Advertisement

ಶಾಶ್ವತ ಯೋಜನೆಗಾಗಿ ಕಾಯುತ್ತಿರುವ ಸಾಹಸ ಕ್ರೀಡಾ ಪ್ರಿಯರು

06:30 AM Jan 12, 2019 | |

ಕೂಳೂರು : ಇಲ್ಲಿಯ ಫ‌ಲ್ಗುಣಿ ನದಿಯಲ್ಲಿ ರಿವರ್‌ ಫೆಸ್ಟ್‌ಗೆ ಕ್ಷಣ ಗಣನೆ ಆರಂಭವಾಗಿದೆ. ಆದರೆ ಜಿಲ್ಲೆಯ ಸಾಹಸ ಕ್ರೀಡಾ ಪ್ರಿಯರು ಮಾತ್ರ ಜಲಸಾಹಸ ಕ್ರೀಡೆಗೆ ಶಾಶ್ವತವಾಗಿ ಪ್ರೋತ್ಸಾಹ ಸಿಗದೆ ಇತರರಿಗೆ ಕಲಿಸುವ ಸದಾಶಯದಿಂದ ದೂರವೇ ಉಳಿದಿದ್ದಾರೆ.

Advertisement

ದ.ಕ. ಜಿಲ್ಲೆಯ ಸಮುದ್ರ ತೀರ, ನದಿ ತಟಗಳು ಜಲಸಾಹಸ ಕ್ರೀಡೆಗೆ ಹೇಳಿ ಮಾಡಿಸಿದ ಆಯಕಟ್ಟಿನ ಸ್ಥಳವಾಗಿದೆ. ಇಲ್ಲಿ ಮಂದವಾದ ಗಾಳಿ, ಶಾಂತವಾದ ಸಮುದ್ರ, ನಿಧಾನಗತಿಯಲ್ಲಿ ಹರಿಯುವ ನದಿಗಳು ಸಾಹಸ ಕ್ರೀಡೆಗೆ ಪೂರಕವಾಗಿದೆ. ಇದೀಗ ನದಿ ತಟಗಳು ಕೇವಲ ಮರಳುಗಾರಿಕೆಯ ದಕ್ಕೆಗೆ ಸೀಮಿತವಾಗಿದೆ.

ತಣ್ಣೀರುಬಾವಿ, ಅಳಿವೆ ಬಾಗಿಲು, ಸುಲ್ತಾನ್‌ಬತ್ತೇರಿಯಂತಹ ಪ್ರದೇಶಗಳಲ್ಲಿ ಸಾಹಸ ಜಲಕ್ರೀಡೆಗೆ ಅನುವು ಮಾಡಿಕೊಡಲು ಉತ್ತಮ ವಾತವರಣ ರೂಪಿಸಬೇಕಿದೆ. ನದಿ ತಟಕ್ಕೆ ವಿಂಡ್‌ ಸರ್ಫಿಂಗ್‌ ಪರಿಕರ, ಕೆನೊಯಿಂಗ್‌, ಪ್ಯಾರಾ ಸೈಲಿಂಗ್‌, ಕಯಾಕಿಂಗ್‌ ನಂತಹ ಜಲಕ್ರೀಡೆಗಳ ಪರಿಕರ ಇಡಲು ಸೂಕ್ತ ಗೋದಾಮಿನ ಆವಶ್ಯಕತೆಯಿದೆ.

ಇದೀಗ ಕೂಳೂರು ನದಿ ತಟವನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ಸಹಿತ ಸಮತಟ್ಟು ಮಾಡಲಾಗಿದೆ. ಕೆಳಗಿಳಿದು ನದಿ ತಟ ತಲುಪಲು ಮೆಟ್ಟಿಲು ನಿರ್ಮಿಸಲಾಗಿದೆ. ಶಾಶ್ವತವಾದ ಶೌಚಾಲಯವನ್ನು ನಿರ್ಮಿಸಿ, ಸ್ಥಳೀಯವಾಗಿ ಸ್ವಚ್ಛತೆಯ ಅರಿವು ಮೂಡಿಸಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಶಾಶ್ವತವಾದ ಯೋಜನೆಯೊಂದನ್ನು ರೂಪಿಸಬೇಕಿದೆ.

ಕೂಳೂರು ಯಾವೆಲ್ಲ ಜಲಸಾಹಸ ಕ್ರೀಡೆ ಮಾಡಬಹುದು
ವಿಂಡ್‌ ಸರ್ಫಿಂಗ್‌, ಕಯಾಕಿಂಗ್‌, ಫ್ಲೋಟಿಂಗ್‌ ಜೆಟ್, ಸ್ಪೀಡ್‌ಬೋಟ್‌ನಂತಹ ಪ್ರವಾಸಿ ಆಕರ್ಷಣೆಯ ಜಲಸಾಹಸ ಕ್ರೀಡೆಗಳನ್ನು ಶನಿವಾರ ಹಾಗೂ ರವಿವಾರಗಳಲ್ಲಿ ಆಯೋಜಿಸಬಹುದಾಗಿದೆ. ಕೂಳೂರು ಮಂಗಳೂರಿನಿಂದ ಕೇವಲ ಐದಾರು ಕಿ.ಮೀ. ದೂರವಿದ್ದು, ಸಂಚಾರ ವ್ಯವಸ್ಥೆಯೂ ಉತ್ತಮವಾಗಿದೆ. ರಾಜ್ಯ ಯುವಜನ ಹಾಗೂ ಕ್ರೀಡಾ ಇಲಾಖೆಯಲ್ಲಿಯೂ ಸಾಹಸ ಜಲಕ್ರೀಡೆಗೆ ಬೇಕಾದ ಪರಿಕರಗಳಿದ್ದು, ಬಳಸುವವರು ಇಲ್ಲದೆ ಇಲಾಖೆಯ ಗೋದಾಮಿನಲ್ಲಿಯೇ ಉಳಿದುಕೊಂಡಿದೆ.

Advertisement

ರಾಜ್ಯ ಸರಕಾರ 2016-17ರಲ್ಲಿ ಕರಾವಳಿ ಪ್ರದೇಶಗಳಲಿ ಜಂಗಲ್‌ ಲಾಡ್ಜ್ ಆ್ಯಂಡ್‌ ರೆಸಾರ್ಟ್‌ ಸಹಿತ ಪಣಂಬೂರು, ಸಸಿಹಿತ್ಲು ಬೀಚ್ನ್ನು ಆಯ್ಕೆ ಮಾಡಿತ್ತು. ಆದರೆ ಇದುವರೆಗೂ ಈ ಪ್ರದೇಶದಲ್ಲಿ ಜಲಸಾಹಸ ಕ್ರೀಡೆಗಳು ಕಾರ್ಯರೂಪಕ್ಕೆ ಬರುವಲ್ಲಿ ವಿಳಂಬವಾಗುತ್ತಿವೆ.

ಪ್ರೋತ್ಸಾಹ ನೀಡಲು ಸಿದ್ಧ
ಜಲ ಸಾಹಸ ಕ್ರೀಡೆಗೆ ಯಾವುದೇ ರೀತಿಯ ಪ್ರೋತ್ಸಾಹ ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಹೆಚ್ಚೆಚ್ಚು ಎಡ್ವೆಂಚರ್‌ ಕ್ರೀಡೆಗೆ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ನದಿ ತಟದಲ್ಲಿ ಪರಿಕರಗಳ ಸುರಕ್ಷತೆಗಾಗಿ ಗೋದಾಮು ನಿರ್ಮಿಸುವ ಬಗ್ಗೆ ಕ್ರೀಡಾಳುಗಳು ಅಥವಾ ಕ್ರೀಡಾ ತರಬೇತಿ ಸಂಸ್ಥೆಗಳು ಅರ್ಜಿ ಸಲ್ಲಿಸಿದರೆ ನಾವು ಅದರ ಬಗ್ಗೆ ಖಚಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ.
ಶಶಿಕಾಂತ್‌ ಸೆಂಥಿಲ್‌,
ಜಿಲ್ಲಾಧಿಕಾರಿಗಳು

ಗೋದಾಮು ನಿರ್ಮಿಸಿ
ವಿಂಡ್‌ ಸರ್ಫಿಂಗ್‌, ಕಯಾಕಿಂಗ್‌ನ್ನು ಕೂಳೂರು ನದಿ ತಟದಲ್ಲಿ ತರಬೇತಿ ಸಹಿತ ಆಸಕ್ತರಿಗೆ ಇಲ್ಲಿ ಸಾಹಸ ಜಲಕ್ರೀಡೆಗೆ ಅವ ಕಾಶವಿದೆ. ಜಿಲ್ಲಾಡಳಿತ ಕೂಳೂರು ನದಿ ತಟದಲ್ಲಿ ನಮಗೊಂದು ಉತ್ತಮ ಗೋದಾ ಮನ್ನು ನಿರ್ಮಿಸಿಕೊಟ್ಟರೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಬರುವುದರಲ್ಲಿ ಸಂಶಯವಿಲ್ಲ.
 – ಹೆನ್ರಿ ಬ್ರಿಟ್ಟೋ, 
ತರಬೇತುದಾರ, ಜಲಸಾಹಸ ಕ್ರೀಡೆ

ಶಾಶ್ವತ ಪ್ರೋತ್ಸಾಹ ಅಗತ್ಯ
ನಮ್ಮ ಜಲಸಾಹಸ ಕ್ರೀಡೆಗೆ ಸಂಬಂಧಪಟ್ಟಂತೆ ಸರ್ಫಿಂಗ್‌ ಬೋರ್ಡ್‌, ಸೈಲಿಂಗ್‌ ಬೋಟ್‌ಗಳನ್ನು ಇಡಲು ಗೋದಾಮು ಬೇಕೇ ಬೇಕು. ನಮ್ಮ ಆಸಕ್ತಿಯನ್ನು ಮಕ್ಕಳಿಗೆ, ಇತರರಿಗೆ ಕಲಿಸಲು ನಮಗೂ ಉತ್ತೇಜ ಸಿಗುತ್ತದೆ. ಜಿಲ್ಲಾಡಳಿತ ಜಲಸಾಹಸ ಕ್ರೀಡೆಗೆ ಶಾಶ್ವತವಾದ ಪ್ರೋತ್ಸಾಹ ನೀಡಬೇಕು.
– ಲಿಂಗಪ್ಪ,
ವಿಂಡ್‌ ಸರ್ಫಿಂಗ್‌ ಕ್ರೀಡಾಪಟು

•ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next