ಚಿತ್ರದುರ್ಗ: ಮೃಗಾಲಯ ಪ್ರಾಧಿಕಾರದ ಮನವಿಗೆ ಸ್ಪಂದಿಸಿರುವ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸೋಮವಾರ ಆಡುಮಲ್ಲೇಶ್ವರ ಕಿರು ಮೃಗಾಲಯದ ಕರಡಿಯನ್ನು ದತ್ತು ಸ್ವೀಕರಿಸಿದರು. ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡುವ ಉದ್ದೇಶದಿಂದ ಹಾಗೂ ಚಿತ್ರದುರ್ಗ ಕಿರು ಮೃಗಾಲಯವನ್ನು ಮೇಲ್ದರ್ಜೆಗೇರಿಸುವ ಪ್ರಯತ್ನದ ಭಾಗವಾಗಿ ಪ್ರಾಣಿಗಳನ್ನು ದತ್ತು ಸ್ವೀಕರಿಸಲು ಪ್ರಾಣಿಪ್ರಿಯರಿಗೆ ಆಹ್ವಾನ ನೀಡಲಾಗಿತ್ತು.
ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಇತ್ತೀಚೆಗೆ ಬಂದಿದ್ದ ಮೂರು ಕರಡಿಗಳಲ್ಲಿ ಒಂದನ್ನು ಮಾದಾರ ಚನ್ನಯ್ಯ ಗುರುಪೀಠ ದತ್ತು ಪಡೆದಿದೆ. ಕರಡಿಗೆ ಒಂದು ವರ್ಷದ ಆಹಾರ, ನಿರ್ವಹಣೆ ಹಾಗೂ ವೈದ್ಯಕೀಯ ವೆಚ್ಚ ಸೇರಿ 97 ಸಾವಿರ ರೂ. ಚೆಕ್ ಅನ್ನು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ ಅವರಿಗೆ ಹಸ್ತಾಂತರಿಸಲಾಯಿತು.
ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ಮಾತನಾಡಿ, ಸದ್ಯ ಕಿರು ಮೃಗಾಲಯದಲ್ಲಿ 22 ಪ್ರಭೇದದ ಪ್ರಾಣಿ ಮತ್ತು ಪಕ್ಷಿಗಳಿವೆ. 48 ಪಕ್ಷಿಗಳು ಹಾಗೂ 49 ಪ್ರಾಣಿಗಳು ಆಶ್ರಯ ಪಡೆದಿವೆ. ಮೂರು ಕರಡಿ, ಏಳು ಚಿರತೆಗಳಿವೆ. ಪಕ್ಷಿಗಳ ನಿರ್ವಹಣಾ ವೆಚ್ಚ ಇತರ ಪ್ರಾಣಿಗಳಿಗಿಂತ ಹೆಚ್ಚಾಗಿದೆ. ಕೃಷ್ಣಮೃಗ, ಜಿಂಕೆ, ಮೊಸಳೆ, ನರಿ, ಹೆಬ್ಟಾವು, ಕಾಡುಕೋಳಿ ಸೇರಿ ಹಲವು ವನ್ಯಜೀವಿಗಳನ್ನು ದತ್ತು ನೀಡಲು ಮೃಗಾಲಯ ಸಿದ್ಧವಿದೆ ಎಂದು ತಿಳಿಸಿದರು. ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದರೆ ಆದಾಯ ತೆರಿಗೆಯಿಂದ ವಿನಾಯಿತಿ ಸಿಗಲಿದೆ. ಕುಟುಂಬದ ಐವರು ಸದಸ್ಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತದೆ. ದತ್ತು ಸ್ವೀಕರಿಸಿದವರ ಹೆಸರನ್ನು ಪ್ರಾಣಿಯ ಆವರಣದಲ್ಲಿ ಬಿತ್ತರಿಸಲಾಗುತ್ತದೆ. ಆಮೆ ಮತ್ತು ಮೊಲವನ್ನು ಕೆಲವರು ಈಗಾಗಲೇ ದತ್ತು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಲಾಕ್‌ಡೌನ್ ಘೋಷಣೆಯಾದ ಬಳಿಕ ಪ್ರವಾಸಿ ಚಟುವಟಿಕೆ ಸ್ಥಗಿತಗೊಂಡಿದ್ದು, ಕಳೆದ ಎರಡು ತಿಂಗಳಲ್ಲಿ ಸುಮಾರು 7 ಲಕ್ಷ ರೂ. ನಷ್ಟವಾಗಿದೆ. ವನ್ಯಜೀವಿಗಳ
ನಿರ್ವಹಣೆ ಕಷ್ಟವಾಗುತ್ತಿದೆ. ಪ್ರಾಣಿಪ್ರಿಯರು ದತ್ತು ಪಡೆದರೆ ಆಡುಮಲ್ಲೇಶ್ವರ ಕಿರು ಮೃಗಾಲಯ ಸಶಕ್ತವಾಗಲಿದೆ ಎಂದು ಮೃಗಾಲಯದ ಆರ್‌ಎಫ್‌ಒ ವಸಂತಕುಮಾರ್ ತಿಳಿಸಿದರು. ಎಸಿಫ್ ರಾಘವೇಂದ್ರ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಎಸ್. ನವೀನ್, ಸಂಸದರ ಆಪ್ತ ಸಹಾಯಕ ಮೋಹನ್, ಷಣ್ಮುಖ ಇದ್ದರು.
ಮೃಗಾಲಯ ಅಭಿವೃದ್ಧಿಗೆ ವಾರ್ಷಿಕ 115 ಕೋಟಿ ಅನುದಾನ ಬೇಕು ಕೋವಿಡ್ ಸೋಂಕು ಕಾಣಿಸಿಕೊಂಡ ಬಳಿಕ ಪ್ರವಾಸೋದ್ಯಮ ಸ್ಥಗಿತಗೊಂಡಿತು. ಇದರಿಂದ ರಾಜ್ಯದ 9 ಮೃಗಾಲಯ ಸಂಕಷ್ಟಕ್ಕೆ ಸಿಲುಕಿವೆ. ಮೃಗಾಲಯಗಳ ಅಭಿವೃದ್ಧಿಗೆ ವಾರ್ಷಿಕ 115 ಕೋಟಿ ರೂ. ಅನುದಾನದ ಅಗತ್ಯವಿದೆ. ಪ್ರಸಕ್ತ ವರ್ಷ ಅಂದಾಜು 60 ಕೋಟಿ ರೂ. ಅನುದಾನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಪ್ರಾಣಿಗಳನ್ನು ದತ್ತು ಸ್ವೀಕರಿಸಿದರೆ ಅನುಕೂಲವಾಗುತ್ತದೆ ಎಂದು ಬಿ.ಪಿ.
ರವಿ ಮನವಿ ಮಾಡಿದರು. ಮೃಗಾಲಯಗಳನ್ನು ತೆರೆಯಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ
ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲಾಗುವುದು. ಎಲ್ಲವೂ ಸಹಜ ಸ್ಥಿತಿಗೆ ಬರಲು ಇನ್ನೂ ಕಾಲಾವಕಾಶ ಹಿಡಿಯಲಿದೆ ಎಂದರು.