ಮಥುರಾ: ಪುರಾಣದಲ್ಲಿ ಪಾತಿವ್ರತ್ಯ ಸಾಬೀತುಪಡಿಸಲು ಅಗ್ನಿ ಪರೀಕ್ಷೆಗೆ ಒಡ್ಡುತ್ತಿದ್ದ ಕಥೆಯನ್ನು ಕೇಳಿದ್ದೀರಿ. ಅದೇ ರೀತಿ ಸೊಸೆ ವ್ಯಭಿಚಾರದಿಂದ ಕೆಟ್ಟುಹೋಗಿದ್ದಾಳೆ ಎಂದು ಶಂಕಿಸಿದ ಅತ್ತೆ, ಪುರಾತನ ಕಾಲದ ಅಗ್ನಿ ಪರೀಕ್ಷೆಯನ್ನು ಸ್ವತಃ ಸೊಸೆಗೆ ಮಾಡಿಸಿದ ಪರಿಣಾಮ ಆಕೆಯ ಎರಡು ಅಂಗೈಗಳು ಸುಟ್ಟುಹೋಗಿರುವ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.
ಘಟನೆಯ ವಿವರ:
ಕಳೆದ ಏಪ್ರಿಲ್ ತಿಂಗಳಿನಲ್ಲಿ ಮಥುರಾದಲ್ಲಿ ಸುಮಾನಿ ಹಾಗು ಜೈವೀರ್ ಸಂಪ್ರದಾಯಬದ್ಧವಾಗಿ ಮದುವೆಯಾಗಿದ್ದರು. ಕುತೂಹಲಕಾರಿ ವಿಷಯ ಏನೆಂದರೆ ಸುಮಾನಿ ಮದುವೆ ದಿನವೇ ಆಕೆಯ ಸಹೋದರಿ ಪುಷ್ಪಾಳನ್ನು ಜೈವೀರ್ ಸಹೋದರ ಯಶ್ ವೀರ್ ಕೂಡಾ ವಿವಾಹವಾಗಿದ್ದ.
ಆದರೆ ಆರು ತಿಂಗಳ ನಂತರ ಸುಮಾನಿ ವ್ಯಭಿಚಾರ ಮಾಡುತ್ತಿದ್ದಾಳೆ ಎಂದು ಅತ್ತೆ ಆರೋಪಿಸತೊಡಗಿದ್ದಳು. ನಂತರ ಮಾಂತ್ರಿಕನೊಬ್ಬನ ಸಲಹೆ ಮೇರೆಗೆ ಸೊಸೆ ಸುಮಾನಿಯನ್ನು ಅಗ್ನಿ ಪರೀಕ್ಷೆಗೆ ಒಡ್ಡಲು ತೀರ್ಮಾನಿಸಿದ್ದರು. ಆಕೆ ಪವಿತ್ರಳಾಗಿದ್ದರೆ ಬೆಂಕಿ ಆಕೆಯ ಕೈಗಳನ್ನು ಸುಡುವುದಿಲ್ಲ ಎಂದು ಹೇಳಿದ್ದ! ಅದರಂತೆ ಬೆಂಕಿ ಕೊಳ್ಳಿಯ ಮೇಲೆ ಸೊಸೆಯ ಎರಡು ಕೈಗಳನ್ನು ಬಲವಂತವಾಗಿ ಇರಿಸಿದ್ದರು. ಬೆಂಕಿಯಿಂದಾಗಿ ಆಕೆಯ ಎರಡು ಕೈಗಳು ಸುಟ್ಟು ಹೋಗಿದ್ದವು.
ತನ್ನ ಮೇಲೆ ಅತ್ತೆ ಅನಾವಶ್ಯಕವಾಗಿ ವ್ಯಭಿಚಾರ ಮಾಡುತ್ತಿರುವುದಾಗಿ ಆರೋಪಿಸಿದ್ದು, ತನಗೆ ಹೊಡೆದು ಹಿಂಸೆ ಕೊಟ್ಟಿರುವುದಾಗಿ ಸುಮಾನಿ ಆರೋಪಿಸಿದ್ದಾಳೆ. ಗಂಡ ಕೂಡಾ ಸುಮಾನಿಗೆ ಹೊಡೆದು, ನೀನು ನನಗೆ ಮೋಸ ಮಾಡಿದ್ದೀಯಾ. ನಿನ್ನ ಕೊಂದು ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ಘಟನೆ ಕುರಿತು ಸುಮಾನಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಈ ವಿಷಯವನ್ನು ಎರಡು ಕುಟುಂಬಗಳು ಪರಸ್ಪರ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಿ ಎಂದು ಪೊಲೀಸರು ತಿಳಿಸಿದ್ದರು.
ಬೆಂಕಿಯಿಂದ ಕೈ ಸುಟ್ಟು ಹೋದ ಘಟನೆ ಬಳಿಕ ಸುಮಾನಿ ಸೊಸೆ ಹಾಗೂ ಇತರ ಆರು ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.