: ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿ, ಪಾಲಿಕೆ ರೂಪಿಸಿರುವ ಬೈಲಾ ಬಗ್ಗೆ ಸರ್ಕಾರಕ್ಕೆ ಈ ಹಿಂದೆಯೇ ಎಲ್ಲ ಮಾಹಿತಿ ನೀಡಿದ್ದೇವೆ. ಮಾರ್ಚ್ 20ಕ್ಕೆ ಸರ್ಕಾರ ಸಭೆ ನಡೆಸಿತ್ತು. ಆ ಸಮಯದಲ್ಲಿ ಚುನಾವಣಾ ನೀತಿಸಹಿಂತೆ ಜಾರಿಯಲ್ಲಿತ್ತು. ನಾನು ಚುನಾವಣಾಧಿಕಾರಿಯಾಗಿದ್ದ ಕಾರಣ ಯಾವುದೇ ಸಭೆಯಲ್ಲಿ ಭಾಗವಹಿಸುವಂತಿರಲಿಲ್ಲ. ಹೀಗಾಗಿ, ಸಭೆಯಲ್ಲಿ ಭಾಗವಹಿಸಿರಲಿಲ್ಲ. ಈ ನಡುವೆ ಸರ್ಕಾರದಿಂದ ಬೈಲಾಗೆ ತಿದ್ದುಪಡಿ ತರುವಂತೆ ಪತ್ರ ಬಂದಿತ್ತು. ಬೈಲಾಗೆ ನಾನು ಯಾವುದೇ ತಿದ್ದುಪಡಿ ತರಲು ಸಾಧ್ಯವಿಲ್ಲ. ಇದು ಕೌನ್ಸಿಲ್ ನಿರ್ಣಯ ಎಂದು ಪತ್ರ ಬರೆದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೆ ಎಂದು ಸಮಜಾಯಿಷಿ ನೀಡಿದರು.
2016ರಲ್ಲಿ ನಗರದ ಜಾಹೀರಾತಿನ ಬಗ್ಗೆ ಮತ್ತು ಅದರಿಂದ ಪಾಲಿಕೆಗೆ ಉಂಟಾಗುತ್ತಿರುವ ನಷ್ಟದ ಬಗ್ಗೆ ಸರ್ವೇ ಮಾಡಲಾಗಿತ್ತು. ಈ ಸರ್ವೇಯಲ್ಲಿ 5,522 ಹೋರ್ಡಿಂಗ್‌ಗಳನ್ನು ಗುರುತಿಸಲಾಗಿತ್ತು. ಹೋರ್ಡಿಂಗ್ ಅಳವಡಿಸಿಕೊಂಡವರು ಇಲ್ಲಿಯವರೆಗೆ ತೆರಿಗೆ ಹಣ ಪಾವತಿಸದೆ ಇರುವುದನ್ನು ಲೆಕ್ಕಹಾಕಿ 149 ಕೋಟಿ ರೂ. ಎಂದು ಮತ್ತು ಅದಕ್ಕೆ ಶುಲ್ಕ ಸೇರಿಸಿ 155 ಕೋಟಿ ರೂ. ಹಾಗೂ ಅದರ ಬಡ್ಡಿ ಸೇರಿಸಿ 331 ಕೋಟಿ ರೂ. ಎಂದು ಲೆಕ್ಕಹಾಕಲಾಗಿತ್ತು. ಈ ಹಂತದಲ್ಲಿ ಪಾಲಿಕೆಗೆ 65 ಕೋಟಿ ರೂ. ಸಂಗ್ರಹವಾಗಿದೆ. ಇನ್ನು ಕೆಲವರು ಈ ವಿಷಯವಾಗಿ ಕೋರ್ಟ್ ಮೊರೆಹೋಗಿದ್ದಾರೆ ಎಂದರು.
ಕೋರ್ಟ್ ಮತ್ತೂಮ್ಮೆ ಸಮೀಕ್ಷೆ ನಡೆಸುವಂತೆ ಆದೇಶ ನೀಡಿದ್ದರಿಂದ 3,652 ಹೋರ್ಡಿಂಗ್‌ಗಳ ಬಗ್ಗೆ ವಿವರ ಸಂಗ್ರಹಿಸಿ ವರದಿ ನೀಡಲಾಗಿತ್ತು. ಕೋರ್ಟ್ ಎಲ್ಲರಿಗೂ ನೋಟಿಸ್ ನೀಡುವಂತೆ ಆದೇಶಿಸಿತ್ತು. ಇದರಲ್ಲಿ 1,864 ಅನಧಿಕೃತ ಎಂದು ತಿಳಿದು ಬಂದಿತ್ತು. 474 ಎಫ್ಐಆರ್ ದಾಖಲಿಸಲಾಗಿತ್ತು. ಅನಧಿಕೃತ ಫಲಕಗಳನ್ನು 1,342 ಮಾಲೀಕರೆ ತೆರವುಗೊಳಿಸಿದ್ದರು ಮತ್ತು 290 ಫಲಕಗಳನ್ನು ಪಾಲಿಕೆ ತೆರವುಗೊಳಿಸಿದ್ದು, 214 ಜನ ಕೋರ್ಟ್‌ನಿಂದ ಮಧ್ಯಂತರ ಆದೇಶ ತಂದಿದ್ದಾರೆ. 1,806 ಪ್ರಕರಣಗಳು ಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ. ಪ್ರಕರಣಗಳು ಕೋರ್ಟ್‌ನಲ್ಲಿರುವುದರಿಂದ ಅದನ್ನು ಉಲ್ಲಂಘನೆ ಮಾಡಿ, ತೆರಿಗೆ ಸಂಗ್ರಹ ಮಾಡಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದರು.
ಅಧಿಕಾರಿಗೆ ಶೋಕಾಸ್ ನೋಟಿಸ್: “ಪಾಲಿಕೆಯ ಅಧಿಕಾರಿಗಳು ಜಾಹೀರಾತಿನ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೂಂದು ಕಣ್ಣಿಗೆ ಸುಣ್ಣ ಎನ್ನುವ ನೀತಿ ಅನುಸರಿಸುತ್ತಿದ್ದಾರೆ’ ಎಂದು ಪಾಲಿಕೆಯ ಆಡಳಿತ ಪಕ್ಷದ ಸದಸ್ಯ ಮಹಮ್ಮದ್ ರಿಜ್ವಾನ್ ನವಾಬ್ ಅವರು ಆರೋಪಿಸಿದರು. “ಖಾಸಗಿ ಸೈಕಲ್ ಕಂಪನಿಯೊಂದಕ್ಕೆ ನಗರದ ಮುಖ್ಯರಸ್ತೆಗಳಲ್ಲಿ 150 ಎಲ್‌ಇಡಿ ಡಿಸ್‌ಪ್ಲೆಗಳನ್ನು ಅಳವಡಿಸಲು ಅವಕಾಶ ನೀಡಲಾಗಿದೆ. ಇದನ್ನು ಅಧಿಕಾರಿಗಳು ಪಾಲಿಕೆಯ ಗಮನಕ್ಕೆ ತಂದಿಲ್ಲ. ಉನ್ನತ ಅಧಿಕಾರಿಗಳೇ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ.
ಅವರಿಗೂ ಕಿಕ್‌ಬ್ಯಾಕ್ ಸೇರುತ್ತಿದೆ. ಸ್ಕೈವಾಕ್ ಮತ್ತು ಬಸ್ ನಿಲ್ದಾಣಗಳಲ್ಲಿ ಇಂದಿಗೂ ಜಾಹೀರಾತು ಇವೆ’ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, “ಬಸ್ ನಿಲ್ದಾಣ ಮತ್ತು ಸ್ಕೈವಾಕ್‌ಗಳಲ್ಲಿ ಜಾಹೀರಾತು ಅಳವಡಿಸಿಕೊಳ್ಳುವುದಕ್ಕೆ 20 ವರ್ಷಗಳವರೆಗೆ ಪಾಲಿಕೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ, ಅದನ್ನು ತೆರವುಗೊಳಿಸಲು ಸಾಧ್ಯವಿಲ್ಲ.
“ಬಿಬಿಎಂಪಿ ಹೊರಾಂಗಣ ಸೈನೇಜ್ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018’ರಲ್ಲೇ ಸ್ಕೈವಾಕ್ ಮತ್ತು ಬಸ್ ನಿಲ್ದಾಣಗಳಲ್ಲಿನ ಜಾಹೀರಾತನ್ನು ನಿಷೇಧಿಸಿ, ಅವರಿಗೆ ಬಾಕಿ ಹಣ ನೀಡುವ ಪ್ರಸ್ತಾವಕ್ಕೆ ಸಭೆ ಅನುಮತಿ ನೀಡಿರಲಿಲ್ಲ. ಇನ್ನು ಸೈಕಲ್ ಕಂಪನಿಯ ಟೆಂಡರ್ ಅನ್ನು ರದ್ದುಗೊಳಿಸಲಾಗಿದೆ’ಎಂದು ಮಾಹಿತಿ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಕಮಿಷನರ್ ಮತ್ತು ಪಾಲಿಕೆಯ ಸದಸ್ಯರ ಗಮನಕ್ಕೆ ತಾರದೆ 150 ಎಲ್‌ಇಡಿ ಡಿಸ್‌ಪ್ಲೆಗಳನ್ನು ಅಳವಡಿಸಲು ಅನುಮತಿ ಕೊಟ್ಟ ಅಧಿಕಾರಿಗೆ ಶೋಕಸ್ ನೋಟಿಸ್ ನೀಡಲಾಗಿದೆ’ ಎಂದು ಹೇಳಿದರು.