Advertisement

ಅಳವಂಡಿ ಸಿದ್ದೇಶ್ವರ ಮಠಕ್ಕೆ ಪರ್ಯಾಯ ಪಟ್ಟದ ಚಿಂತನೆ

01:30 AM Jan 03, 2019 | |

ಕೊಪ್ಪಳ: ತಾಲೂಕಿನ ಅಳವಂಡಿಯ ಸಿದ್ದೇಶ್ವರ ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿ ಪೀಠತ್ಯಾಗ ಮಾಡಿ ತೆರಳಿದ ಹಿನ್ನೆಲೆಯಲ್ಲಿ ಬುಧವಾರ ಮಠದ ಮುಖ್ಯಸ್ಥರು ಹಾಗೂ ಗ್ರಾಮದ ಹಿರಿಯರ ಮಧ್ಯಸ್ಥಿಕೆಯಲ್ಲಿ ಅಧಿಕೃತ ಸಭೆ ನಡೆಸಿ ಪರ್ಯಾಯ ವ್ಯವಸ್ಥೆಗಳ ಕುರಿತು ಚರ್ಚೆ ನಡೆಸಿದ್ದಾರೆ.

Advertisement

13 ವರ್ಷಗಳಿಂದ ಪಟ್ಟಾಧಿಕಾರ ನೀಡಿದ್ದರೂ ಸ್ವಾಮೀಜಿ ಗ್ರಾಮದ ದೈವದ ಜನರಿಗೆ ಹೇಳದೆ ತೆರಳಿದ್ದು ಸರಿಯಲ್ಲ. ಮಠಕ್ಕೆ ಪಟ್ಟಾಧಿಕಾರ ಮಾಡುವ ವೇಳೆ ಗ್ರಾಮದ ಜನರು ಬೇಕು, ಆದರೆ ಇಂತಹ ಸಮಸ್ಯೆ ಉದ್ಭವಿಸಿದಾಗ ಮಠದಲ್ಲಿನ ಸ್ವಾಮೀಜಿಗಳು ಗ್ರಾಮದ ಜನರನ್ನು ಕರೆಯುವುದಿಲ್ಲ ಎಂದು  ಕೆಲವರು ಅಸಮಾಧಾನ ಹೊರ ಹಾಕಿದ್ದಾರೆ.

ಪೀಠತ್ಯಾಗ ಮಾಡಿ ಸ್ವಾಮೀಜಿ ಎಲ್ಲಿ ಹೋಗಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಿಲ್ಲ. ಮುಂದೆ ಮಠದಲ್ಲಿ ಪರ್ಯಾಯ ವ್ಯವಸ್ಥೆ ಏನು ಮಾಡಬೇಕು ಎನ್ನುವ ಕುರಿತು ಚರ್ಚೆ ಮಾಡಬೇಕೆಂದು ಗ್ರಾಮದ ಹಿರಿಯರು ಮಠದ ಸ್ವಾಮೀಜಿಗಳ ಕುಟುಂಬಕ್ಕೆ ತಿಳಿಸಿದ್ದಾರೆ.

ಉಜ್ಜಯಿನಿ ಶ್ರೀ ನೇತೃತ್ವದಲ್ಲಿ ಜಾತ್ರೆ: ಮಠದಲ್ಲಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಸಾಮೂಹಿಕ ಕಾರ್ಯಕ್ರಮ, ಜಾತ್ರಾ ಮಹೋತ್ಸವ ನಡೆಯಲಿದೆ. ಈ ಮಠ ಉಜ್ಜಯಿನಿ ಶಾಖಾ ಮಠವಾಗಿದ್ದರಿಂದ ಉಜ್ಜಯಿನಿ ಮಠದ ಶ್ರೀಗಳನ್ನೇ ಕರೆ ತಂದು ಜಾತ್ರೆ ಮಾಡೋಣವೆಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಗ್ರಾಮದ ಹಿರಿಯರು ಯಾರನ್ನು ನಿರ್ಣಯ ಮಾಡುತ್ತಾರೋ ಅವರನ್ನು ಕರೆ ತಂದು ಜಾತ್ರಾ ಮಹೋತ್ಸವ ಮಾಡೋಣ ಎನ್ನುವ ಚರ್ಚೆ ನಡೆದವು. ಆದರೆ, ಉಜ್ಜಯಿನಿ ಶ್ರೀಗಳ ಮುಖ್ಯಸ್ಥಿಕೆಯಲ್ಲಿಯೇ ಎಲ್ಲವನ್ನೂ ಮಾಡೋಣ ಎನ್ನುವ ಅಭಿಪ್ರಾಯ ವ್ಯಕ್ತವಾದವು.

ಹೊಸ ಸ್ವಾಮೀಜಿಗೆ ಹುಡುಕಾಟ?: ಸದ್ಯಕ್ಕೆ ಮಠಕ್ಕೆ ಹೊಸಬರನ್ನು ಪಟ್ಟಕ್ಕೇರಿಸಬೇಕೆನ್ನುವ ಚರ್ಚೆ ನಡೆದ ವೇಳೆ ಕೆಲವರು ಮಠಕ್ಕೆ ಸ್ವಾಮೀಜಿ ಪಟ್ಟಕ್ಕೇರಿಸುವ ಅಧಿಕಾರ ಗ್ರಾಮದ ಹಿರಿಯರಿಗೆ ಬಿಡಬೇಕು ಎಂದರೆ, ಇನ್ನೂ ಕೆಲವರು ಉಜ್ಜಯಿನಿ ಶ್ರೀಗಳು ಮಾಡಬೇಕೆಂದರೆ, ಇನ್ನೂ ಕೆಲವರು ಮಠದ ವ್ಯಾಪ್ತಿಯಲ್ಲಿಯೇ ಈ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಬೇಕು ಎನ್ನುವ ಮಾತು ವ್ಯಕ್ತವಾದವು.

Advertisement

ಹಳೇ ಟ್ರಸ್ಟ್‌ಗಳ ಅಧಿಕಾರ ಮೊಟಕು:  ಪ್ರಸ್ತುತ ಮಠದ ಅಧೀನದಲ್ಲಿ ಎರಡು ಟ್ರಸ್ಟ್‌ಗಳು ನಡೆಯುತ್ತಿವೆ. ಆ ಟ್ರಸ್ಟ್‌ನಲ್ಲಿರುವ ಎಲ್ಲ ಸದಸ್ಯರ ಅಧಿಕಾರ ಮೊಟಕುಗೊಳಿಸಬೇಕು. ಅಲ್ಲದೇ 2 ಟ್ರಸ್ಟ್‌ಗಳನ್ನು ರದ್ದು ಪಡಿಸಬೇಕು. ಹೊಸ ಟ್ರಸ್ಟ್‌ ರಚನೆ ಮಾಡಿ ಅದಕ್ಕೆ ಯಾರನ್ನು ನೇಮಕ ಮಾಡಬೇಕು, ಹೇಗೆ ನೇಮಕ ಮಾಡಬೇಕು ಎನ್ನುವುದನ್ನು ಹಿರಿಯರು ಚಿಂತನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದರು.

ಪೀಠ ತ್ಯಾಗ ಮಾಡಿದ ಸ್ವಾಮಿ ತಾಯಿ ಅಸ್ವಸ್ಥ
ಅಳವಂಡಿಯ ಸಿದ್ಧಲಿಂಗ ಸ್ವಾಮಿ ಅವರು ದಿಢೀರ್‌ ಪೀಠತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಗುಸುಗುಸು ಸುದ್ದಿ ಜೋರಾಗುತ್ತಿದ್ದಂತೆ, ಸ್ವಾಮೀಜಿ ತಾಯಿ ಲಲಿತಾ ಅವರು ಮನನೊಂದು ತೀವ್ರ ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ವಾಭಿಮಾನದಿಂದ ನೊಂದ ಈ ಮಹಿಳೆ  ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ ಎನ್ನುವ ಮಾತುಗಳೂ  ಕೇಳಿ ಬಂದಿದ್ದು, ಸದ್ಯ ಅವರನ್ನು ಗದಗ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಿದ್ದಲಿಂಗ ಸ್ವಾಮೀಜಿ ಅವರು ಏಕಾಏಕಿ ಪೀಠತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮದ ಮುಖ್ಯಸ್ಥರು ಮಠದ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿದ್ದು, ಜ. 3ರಂದು ಮಠದಲ್ಲಿಯೇ ಸುದ್ದಿಗೋಷ್ಠಿ ನಡೆಸಿ ನಿರ್ಣಯ ಕೈಗೊಳ್ಳುವ ಕುರಿತು ಪ್ರಸ್ತಾಪಿಸುವ ಮಾತು ಕೇಳಿ ಬಂದಿದೆ.

ಸಭೆಯಲ್ಲಿ ಮಠದ ಕುಟುಂಬಸ್ಥರಾದ ಗುರುಮೂರ್ತಿ ಸ್ವಾಮಿ ಇನಾಮದಾರ್‌, ರೇವಣಸಿದ್ದೇಶ್ವರ ಸ್ವಾಮಿ, ಜಗನ್ನಾಥ ಸ್ವಾಮಿ, ಭುಜಂಗಸ್ವಾಮಿ, ವಿಜಯಕುಮಾರ ಸ್ವಾಮಿ ಸೇರಿದಂತೆ ಗ್ರಾಮದ ಮುಖಂಡರಾದ ನಾಗಪ್ಪ ಮಾಸ್ತರ ಸವಡಿ, ಹನುಮಂತಗೌಡ ಗಾಳಿ, ಗುರುಬಸವರಾಜ ಹಳ್ಳಿಕೇರಿ, ಮಂಜುನಾಥ ಹಿರೇಮಠ, ಮಂಜುನಾಥ ಬೆದವಟ್ಟಿ, ದೇವಪ್ಪ ಕಟ್ಟಿಮನಿ, ಬಸವರಾಜ ಗದ್ದಿಗೇರಿ, ಶಂಕ್ರಪ್ಪ ಕಲಾದಗಿ, ಚೌಡಪ್ಪ ಜಂತ್ಲಿ, ರಾಘವೇಂದ್ರ ಇಮ್ಮಡಿ, ವಸಂತರಡ್ಡಿ ಗದ್ದಿಗೇರಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next