ಉಡುಪಿ : ಶೀರೂರು ಮಠದ ಉತ್ತರಾಧಿಕಾರಿಗಳ ಘೋಷಣೆ ಪ್ರಕ್ರಿಯೆಗೆ ಶ್ರೀ ಶೀರೂರು ಮಠ ಭಕ್ತ ಸಮಿತಿ ವಿರೋಧ ವ್ಯಕ್ತಪಡಿಸಿದ್ದು, ಮಠಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್‌ನಲ್ಲಿರುವಾಗ ಯಾವುದೇ ಚಟುವಟಿಕೆ ಸರಿಯಲ್ಲ ಎಂದು ತಿಳಿಸಿದೆ.
ಮಂಗಳವಾರ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಶೀರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರರು ಈ ಬಗ್ಗೆ ಮಾಹಿತಿ ನೀಡಿದರು.
ಶ್ರೀಗಳು ಕಾಲವಾದ ಬಳಿಕ ಆಸ್ತಿ-ಪಾಸ್ತಿ ವಿಚಾರ, ತೆರಿಗೆ ವಿಚಾರಕ್ಕೆ ಸಂಬಂಧಿಸಿ ಸಾಕಷ್ಟು ತಕರಾರು, ಅಪವಾದಗಳು ಕೇಳಿ ಬಂದಿದ್ದವು. ಈ ಎಲ್ಲ ನೋವುಗಳನ್ನು ಸಹಿಸಿಕೊಂಡಿದ್ದ ನಾವು ಆಸ್ತಿ-ಪಾಸ್ತಿಯ ಪಾರದರ್ಶಕತೆ ನಿಟ್ಟಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಹಾಗಿರುವಾಗ ಯಾವುದೇ ಚಟುವಟಿಕೆ ಸರಿಯಲ್ಲ. ಸೂಕ್ತ ಉತ್ತರಾಧಿಕಾರಿ ಸಿಗದೇ ಹೋದರೆ ಮತ್ತೆ ಕೋರ್ಟ್ ಮೆಟ್ಟಿಲು ಏರುತ್ತೇವೆ ಎಂದು ಎಚ್ಚರಿಸಿದರು.
ಬಾಲ ಸನ್ಯಾಸಕ್ಕೆ ವಿರೋಧ
ಪಿ. ಲಾತವ್ಯ ಆಚಾರ್ಯ ಮಾತನಾಡಿ, ಅಷ್ಟ ಮಠ ಪರಂಪರೆಯಲ್ಲಿ ಬಾಲ ಸನ್ಯಾಸಿ ಸ್ವೀಕಾರ ರದ್ದಾಗಿದೆ. ಅಷ್ಟ ಮಠಗಳಲ್ಲಿ ಒಂದಾದ ಶೀರೂರು ಮಠದ ಕೀರ್ತಿಶೇಷ ಶ್ರೀಲಕ್ಷ್ಮೀ ವರತೀರ್ಥರು ಕಾಲವಾದ ಎರಡೂವರೆ ವರ್ಷಗಳ ಬಳಿಕ ಅಪ್ರಾಪ್ತ ವಯಸ್ಸಿನ ವಟುವನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗುತ್ತಿದೆ. ಮಠಕ್ಕೆ ಪ್ರಬುದ್ಧ ಉತ್ತರಾಧಿಕಾರಿಯ ಅಗತ್ಯವಿದ್ದು, ಈ ಬಾಲ ಸನ್ಯಾಸಿಯ ಸ್ವೀಕಾರಕ್ಕೆ ಮುಂದಾದರೆ ಕೋರ್ಟ್ ಮೆಟ್ಟಿಲು ಏರುವುದು ಅನಿವಾರ್ಯವಾಗುತ್ತದೆ ಎಂದರು.
ಕಳೆದ ಮೂರು ವರ್ಷಗಳ ಹಿಂದೆ ಕೀರ್ತಿಶೇಷ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಕಠಿನ 10 ವರ್ಷ ವೇದಾಂತ ಜ್ಞಾನ ಹಾಗೂ 21 ವರ್ಷ ಪೂರೈಸಿರುವ ಯೋಗ್ಯ ವಟುವನ್ನು ಅಷ್ಟ ಮಠಕ್ಕೆ ಶಿಷ್ಯರಾಗಿ ಸ್ವೀಕರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಈ ಬಗ್ಗೆ ಎಲ್ಲ ಮಠಾಧೀಶರು ಮಾತುಕತೆ ನಡೆಸಿದ್ದರು. ಈಗ ಶಿರೂರು ಮಠಕ್ಕೆ 16, 17 ವರ್ಷದ ಯತಿಯನ್ನು ನಿಯೋಜಿಸುವುದು ಸರಿಯಲ್ಲ ಎಂದು ತಿಳಿಸಿದರು.
ವಾದಿರಾಜ ಆಚಾರ್ಯ ಮಾತನಾಡಿ, 700 ವರ್ಷಗಳಿಗೂ ಮಿಕ್ಕಿ ಇತಿಹಾಸವುಳ್ಳ ಅಷ್ಟ ಮಠಗಳ ಪರಂಪರೆಯಲ್ಲಿ ಶೀರೂರು ಮಠವು ಎರಡೂವರೆ ವರ್ಷಗಳಿಂದ ಮಠಾಧೀಶರಿಲ್ಲದೆ ಖಾಲಿ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಹ್ಲಾದ ಆಚಾರ್ಯ, ಅಕ್ಷೋಬ್ಯ ಆಚಾರ್ಯ ಉಪಸ್ಥಿತರಿದ್ದರು.