Advertisement
2018-19ನೇ ಸಾಲಿನಲ್ಲಿ ಒಟ್ಟಾರೆ 111.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 135 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ ಹೊಂದಲಾಗಿದೆ. ಅದರಂತೆ ಮುಂಗಾರು ಹಂಗಾಮಿನಲ್ಲಿ (ಸೆಪ್ಟೆಂಬರ್ ಅಂತ್ಯದವರೆಗೆ) ಒಟ್ಟು ಕೃಷಿ ಬಿತ್ತನೆ ಗುರಿ 74.89 ಲಕ್ಷ ಹೆಕ್ಟೇರ್ ಪೈಕಿ 67.99 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 2017ರ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಮಾಣ 64.37 ಲಕ್ಷ ಹೆಕ್ಟೇರ್‌ನಷ್ಟಿತ್ತು.
Related Articles
Advertisement
ಈ ಪೈಕಿ ಒಣಹವೆ ಮತ್ತು ಮಳೆಯಿಂದಾಗಿ 83,523 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ವಿಶೇಷವೆಂದರೆ ತೇವಾಂಶ ಕೊರತೆ ಮತ್ತು ಮಳೆಯಿಂದ ಹಾನಿಗೊಳಗಾಗಿರುವುದು ಹತ್ತಿ ಬೆಳೆ ಮಾತ್ರ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ (ಅ.1ರಿಂದ) 31.80 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 15 ದಿನಗಳಲ್ಲಿ ಸುಮಾರು 7.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 2017ರಲ್ಲಿ ಇದೇ ಅವಧಿಗೆ 8.02 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು.
ಮುಂಗಾರು ಹಂಗಾಮಿನಲ್ಲಿ ಮಳೆ ಬಿದ್ದರೂ ಕೆಲವು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗಿರುವುದು ಮತ್ತು ಸುಮಾರು 100 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿರುವುದು ಕೃಷಿ ಚಟುವಟಿಕೆಗಳ ಆರಂಭ ನಿಧಾನಗತಿಯಾಗಲು ಕಾರಣ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ತೋಟಗಾರಿಕಾ ಬೆಳೆಗಳಿಗೂ ಅಪಾಯ: ಬರ ಪರಿಸ್ಥಿತಿ ಮತ್ತು ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವುದರಿಂದ ತೋಟಗಾರಿಕಾ ಬೆಳೆಗಳೂ ಅಪಾಯ ಎದುರಿಸುವ ಆತಂಕ ಎದುರಾಗಿದೆ. ಈ ಹಿಂದಿನ 5 ವರ್ಷದಲ್ಲಿ ತೋಟಗಾರಿಕಾ ಬೆಳೆ ಪ್ರದೇಶ ಮತ್ತು ಬೆಳೆ ಪ್ರಮಾಣ ಏರುಮುಖವಾಗಿತ್ತು. ಸತತ ಬರದ ನಡುವೆಯೂ ಬೆಳೆ ರೈತರ ಕೈ ಹಿಡಿದಿತ್ತು.
ಅದೇ ರೀತಿ ಈ ಬಾರಿಯೂ ಉತ್ತಮ ಬೆಳೆ ಬರುವ ನಿರೀಕ್ಷೆ ಇತ್ತಾದರೂ ಇದೀಗ ಬೆಳೆಗಳು ಒಣಗುತ್ತಿರುವುದು ರೈತರಿಗೆ ಸಮಸ್ಯೆ ತಂದೊಡ್ಡಿದೆ. ಮುಂಗಾರು ಹಂಗಾಮಿನಲ್ಲಿ ಕಬ್ಬು ಬೆಳೆ ರೈತರ ಪಾಲಿಗೆ ಆಶಾದಾಯಕ ಬೆಳವಣಿಗೆಯ ನಿರೀಕ್ಷೆ ಮೂಡಿಸಿದೆ. ಒಟ್ಟಾರೆ ನಿರೀಕ್ಷಿತ ಗುರಿ 4.56 ಲಕ್ಷ ಹೆಕ್ಟೇರ್ ಪೈಕಿ 4.63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಕೃಷಿ ಆರಂಭವಾಗಿದೆ. ಅತಿಯಾದ ಮಳೆಯಿಂದ ಸುಮಾರು 4,600 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ವರದಿ ತಿಳಿಸಿದೆ.