Advertisement

ಪಿಲಿಕುಳ ಪಾರ್ಕ್‌ ಪಕ್ಕದಲ್ಲೇ ಸಾಹಸ ಕ್ರೀಡಾ ಪಾರ್ಕ್‌ ಯೋಜನೆ

02:05 AM Jul 11, 2017 | Karthik A |

ಮಹಾನಗರ: ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಲು ಪಿಲಿಕುಳದಲ್ಲಿ 4.25 ಕೋಟಿ ರೂ.ವೆಚ್ಚದಲ್ಲಿ ‘ಸಾಹಸ ಕ್ರೀಡಾ ಪಾರ್ಕ್‌’ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಈ ಸಂಬಂಧ ಯೋಜನೆಯ ಅಂತಿಮ ರೂಪುರೇಷೆ ಸಿದ್ಧವಾಗುತ್ತಿದೆ. ಬೆಂಗಳೂರಿನ ವಂಡರ್‌ಲಾ ಸಂಸ್ಥೆಯು ಸಾಹಸ ಕ್ರೀಡೆ’ ಸಂಬಂಧಿಸಿದ ರೂಪುರೇಷೆ ಸಿದ್ಧಪಡಿಸಿ, ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿದೆ. ಸರಕಾರ ಅನುಮೋದನೆ ನೀಡಬೇಕಿದೆ. ಬಹುತೇಕ ಸಾಹಸ ಕ್ರೀಡೆಗಳು ಮಕ್ಕಳಿಗೆ ಇಷ್ಟವಾಗಿದ್ದು,ಯುವ ಸಮುದಾಯ ಮತ್ತು ವಯಸ್ಕರಿಗೆ ಪ್ರತ್ಯೇಕ ವಿಭಾಗವಿರಲಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ವಂಡರ್‌ಲಾ ಶೇ.70-30 ಪಾಲುದಾರಿಕೆಯಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಆದಾಯದಲ್ಲೂ ಅದೇ ರೀತಿ ಹಂಚಿಕೆಯಾಗಲಿದೆ.

Advertisement

ಪಿಲಿಕುಳ ಶಿವರಾಮ ಕಾರಂತ ಉದ್ಯಾನ
ವನ ಬಳಿಯ ಜೆಎಲ್‌ಆರ್‌ (ಜಂಗಲ್‌ ಲಾಡ್ಜಸ್‌ ರೆಸಾರ್ಟ್‌) ಸಮೀಪ ಸುಮಾರು 6 ಎಕ್ರೆ ಜಾಗದಲ್ಲಿ ಸುಮಾರು 4.25 ಕೋಟಿ ರೂ. ವೆಚ್ಚದಲ್ಲಿ ಈ ಪಾರ್ಕ್‌ ನಿರ್ಮಾಣವಾಗಲಿದೆ. ಬಂಗಿ ಜಂಪಿಂಗ್‌, ಕಾಂಬೋ ಸ್ಲಿಥರಿಂಗ್‌, ಕೇಜ್‌ ರೈಡರ್‌, ಡ್ರಿಂಕ್ಸ್‌ ಇನ್‌ ದಿ ಸ್ಕೈ, ಜಂಪ್‌ ವಿಡಿಯೋ, ಜಂಪ್‌ ಫೋಟೋಗ್ರಾಫ್‌ ಇತ್ಯಾದಿ ಕ್ರೀಡೆಗಳು ಇರಲಿವೆ. ಬುಲ್‌ ರೈಡ್‌, ಹ್ಯೂಮನ್‌ ಝೋರ್ಬ್, ವೆಲೆರೋ ವಾಲ್‌, ರನ್ನಿಂಗ್‌ ಬಂಗಿ, ಗ್ಲೇಡಿಯೇಟರ್‌, ಬಿಗ್‌ ಗ್ಲೋವ್‌ ಬಾಕ್ಸಿಂಗ್‌, ಸುಮೋ ರೆಸ್ಲಿಂಗ್‌, ಕಮಾಂಡೋ ನೆಟ್‌, ಭಂಗಿ ಟಗ್‌ ಆಫ್‌ ವಾರ್‌, ಲ್ಯಾಂಡ್‌ ಝೋರ್ಬಿಂಗ್‌, ವಾಟರ್‌ ಝೋರ್ಬಿಂಗ್‌, ಒಲಿಂಪಿಕ್‌ ಆರ್ಚರಿ, ಏರ್‌ ರೈಫಲ್‌ ಶೂಟಿಂಗ್‌, ರಾಕ್‌ ವಾಲ್‌, ರೋಪ್‌ ಬ್ರಿಡ್ಜ್ ಆಟಗಳೂ ಇರಲಿವೆ.

ಮಕ್ಕಳಿಗೆ ಸಂಬಂಧಿಸಿದಂತೆ, ರಾಕೆಟ್‌ ಬೂಮ್‌, ಟ್ರಾಂಪಲಿನ್‌ ಕಟಪಲ್ಟ್, ಟ್ರಾಂಪಲಿನ್‌ ಜಂಪಿಂಗ್‌ ಜಾಕ್‌, ಕಿಡ್ಸ್‌ ರಾಕ್‌ ವಾಲ್‌, ಕಿಡ್ಸ್‌ ರೋಪ್‌ ಬ್ರಿಡ್ಜ್, ಕಿಡ್ಸ್‌ ಮಿನಿ ಝಿಪ್‌ಲೈನ್‌, ಕಿಡ್ಸ್‌ ಬೋಟಿಂಗ್‌ ರಬ್ಬರ್‌ ಸ್ವಿಮ್ಮಿಂಗ್‌ ಪೂಲ್‌, ಕಿಡ್ಸ್‌ ಆರ್ಚರಿ, ರಿಮೋಟ್‌ ಕಂಟ್ರೋಲ್‌ ಏರ್‌ಕ್ರಾಫ್ಟ್, ರಿಮೋಟ್‌ ಕಂಟ್ರೋಲ್‌ ಕಾರ್‌ ಕ್ರೀಡೆಗಳು ಬರಲಿವೆ.

ಎಂಟು ಕಡೆ ಸಾಹಸ ಕ್ರೀಡೆ
ವಂಡರ್‌ಲಾ ಸಂಸ್ಥೆ ಬೆಂಗಳೂರಿನ ರಾಮನಗರ (5.9ಕೋಟಿ), ಮೈಸೂರು (1.7ಕೋಟಿ), ಗುಲ್ಬರ್ಗದ ಕಲ್ಬುರ್ಗಿ ಲೇಕ್‌ ಸೈಟ್‌ (2.6ಕೋಟಿ), ಹಂಪಿ(2.6ಕೋಟಿ), ಜೋಗ್‌ ಫಾಲ್ಸ್‌ ಸಮೀಪದ ಶರಾವತಿ(4.25ಕೋಟಿ), ನಂದಿ ಹಿಲ್ಸ್‌(5.25ಕೋಟಿ), ಬೆಳಗಾವಿ(4.45ಕೋಟಿ), ಮಂಗಳೂರಿನ ಪಿಲಿಕುಳ(4.25ಕೋಟಿ) ಪ್ರದೇಶವನ್ನು ಸಾಹಸ ಕ್ರೀಡೆಗೆ ಗುರುತಿಸಿದೆ. ಈ 8 ಪ್ರದೇಶದಲ್ಲೂ ವಿಭಿನ್ನವಾದ ಸಾಹಸ ಕ್ರೀಡೆ ಪಾರ್ಕ್‌ ನಿರ್ಮಾಣವಾಗಲಿದೆ. 

ಅನುಮೋದನೆಯ ನಿರೀಕ್ಷೆ
ಪಿಲಿಕುಳದಲ್ಲಿ 4.25 ಕೋಟಿ ರೂ.ವೆಚ್ಚದಲ್ಲಿ ‘ಸಾಹಸ ಕ್ರೀಡೆ ಪಾರ್ಕ್‌’ ನಿರ್ಮಾಣ ಕುರಿತಂತೆ ಈಗಾಗಲೇ ವಂಡರ್‌ಲಾ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದೆ. ಸರಕಾರ ಇದಕ್ಕೆ ಅನುಮೋದನೆ ನೀಡಿದ ಬಳಿಕ ಯೋಜನೆಗೆ ಚಾಲನೆ ನೀಡಲಾಗುವುದು. ಶೀಘ್ರವೇ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ.
– ಸುಧೀರ್‌ ಗೌಡ, ಸಮಾಲೋಚಕರು, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ದ.ಕ.

Advertisement

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next