Advertisement

ಸಾಹಸ ಮನೋಭಾವದ ಕೈಟ್‌ ಬ್ರದರ್ಸ್‌!

03:19 PM Nov 15, 2018 | |

ಸರ್ಕಾರಿ ಶಾಲೆಯ ವಾಸ್ತವತೆ ಕುರಿತಂತೆ ವೃಷಭ್‌ ಶೆಟ್ಟಿ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ ರಾಮಣ್ಣ ರೈ’ ಚಿತ್ರ ಜೋರು ಸುದ್ದಿ ಮಾಡಿದ್ದು ಎಲ್ಲರಿಗೂ ಗೊತ್ತು. ಕನ್ನಡದಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಅನೇಕ ಚಿತ್ರಗಳು ಬಂದಿವೆ. ಒಂದಷ್ಟು ಸುದ್ದಿಯನ್ನೂ ಮಾಡಿವೆ. ಈಗ ಆ ಸಾಲಿಗೆ ಹೊಸಬರ “ಕೈಟ್‌ ಬ್ರದರ್ಸ್‌’ ಹೊಸ ಸೇರ್ಪಡೆ. ಈ ಶೀರ್ಷಿಕೆ ಕೇಳಿದಾಗ, ವಿಮಾನ ಕಂಡು ಹಿಡಿದ ರೈಟ್‌ ಬ್ರದರ್ಸ್‌ ನೆನಪಾಗುತ್ತೆ. ಆ ಸಹೋದರರಂತೆ, ಈ “ಕೈಟ್‌ ಬ್ರದರ್ಸ್‌’ರದ್ದು ಒಂದು ಯಶೋಗಾಥೆಯ ಚಿತ್ರಣ ಇಲ್ಲಿದೆ. ಈ ಚಿತ್ರದ ಮೂಲಕ ವಿರೇನ್‌ ಸಾಗರ್‌ ಬಗಾಡೆ ನಿರ್ದೇಶಕರಾಗುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಇಷ್ಟರಲ್ಲೇ ಸೆನ್ಸಾರ್‌ ಮಂಡಳಿಗೆ ಹೋಗಲು ಅಣಿಯಾಗಿದೆ ಚಿತ್ರತಂಡ.

Advertisement

ಈ “ಕೈಟ್‌ ಬ್ರದರ್ಸ್‌’ ಕಥೆ ಏನು? “ಇದೊಂದು ಅಡ್ವೆಂಚರಸ್‌ ಡ್ರಾಮಾ’ ಎಂಬ ಉತ್ತರ ನಿರ್ದೇಶಕರದ್ದು. “ಮಕ್ಕಳ ಮೃದು ಮನಸ್ಸಿನೊಳಗೆ ಸಾಹಸ ಮನೋಭಾವ ಕೂಡ ಇರುತ್ತೆ. ಅವರನ್ನು ಪ್ರೋತ್ಸಾಹಿಸಿದರೆ, ಆ ಮಕ್ಕಳು ಏನು ಬೇಕಾದರೂ ಸಾಧಿಸಬಲ್ಲರು. ಅವರ ಮುಗ್ಧತೆ ಜೊತೆಗೊಂದು ಸಾಮಾಜಿಕ ಕಳಕಳಿ ಇರುವ ಅಂಶವೂ ಇದೆ ಎಂಬುದರ ಚಿತ್ರಣವಿಲ್ಲಿದೆ. ಇಲ್ಲಿ ಪ್ರಮುಖವಾಗಿ ಸರ್ಕಾರಿ ಶಾಲೆ ಕುರಿತ ವಿಷಯವಿದೆ. ಅದೇ ಚಿತ್ರದ ಹೈಲೈಟ್‌ ಕೂಡ. “ಸರ್ಕಾರಿ ಶಾಲೆ’ಯಿಂದ ತನ್ನ ಗೆಳೆಯರೆಲ್ಲರೂ ವಂಚಿತರಾಗುತ್ತಿದ್ದಾರೆ ಎಂಬ ತಿಳಿಯುವ ಸಾಹಸಿ ಮನೋಭಾವದ ಹುಡುಗನೊಬ್ಬ, ಕಾಳಜಿ ವಹಿಸಿ, ಪುನಃ ಹೇಗೆ ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಯನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಾನೆ ಎಂಬುದು ಕಥಾವಸ್ತು. ರಾಮಾಯಣದಲ್ಲಿ ಹನುಮಂತ ಶ್ರೀರಾಮನಿಗೋಸ್ಕರ ಸಾಗರ ದಾಟಿ ಹೇಗೆ ಲಂಕೆಗೆ ಹಾರಿದ್ದನೋ, ಇಲ್ಲಿ ಶ್ರೀರಾಮ ಎಂಬ ಗೆಳೆಯ ತನ್ನ ಮತ್ತೂಬ್ಬ ಗೆಳೆಯ ಹನುಮಂತನಿಗಾಗಿ ಹಳ್ಳಿ ಬಿಟ್ಟು, ಬೆಂಗಳೂರಿನಂತಹ ನಗರಕ್ಕೆ ಹೋಗಿ, ಅಲ್ಲಿಂದ ಇನ್ನೆಲ್ಲಿಗೋ ಸಾಗಿ ಯಾವ ಸಾಧನೆ ಮಾಡುತ್ತಾನೆ ಎಂಬುದೇ ಚಿತ್ರದ ಸಾರಾಂಶ’ ಎನ್ನುತ್ತಾರೆ ನಿರ್ದೇಶಕ ವಿರೇನ್‌ ಸಾಗರ್‌ ಬಗಾಡೆ.

ಅಂದಹಾಗೆ, ಚಿತ್ರಕ್ಕೆ ಇತ್ತೀಚೆಗೆ ಹಾಡುಗಳ ಧ್ವನಿಮುದ್ರಣವಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಅನೀಶ್‌ ಚೆರಿಯನ್‌ ಸಂಗೀತ ನೀಡಿದ್ದಾರೆ. ಅನನ್ಯ ಭಟ್‌, “ಚುಟು ಚುಟು’ ಖ್ಯಾತಿಯ ರವೀಂದ್ರ ಸೊರಗಾವಿ, ಬಾಲಿವುಡ್‌ ಗಾಯಕ ಕೇಶವ ಕುಮಾರ್‌ ಮತ್ತು ನಿರ್ದೇಶಕ ವಿರೇನ್‌ ಸಾಗರ್‌ ಬಗಾಡೆ ಕೂಡ ಹಾಡಿದ್ದಾರೆ. ಸಿಂಪಲ್‌ ಸುನೀ, ವಿರೇನ್‌ ಸಾಗರ್‌ ಬಗಾಡೆ ಸಾಹಿತ್ಯವಿದೆ. ಚಿತ್ರದಲ್ಲಿ ಸಮರ್ಥ್ ಆಶಿ, ಪ್ರಣೀಲ್‌ ನಾಡಿಗೇರ್‌ ಪ್ರಮುಖ ಆಕರ್ಷಣೆ. ಉಳಿದಂತೆ ಶ್ರೇಯಾ ಹರಿಹರ್‌, ವಿನೋದ್‌ ಬಗಾಡೆ, ಅನಂತ್‌ ದೇಶಪಾಂಡೆ, ಪ್ರಭು ಹಂಚನಾಳ್‌, ರಾಜೀವ ಸಿಂಗ್‌ ಹಲವಾಯಿ ಸೇರಿದಂತೆ ಉತ್ತರ ಕರ್ನಾಟಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಅಶೋಕ್‌ ಕಶ್ಯಪ್‌ ಛಾಯಾಗ್ರಹಣವಿದೆ. ಸಂತೋಷ್‌ ರಾಧಾಕೃಷ್ಣನ್‌ ಸಂಕಲನ ಮಾಡಿದ್ದಾರೆ. ಭಜರಂಗ ಸಿನಿಮಾ ಬ್ಯಾನರ್‌ನಲ್ಲಿ ರಜನಿಕಾಂತ್‌ರಾವ್‌ ಬಳ್ವಿ ಮತ್ತು ಮಂಜುನಾಥ್‌ ಬಿ.ಎಸ್‌. ಚಿತ್ರ ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next