ಬಳ್ಳಾರಿ: ಅಂತಾರಾಜ್ಯ ಗಡಿ ಗುರುತು ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನವೂ ಸರ್ವೇ ಕಾರ್ಯ
ಮುಂದುವರಿದಿದೆ.
ನಗರಕ್ಕೆ ಆಗಮಿಸಿರುವ ಡೆಹರಾಡೂನ್‌ನ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳ ತಂಡ ಎರಡನೇ ದಿನವೂ ವಿವಿಧ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಸರ್ವೇ ಕಾರ್ಯ ಕೈಗೊಂಡಿದೆ. ಮಂಗಳವಾರ ವಿಭೂತಿಗುಡ್ಡ ಗಣಿ ಪ್ರದೇಶಕ್ಕೆ ಭೇಟಿ ನೀಡಿದ್ದ ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್ ಆಫ್ ಜನರಲ್ ಪವನ್‌ಕುಮಾರ್ ಪಾಂಡೆ ನೇತೃತ್ವದ ತಂಡ, ಬುಧವಾರ ಕರ್ನಾಟಕ- ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಸಂಡೂರು ತಾಲೂಕಿನ ತುಮಟಿ, ಆಂಧ್ರ ಪ್ರದೇಶದ ಹಿರೇಹಾಳ್ ಮಂಡಲದ ಸಿದ್ದಾಪುರ, ಮಲಪನಗುಡಿ ಸೇರಿದಂತೆ ಒಟ್ಟೂ 34 ಕಿ.ಮೀ.ಇರುವ ಗಡಿ ಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿತು.
ಅಂತಾರಾಜ್ಯ ಗಡಿಭಾಗದಲ್ಲಿನ ಓಬಳಾಪುರಂ ಮೈನಿಂಗ್ ಕಂಪನಿ, ಬ್ಲ್ಯಾಕ್‌ಗೊàಲ್ಡ್ ಮೈನಿಂಗ್ ಕಂಪನಿ,ತುಮಟಿ ಬಳಿಯ ವಿಭೂತಿ ಗುಡ್ಡ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ವೇ ಕೈಗೊಂಡಿದ್ದಾರೆ.ಈ ವೇಳೆ, ಸುಮಾರು 20 ಗಡಿ ಗುರುತು ಪತ್ತೆ ಮಾಡಲಾಗಿದೆ.ಈ ಗುರುತುಗಳಿಗೆ ಜಿಪಿಎಸ್ ಅಳವಡಿಸಿ, ಅವುಗಳ ಆಧಾರದ ಮೇಲೆ ಎಷ್ಟು ಪ್ರಮಾಣದಲ್ಲಿ ಗಡಿ ಒತ್ತುವರಿಯಾಗಿದೆ. ಅಕ್ರಮ ಗಣಿಗಾರಿಕೆ ನಡೆದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ಕಳೆದ ಒಂದು ದಶಕದಿಂದ ವಿವಾದದಲ್ಲಿದ್ದ ಅಂತಾರಾಜ್ಯಗಳ ಗಡಿ ಗುರುತು ಧ್ವಂಸ ಪ್ರಕರಣಕ್ಕೆ ಇದೀಗ ಮರು ಜೀವ ಬಂದಂತಾಗಿದೆ.